Site icon Vistara News

Fire Accident: ಬಿಬಿಎಂಪಿ ಲ್ಯಾಬ್‌ನಲ್ಲಿ ಅಗ್ನಿ ಅವಘಡಕ್ಕೆ ನಿರ್ಲಕ್ಷ್ಯವೇ ಕಾರಣ; ಅಧಿಕಾರಿಗಳಿಗೆ ನೋಟಿಸ್

Fire Accident in bbmp office

ಬೆಂಗಳೂರು: ಬಿಬಿಎಂಪಿಯ ಲ್ಯಾಬ್‌ನಲ್ಲಿ ಅಗ್ನಿ ಅವಘಡ ಪ್ರಕರಣ (Fire Accident) ಸಂಬಂಧ ಮೂವರನ್ನು ವಿಚಾರಣೆ ನಡೆಸಲಾಗಿದೆ. ತನಿಖೆ ವೇಳೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿರುವುದು ಗೊತ್ತಾಗಿದೆ. ಸದ್ಯ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳಿಗೆ ನೊಟೀಸ್ ನೀಡಲಾಗುತ್ತದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಮೂವರನ್ನು ವಿಚಾರಣೆ ನಡೆಸಿ ನೊಟೀಸ್ ಕೊಟ್ಟು ಕಳುಹಿಸಲಾಗಿದೆ. ಸಂಬಂಧಪಟ್ಟ ಬಿಬಿಎಂಪಿ ಹಿರಿಯ ಅಧಿಕಾರಿಗಳಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತದೆ. ತನಿಖೆ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | BBMP Fire Accident: BBMP ಅಗ್ನಿ ಅವಘಡ; ಗಾಯಗೊಂಡ 9 ಮಂದಿಯ ಆರೋಗ್ಯ ಸ್ಥಿತಿ ಈಗ ಹೇಗಿದೆ?; ಇದು Latest Bulletin

ಎಲ್ಲ ಆಯಾಮಗಳಲ್ಲಿ ತನಿಖೆ: ಬಿಬಿಎಂಪಿ ಮುಖ್ಯ ಆಯುಕ್ತ

ಅಗ್ನಿ ಅವಘಡ (Fire Accident in BBMP Lab) ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ತನಿಖೆಗೆ ನಮ್ಮ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಲ್ಯಾಬ್‌ನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ಬಿಬಿಎಂಪಿ ಚೀಫ್‌ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಲ್ಯಾಬ್ ಹೊರಗಡೆ ಆಂಬ್ಯುಲೆನ್ಸ್ ಇರಬೇಕಿತ್ತಲ್ಲವೇ ಎಂಬ ಪ್ರಶ್ನೆಗೆ ಸರಿಯಾಗಿ ಸ್ಪಂದಿಸದ ಕಮಿಷನರ್, ಡಿ ಗ್ರೂಪ್‌ ನೌಕರ ಲ್ಯಾಬ್‌ನಲ್ಲಿ ಸಹಾಯ ಮಾಡಬಹುದು, ಅದರೆ, ಎಲ್ಲ ಕೆಲಸ ಅವರೇ ಮಾಡುವಂತಿಲ್ಲ. ಈ ಕುರಿತು ಆಂತರಿಕ ತನಿಖೆಗೆ ಎಂಜಿನಿಯರ್ ಇನ್ ಚೀಫ್ ಪ್ರಹ್ಲಾದ್ ಅವರಿಗೆ ವಹಿಸಲಾಗಿದೆ. ಅವರು ಇಡೀ ಪ್ರಕರಣದ ಆಂತರಿಕ ತನಿಖಾ ವರದಿಯನ್ನು ನೀಡಲಿದ್ದಾರೆ. ವರದಿ ಕೊಟ್ಟ ನಂತರ ಡಿಸಿಎಂ, ಸಿಎಂಗೆ ಕಳುಹಿಸಲಾಗುವುದು. ಆ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಅಗ್ನಿ ಅವಘಡದಲ್ಲಿ ಒಂಬತ್ತು ಜನರಲ್ಲಿ 6 ಜನರಿಗೆ ಯಾವುದೇ ಅಪಾಯ ಇಲ್ಲ. ಇನ್ನುಳಿದ ಮೂವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಬಿಬಿಎಂಪಿ ವತಿಯಿಂದಲೇ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. ಮುಖ ಸುಟ್ಟವರಿಗೆ ಸರ್ಜರಿ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮೂವರ ಸ್ಥಿತಿ ಗಂಭೀರವಾಗಿದೆ: ವಿಕ್ಟೋರಿಯಾ ಆಸ್ಪತ್ರೆ ಡೀನ್

