Site icon Vistara News

HD Kumaraswamy: ಎಚ್‌ಡಿಕೆ ಬಗ್ಗೆ ಆಕ್ಷೇಪಾರ್ಹ ಪೋಸ್ಟರ್‌; ಎಫ್‌ಐಆರ್‌ ದಾಖಲು

HD kumaraswamy

ಬೆಂಗಳೂರು: ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಕುರಿತ ಆಕ್ಷೇಪಾರ್ಹ ಪೋಸ್ಟರ್‌ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಅವರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್‌ ಸಂಪರ್ಕ ಪಡೆದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಬೆಸ್ಕಾಂ ಜಾಗೃತ ದಳ ಪ್ರಕರಣ ದಾಖಲಿಸಿಕೊಂಡಿತ್ತು. ಹೀಗಾಗಿ ಮಾಜಿ ಸಿಎಂ ಅವರನ್ನು ವ್ಯಂಗ್ಯವಾಡಲು, ಮಂಗಳವಾರ ರಾತ್ರಿ ಜೆಡಿಎಸ್ ಕಚೇರಿ ಜೆ.ಪಿ. ಭವನದ ಗೋಡೆಗಳ ಮೇಲೆ ಕಿಡಿಗೇಡಿಗಳು ʼವಿದ್ಯುತ್‌ ಕಳ್ಳ ಕುಮಾರಸ್ವಾಮಿʼ ಎಂದು ಪೋಸ್ಟರ್‌ ಅಂಟಿಸಿದ್ದರು. ಆದ್ದರಿಂದ ಈ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಜೆಡಿಎಸ್‌ ಕಾರ್ಯಕರ್ತರು ಆಗ್ರಹಿಸಿದ್ದರು.

ಇದನ್ನೂ ಓದಿ | HD Kumaraswamy : ಎಚ್‌.ಡಿ. ಕುಮಾರಸ್ವಾಮಿ ಮಾತು ನಂಬಲು ನಾನು ದಡ್ಡನೇ?: ಡಿ.ಕೆ. ಶಿವಕುಮಾರ್

ನ.14ರಂದು ರಾತ್ರಿ ಆಟೋ ರಿಕ್ಷಾದಲ್ಲಿ ನಾಲ್ವರು ಕಿಡಿಗೇಡಿಗಳು ಜೆಡಿಎಸ್‌ ಕಚೇರಿಗೆ ಅತಿ ಕ್ರಮಣ ಪ್ರವೇಶ ಮಾಡಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮಾನ ಹಾನಿಕಾರಕ ಪೋಸ್ಟರ್‌ಗಳನ್ನು ಅಂಟಿಸಿ, ಜೆಡಿಎಸ್ ಪಕ್ಷ ಮತ್ತು ನಾಯಕರ ವಿರುದ್ಧ ಅವಾಚ್ಯ ಶಬ್ದಗಳಿಂದ ಘೋಷಣೆ ಕೂಗಿದ್ದಾರೆ. ಭದ್ರತಾ ಸಿಬ್ಬಂದಿ ತಡೆಯಲು ಹೋದಾಗ ಅವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ. ಹಾಗೆಯೇ ಬಿಂದು ಮತ್ತು ಮತ್ತು ನವೀನ್ ಗೌಡ ಎಂಬುವವರು ಸಾಮಾಜಿಕ ಜಾಲ ತಾಣದಲ್ಲಿ, ಜೆಡಿಎಸ್ ಕಾರ್ಯಕರ್ತರನ್ನು ಅವಹೇಳನ, ಕೆರಳಿಸುವ ರೀತಿಯಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್‌ ಎಂದರೆ ಕಳ್ಳಕಳ್ಳವಾಗಿ ಪೋಸ್ಟರ್‌ ಅಂಟಿಸುವ ಶಿಖಂಡಿ ಪಕ್ಷ; ಜೆಡಿಎಸ್‌ ತಿರುಗೇಟು

