ಬೆಂಗಳೂರು: ಕೊಡಿಗೆಹಳ್ಳಿ ಪೊಲೀಸ್ ಠಾಣೆ ಮುಂಭಾಗ ಸೀಜ್ ಮಾಡಿ ನಿಲ್ಲಿಸಲಾಗಿದ್ದ ಬೈಕುಗಳು (Bengaluru Fire Accident) ಹೊತ್ತಿ ಉರಿದಿವೆ. ಅಗ್ನಿ ಅವಘಡದಿಂದಾಗಿ ಸುಮಾರು 20ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟುಕಾರಕಲಾಗಿವೆ. 50ರಿಂದ 60 ಬೈಕ್‌ಗಳು ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಬೂದಿಯಾಗಿವೆ.
ಮೊದಲಿಗೆ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದು ಬಳಿಕ ಕ್ಷಣಾರ್ಧದಲ್ಲಿ ಬೈಕ್‌ಗಳಿಗೂ ಬೆಂಕಿ ಆವರಿಸಿಕೊಂಡಿದೆ. ಠಾಣಾ ಹೊರಗಿನ ಖಾಲಿ ಜಾಗದಲ್ಲಿ ಅವಘಡ ಸಂಭವಿಸಿದ್ದರಿಂದ ಹಾಗೂ ಜನರು ಓಡಾಟ ಕಡಿಮೆ ಇದ್ದ ಕಾರಣದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ನಿರತರಾಗಿದ್ದರು.
2002 ರಿಂದ 2017ರ ತನಕ ವಿವಿಧ ಪ್ರಕರಣದಲ್ಲಿ ಸೀಜ್ ಮಾಡಿದ್ದ ಬೈಕ್‌ಗಳು ಇದಾಗಿದ್ದು, 20 ವರ್ಷ ಕಳೆದರೂ ಧೂಳು ಹಿಡಿದಿದ್ದ ಬೈಕ್‌ಗಳನ್ನು ಪೊಲೀಸರು ವಿಲೇವಾರಿ ಮಾಡಿಲ್ಲ. ಬಿಬಿಎಂಪಿ ಜಾಗದಲ್ಲಿ ಸೀಜ್ ಮಾಡಿದ ವಾಹನಗಳನ್ನು ನಿಲ್ಲಿಸಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಕೂಡ ಸೀಜ್ ಮಾಡಿದ್ದ ವಾಹನ ಪಕ್ಕದಲ್ಲೇ ಬೆಂಕಿ ಅವಘಡ ನಡೆದಿತ್ತು. ಇಷ್ಟಾದರೂ ಎಚ್ಚೆತ್ತುಕೊಳ್ಳದೆ ಇರುವುದೇ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಈ ಪ್ರಕರಣದಿಂದ ನುಣಿಚಿಕೊಳ್ಳುತ್ತಿರುವ ಪೊಲೀಸರು, ಬೆಸ್ಕಾಂ ಕಡೆ ಬೆರಳು ತೋರುತ್ತಿದ್ದಾರೆ. ಘಟನೆ ನಡೆದ ಸ್ಥಳದ ಪಕ್ಕದಲ್ಲಿ 5ಕ್ಕೂ ಹೆಚ್ಚು ಶೆಡ್‌ಗಳು ಇದ್ದು ಅದೃಷ್ಟವಶಾತ್ ಬೆಂಕಿ ತಗುಲಿಲ್ಲ.
ಟಯರ್ ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಗ್ನಿ ಅವಘಡ ಮುಂದುವರಿದಿದ್ದು, ಕೆಆರ್‌ಎಸ್ ಮುಖ್ಯ ರಸ್ತೆಯ ಬೆಳವಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬಲರಾಮ್ ಟೈಯರ್ಸ್ ಕಾರ್ಖಾನೆಯಲ್ಲಿ ಅಗ್ನಿಅವಘಡ ಸಂಭಿಸಿದೆ. ಆಕಸ್ಮಿಕ ಬೆಂಕಿಯಿಂದ ಲಕ್ಷಾಂತರ ರೂ. ಮೌಲ್ಯದ ಟಯರ್ ಹಾಗೂ ಈಚರ್ ವಾಹನ ಬೆಂಕಿಗಾಹುತಿ ಆಗಿದೆ.
ಬೆಂಕಿ ಕೆನ್ನಾಲಿಗೆ ನಡುವೆಯೂ ಟಯರ್ ಉಳಿಸಿಕೊಳ್ಳಲು ಸಿಬ್ಬಂದಿ ದುಸ್ಸಾಹಸಕ್ಕೆ ಮುಂದಾಗಿದ್ದರು. ಬೆಂಕಿ ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತು ಎಂಬುದರ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕ್ರಾಪ್ ಗೋಡೌನ್‌ನಲ್ಲಿ ಅಗ್ನಿ ಅವಘಡ
ಮಹದೇವಪುರದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಅಗ್ರಹಾರ ಸಮೀಪದ ಕಲ್ಲಿನ ಕ್ವಾರಿ ಸಮೀಪದಲ್ಲಿರುವ ಸ್ಕ್ರ್ಯಾಪ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಎಲ್ಲೆಡೆ ಆವರಿಸಿ ಗೋಡೌನ್ ಸುಟ್ಟು ಭಸ್ಮವಾಗಿದೆ.
ಇದನ್ನೂ ಓದಿ: Fire Accident: ಚಾಮುಂಡಿ ಬೆಟ್ಟದಲ್ಲಿ ಬೆಂಕಿ, ವಾಹನ ಸಂಚಾರ ಸ್ಥಗಿತ; ಚಿಕ್ಕಮಗಳೂರಿನಲ್ಲಿ ಸುಟ್ಟು ಕರಕಲಾದ ರೈತರಿಬ್ಬರ ತೋಟಗಳು
ತಮಿಳುನಾಡು ಮೂಲದವರು ನೋಡಿಕೊಳ್ಳುತ್ತಿದ್ದ ಗೋಡೌನ್ ಇದಾಗಿದ್ದು, ಕಳೆದ ಎಂಟು ವರ್ಷಗಳಿಂದ ನಡೆಸುತ್ತಿದ್ದಾರೆ. ಇನ್ನು ಬೆಂಕಿ ಎಲ್ಲೆಡೆ ಆವರಿಸಿದ್ದರಿಂದ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡೆಬೇಕಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