ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು (Aluru Mallu) ಅವರಿಗೆ ಬಿಜೆಪಿ ಅಭ್ಯರ್ಥಿ, ಸಚಿವ ವಿ. ಸೋಮಣ್ಣ (V Somanna) ಅವರು ಕರೆ ಮಾಡಿ ಈ ಚುನಾವಣೆಗೆ (Karnataka Election 2023) ಸಲ್ಲಿಸಿರುವ ನಾಮಪತ್ರವನ್ನು ವಾಪಸ್ ಪಡೆಯಲು 50 ಲಕ್ಷ ರೂಪಾಯಿ ಹಣ ನೀಡುವ ಆಮಿಷವೊಡ್ಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಸೋಮಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಾಮಪತ್ರ ಹಿಂಪಡೆಯುವಂತೆ ಸಚಿವ ಸೋಮಣ್ಣ ಅವರು ಜೆಡಿಎಸ್ ಅಭ್ಯರ್ಥಿಗೆ ಆಮಿಷ ಒಡ್ಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗುತ್ತಿದ್ದಂತೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಿಂದ ದೂರು ದಾಖಲಾಗಿತ್ತು. ಸೋಮಣ್ಣ, ನಟರಾಜ್, ಸುದೀಪ್ ಎಂಬುವವರ ವಿರುದ್ಧ ಅಧಿಕಾರಿಗಳು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್‌ಐಆರ್ ಅನ್ನು ದಾಖಲು ಮಾಡಲಾಗಿತ್ತು. ಐಪಿಸಿ ಸೆಕ್ಷನ್ 1860 (u/s 171E, 171F) ರ ಪ್ರಕಾರ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಲಿಸಲಾಗಿದೆ.
ಇದನ್ನೂ ಓದಿ: Karnataka Election 2023: ಕಾಂಗ್ರೆಸ್ ಪೇಯ್ಡ್ ಎಂಜಿನ್ ಬಿಡಿ, ಬಿಜೆಪಿ ಡಬಲ್ ಎಂಜಿನ್ ಕೈಹಿಡಿಯಿರಿ: ಯೋಗಿ ಆದಿತ್ಯನಾಥ ಕರೆ
ಸೋಮಣ್ಣಗೆ ಅನರ್ಹ ಭೀತಿ
ಹಣದ ಆಮಿಷ ಒಡ್ಡಿರುವುದು ಸಾಬೀತಾದರೆ ಸೋಮಣ್ಣ ಅವರ ಸ್ಪರ್ಧೆಯಿಂದ ಅನರ್ಹವಾಗುವ ಸಾಧ್ಯತೆ ಇದೆ. ಅಲ್ಲದೆ, ಕ್ಷೇತ್ರದ ಚುನಾವಣೆಯೂ ರದ್ದಾಗುವ ಸಾಧ್ಯತೆಗಳೂ ಸಹ ಇವೆ ಎಂದು ಹೇಳಲಾಗುತ್ತದೆ. ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123 ಅಡಿಯಲ್ಲಿ ಚುನಾವಣಾ ರದ್ದುಗೊಳಿಸಲು ಅವಕಾಶವಿದೆ.
ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಹೇಳಿದ್ದೇನು?
ನಾಮಪತ್ರ ವಾಪಸ್ ಪಡೆಯಲು ಕೇವಲ ಒಂದು ಗಂಟೆ ಅಷ್ಟೇ ಬಾಕಿ ಇತ್ತು. ಆಗ (ಸೋಮಣ್ಣ) ಕಾಲ್ ಮಾಡಿದ್ರು. ನೀನು ನಾಮಪತ್ರ ವಾಪಸ್ ತೆಗಿ. ನಿನಗೆ ನಿಗಮ ಮಂಡಳಿ ಕೊಡ್ತೀನಿ. 50 ಲಕ್ಷ ದುಡ್ಡು ಕೂಡ ಕೊಡ್ತೀನಿ ಅಂತ ಹೇಳಿದ್ದು ನಿಜ. ಇವಾಗ ಬೇಗ ನೀನು ನಾಮಪತ್ರ ತೆಗಿ ಎಂದು ಒರಟು ಭಾಷೆಯಲ್ಲಿ ಮಾತನಾಡಿದರು. ಅದು ನನಗೆ ನೋವಾಯಿತು. ಸೋಮಣ್ಣ ಸೋಲುವ ಭಯದಿಂದ ನನಗೆ ಹಣದ ಆಮಿಷ ಒಡ್ಡಿದರು ಎಂದು ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಆರೋಪಿಸಿದ್ದರು.
ಇದನ್ನೂ ಓದಿ: Karnataka Election 2023: ಶೀಘ್ರವೇ ನನಗೆ ಬೈಯುವುದರಲ್ಲಿ ಕಾಂಗ್ರೆಸಿಗರು ಶತಕ ಬಾರಿಸಲಿದ್ದಾರೆ; ಪ್ರಧಾನಿ ಮೋದಿ
ಆಯೋಗಕ್ಕೆ ದೂರು ನೀಡಿದ್ದ ವಂದೇ ಮಾತರಂ ಸಮಾಜ ಸೇವಾ ಸಂಘಟನೆ
ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲು ಅವರಿಗೆ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಹಣದ ಆಮಿಷವೊಡ್ಡಿದ ಆಡಿಯೊ ವೈರಲ್ ಆದ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು. ವಂದೇ ಮಾತರಂ ಸಮಾಜ ಸೇವಾ ಸಂಘಟನೆಯ ಅಧ್ಯಕ್ಷ ಸಿ.ಎಂ. ಶಿವಕುಮಾರ್ ನಾಯಕ್ ಎಂಬುವವರು ಈ ದೂರು ನೀಡಿದ್ದಾರೆ. ಮತ್ತೊಂದೆಡೆ, ವಿ. ಸೋಮಣ್ಣ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳು ದೂರು ದಾಖಲಿಸಿವೆ.