ಬೆಂಗಳೂರು: ವಿದ್ಯುತ್‌ ಕಳವು (Theft of electricity) ಆರೋಪದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ (HD Kumarswamy) ಅವರ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ಮಂಗಳವಾರ ರಾತ್ರಿ ʼಕರೆಂಟ್‌ ಕಳ್ಳ ಕುಮಾರಸ್ವಾಮಿʼ, ʼವಿದ್ಯುತ್‌ ಕಳ್ಳ ಕುಮಾರಸ್ವಾಮಿʼ ಎನ್ನುವ ಬರಹವುಳ್ಳ ಅವಹೇಳನಕಾರಿ ಪೋಸ್ಟರ್‌ ಅನ್ನು ಕಾಂಗ್ರೆಸ್‌ ಕಾರ್ಯಕರ್ತರು (Congress Party workers) ಅಂಟಿಸಿದ್ದರು. ಈಗ ಇದರ ವಿರುದ್ಧ ತಿರುಗಿಬಿದ್ದಿರುವ ಜೆಡಿಎಸ್‌, ಕಾಂಗ್ರೆಸ್‌ ಪಕ್ಷವನ್ನು (Karnataka Congress) ಶಿಖಂಡಿ ಪಕ್ಷ ಎಂದು ಹೀಗಳೆದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಿಡಿಕಾರಿರುವ ಜೆಡಿಎಸ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: Actor Darshan : ವೈದ್ಯೆಗೆ ನಾಯಿ ಕಚ್ಚಿದ ಪ್ರಕರಣ; ವಿಚಾರಣೆಗೆ ನಟ ದರ್ಶನ್‌ ಹಾಜರ್‌

ಕೊಳಕು ಮಂಡಲ ಕಾಂಗ್ರೆಸ್ ಪಕ್ಷಕ್ಕೆ ಅರ್ಜೆಂಟಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ತುರ್ತು ಇತ್ತು. ಕಳೆದೊಂದು ವಾರದಿಂದ ಕುಮಾರಸ್ವಾಮಿ ಅವರು ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗೆ ಕೈ ಪಡೆ ಪತರಗುಟ್ಟಿ ಹೋಗಿತ್ತು. ಅವರ ಭಾನುವಾರದ ಮಾಧ್ಯಮಗೋಷ್ಠಿ ಒಂದರಿಂದಲೇ ಅದರ ನವರಂಧ್ರಗಳು ಆಸ್ಫೋಟಗೊಂಡಿವೆ ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ.

ಶಿಖಂಡಿ ಸ್ಥಿತಿಯಲ್ಲಿ ಕಾಂಗ್ರೆಸ್

ಕಾಂಗ್ರೆಸ್ ಈಗ ತನ್ನ ಮಾರಿ ಉಳಿಸಿಕೊಳ್ಳಲು ಕರೆಂಟ್ ವೈರ್ ಮೊರೆ ಹೋಗಿದೆ. ಗ್ಯಾರಂಟಿಗಳ ವೈಫಲ್ಯಕ್ಕೆ ದಿನ ಬೆಳಗಾದರೆ ಜನರಿಂದ ಕ್ಯಾಕರಿ ಉಗಿಸಿಕೊಳ್ಳುತ್ತಿರುವ ಆ ಪಕ್ಷ, ದಿಕ್ಕಿಲ್ಲದೆ ಅಪಾಯಕಾರಿ ಕರೆಂಟ್ ವೈರ್ ಹಿಡಿದುಬಿಟ್ಟಿದೆ. ದರಬೇಸಿ ಕಾಂಗ್ರೆಸ್ಸಿಗೆ ದಾರಿ ಕಾಣುತ್ತಿಲ್ಲ. ಉತ್ತರಪ್ರದೇಶದಲ್ಲಿ ಮೂರಂಕಿಗೆ ಕುಸಿದಿತ್ತು. ತೆಲಂಗಾಣ ಸೇರಿ 5 ರಾಜ್ಯಗಳಲ್ಲಿ ಏದುಸಿರು ಬಿಡುತ್ತಿದೆ. ವಿಕಾರ, ವಿಕೃತಿಗೆ ತುತ್ತಾಗಿ ಕತ್ತಲಾದ ಮೇಲೆ ಗೋಡೆ ಮೇಲೆ ಕಳ್ಳಕಳ್ಳವಾಗಿ ಪೋಸ್ಟರ್‌ ಅಂಟಿಸುವ ‘ಶಿಖಂಡಿ’ ಸ್ಥಿತಿಗೆ ಬಂದಿದೆ. ಪಾಪ, ಆ ಪಕ್ಷ ಭೂಗಳ್ಳ, ಕಲ್ಲುಕಳ್ಳ, ಕೊತ್ವಾಲನ ಶಿಷ್ಯನ ಕೈಗೆ ಸಿಕ್ಕಿ ಹುಚ್ಚುನಾಯಿಯಂತೆ ಒದ್ದಾಡುತ್ತಿದೆ ಎಂದು ಜೆಡಿಎಸ್‌ ಆಕ್ರೋಶವನ್ನು ಹೊರಹಾಕಿದೆ.