ಬೆಂಗಳೂರು: ಬಿಬಿಎಂಪಿ ಲ್ಯಾಬ್‌ನಲ್ಲಿ ಅಗ್ನಿ ಅವಘಡ ಪ್ರಕರಣದಲ್ಲಿ ಗಾಯಗೊಂಡಿರುವ 9 ಜನರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಜ್ಯೋತಿ ಆರೋಗ್ಯದಲ್ಲಿ ಚೇತರಿಕೆಯಾಗಿಲ್ಲ. ಕಿರಣ್‌ಗೆ ಡಯಾಲಿಸಿಸ್ ಆಗಿದೆ. ಇನ್ನೊಮ್ಮೆ ಡಯಾಲಿಸಿಸ್ ಆಗಬೇಕಿದೆ. ಶಿವಕುಮಾರ್‌ಗೆ ಉಸಿರಾಟದ ಸಮಸ್ಯೆಯಿದೆ. ಉಳಿದ ಆರು ಜನರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿಲ್ಲ. ಇನ್ನೊಂದು ವಾರ ಐಸಿಯುನಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಡೀನ್ ರಮೇಶ್ ಕೃಷ್ಣ ತಿಳಿಸಿದ್ದಾರೆ.

ಇದನ್ನೂ ಓದಿ | Nice Road : ನೈಸ್ ಸಂಸ್ಥೆಗೆ ಬಾರಿ ಮುಖಭಂಗ; ಶಿಫಾರಸುಗೊಂಡ ಅಡ್ವೊಕೇಟ್‌ಗಳಿಗೆ ಕೊಕ್‌, ಬೇರೆಯವರಿಗೆ ಮಣೆ

ನಮಗೆ ಮಗ ಹುಷಾರ್ ಆದ್ರೆ ಸಾಕು

ಗಾಯಳು ಶ್ರೀನಿವಾಸ್ ತಂದೆ ಸುಬ್ರಮಣ್ಯ ಮಾತನಾಡಿ, ನಿನ್ನೆ ಮಗನನ್ನು ಮಾತನಾಡಿಸಿದ್ದೇವೆ, ಪರವಾಗಿಲ್ಲ. ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ನಮಗೆ ಮಗ ಹುಷಾರ್ ಆದ್ರೆ ಸಾಕು. ಕೆಲವೊಂದು ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ. ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.

ಮಗನಿಗೆ 28 ವರ್ಷ ವಯಸ್ಸು, ಅವರ ಫ್ಯಾಮಿಲಿ ಬೆಂಗಳೂರಿನಲ್ಲಿಯೇ ಇದೆ. ಬಿಬಿಎಂಪಿ ಗುಣ ನಿಯಂತ್ರಣ ವಿಭಾಗದಲ್ಲಿ ಒಂದೂವರೆ ತಿಂಗಳಿನಿಂದ ಕೆಲಸ ಮಾಡುತ್ತಿದ್ದ. ಈಗ ಐಸಿಯುನಲ್ಲಿರುವ ಹಿನ್ನೆಲೆಯಲ್ಲಿ ನೋಡುವುದಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

Exit mobile version