ಪುಡಿರೌಡಿ ಕಿಡಿಗೇಡಿಕುಮಾರ

ಎಚ್.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್‌ ವಿಕೃತಿ ಮಿತಿಮೀರಿದೆ. ಬೆಸ್ಕಾಂ ವಿದ್ಯುತ್‌ ವೇಗದಲ್ಲಿ ಎಫ್‌ಐಆರ್‌ ದಾಖಲಿಸಿದೆ. ಕುಮಾರಸ್ವಾಮಿ ಅವರು ತಿಹಾರ್ ಜೈಲಿಗೆ ಹೋಗುವ ತಪ್ಪೇನೂ ಮಾಡಿಲ್ಲ. ಇ.ಡಿ, ಸಿಬಿಐ, ಐಟಿ ಎಚ್‌ಡಿಕೆ ಬೆನ್ನು ಹತ್ತಿಲ್ಲ. ಪುಡಿರೌಡಿ ‘ಕಿಡಿಗೇಡಿಕುಮಾರ’ನ ಕೈಚಳಕಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್‌ ಕುಟುಕಿದೆ.

ಕರೆಂಟ್‌ ವೈರ್‌ ಹಿಡಿದು ಕೆಟ್ಟ ಕಾಂಗ್ರೆಸ್‌

ರಾಜ್ಯವನ್ನೇ ಗುಡಿಸಿ ಗಂಡಾಂತರಿಸಿ ತಿಪ್ಪೆ ಸಾರಿಸಿರುವುದು ಲಜ್ಜೆಗೇಡಿ ಕಾಂಗ್ರೆಸ್. YstTax, SstTax, ಕಾಸಿಗಾಗಿ ಪೋಸ್ಟಿಂಗ್, ಸಿಎಂ ಕಚೇರಿಲಿ ಸುಲಿಗೆ, ಗುತ್ತಿಗೆದಾರರಿಂದ ಪರ್ಸಂಟೇಜ್, ಸ್ಟಾನ್ಲಿ ಸೋಫಾ-ಮಂಚ, ಹ್ಯುಬ್ಲೋಟ್ ವಾಚ್‌, ಒಂದಾ ಎರಡಾ? ಐಷಾರಾಮಯ್ಯನ ಮುಖ ಉಳಿಸಲು ಕರೆಂಟ್‌ ವೈರ್‌ ಹಿಡಿದು ಕೆಟ್ಟಿದೆ ಗುಜರಿ ಶಾಪ್ ಕಾಂಗ್ರೆಸ್! ಎಂದು ಜೆಡಿಎಸ್ ತಿರುಗೇಟು ಕೊಟ್ಟಿದೆ.

ಇನೊಬ್ಬರು ಹೇಳಿದ್ದನ್ನು ತಿರುಚಿ ವಕ್ರೀಕರಿಸುವ ‘ವಿಕೃತಿ ವಿಕಾರಪೀಡಿತʼ ಕಾಂಗ್ರೆಸ್ಸಿಗೆ, ಮಾಜಿ ಸಿಎಂ ಸ್ಪಷ್ಟನೆಗಿಂತ ನೀತಿಗೆಟ್ಟ ರಾಜಕಾರಣದಲ್ಲೇ ಹೆಚ್ಚು ನಂಬಿಕೆ. ಅದೇ ಅದರ ಧರ್ಮ. ಕಂಡ ಕಂಡವರ ಭೂಮಿಗೆ ಬೇಲಿ ಹಾಕುವ ‘ಕಿಡಿಗೇಡಿಕುಮಾರ’ನ ಪರ ಬ್ಯಾಟಿಂಗ್ ಬೀಸಿದ್ದು ಬಿಟ್ಟರೆ ಕೊಳಕುಮಂಡಲ ಕಾಂಗ್ರೆಸ್ ಕನ್ನಡಿಗರಿಗಾಗಿ ಕಿಸಿದಿದ್ದೇನೂ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾಲೆಳೆದಿದೆ ಜೆಡಿಎಸ್.

ಕಾಂಗ್ರೆಸ್ ನಿಂದ ಶಕುನಿ ಯುದ್ಧ

ಹಳ್ಳ ಹಿಡಿದ ಗ್ಯಾರಂಟಿಗಳು ಕಾಂಗ್ರೆಸ್ಸಿನಲ್ಲಿ ಹಾಲಾಹಲವನ್ನೇ ಸೃಷ್ಟಿಸಿವೆ ಎನ್ನುವುದಕ್ಕೆ ಕುಮಾರಸ್ವಾಮಿ ಅವರ ಮನೆಯ ಕರೆಂಟ್‌ ವೈರ್‌ ಕೊಟ್ಟ ಶಾಕೇ ಸಾಕ್ಷಿ. ರಾಜಕೀಯವಾಗಿ ಅವರನ್ನು ಎದುರಿಸಲಾಗದ ನರಸತ್ತ ಪಕ್ಷ, ಕರೆಂಟ್ ವೈರ್ ಹಿಡಿದು ‘ಶಕುನಿ ಯುದ್ಧ’ ಆರಂಭಿಸಿದೆ. ಯುದ್ಧಕ್ಕೆ ನಾವೂ ಸಿದ್ಧರಿದ್ದೇವೆ ಎಂದು ಜೆಡಿಎಸ್ ಸವಾಲು ಹಾಕಿದೆ.

ಇದನ್ನೂ ಓದಿ: Karnataka Politics : ಕಾಂಗ್ರೆಸ್‌ ಸೇರಿದ ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು; ಕೋಮುವಾದಿ ಜನತಾ ದಳವೆಂದ ಸಿಎಂ

ವೈರಿನಲ್ಲಿಯೂ ನರಿ ರಾಜಕೀಯ

ಕಂಬದ ಕರೆಂಟಿನ ಬಗ್ಗೆ ಕಾಂಗ್ರೆಸ್ ಈ ಪರಿ ಕೈಕೈ ಹಿಚುಕಿಕೊಳ್ಳುತ್ತಿರುವುದನ್ನು ನೋಡಿದರೆ ವೈರಿನಲ್ಲಿಯೂ ನರಿ ರಾಜಕೀಯ ದಿಟವೆನಿಸುತ್ತದೆ. ಕುಮಾರಸ್ವಾಮಿ ಅವರ ಒಂದೇ ಒಂದು ಕ್ಷಿಪಣಿ ಸಾಕು, ಕಾಂಗ್ರೆಸ್ ‌’ರಕ್ಕಸ ರಿಪಬ್ಲಿಕ್’ ಉಡೀಸ್ ಆಗಲಿಕ್ಕೆ. ಶಿಖಂಡಿ ಅಂತ್ಯಕಾಲ ಆರಂಭವಾಗಿದೆ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version