ಉಡುಪಿ: ಕಾರ್ಕಳ ನಿಟ್ಟೆ ಗ್ರಾಮದ ಅತ್ತೂರು ಪರ್ಪಲೆಗುಡ್ಡೆಯಲ್ಲಿರುವ ಮೇಣದ ಬತ್ತಿ ತಯಾರಿಕಾ ಘಟಕವೊಂದು ಬೆಂಕಿಗಾಹುತಿಯಾಗಿದೆ (Candle factory fire). ಘಟಕ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಸುಮಾರು 25 ಲಕ್ಷಕ್ಕೂ ಅಧಿಕ ರೂ. ನಷ್ಟ ಉಂಟಾಗಿರುವ ಅಂದಾಜು ಮಾಡಲಾಗಿದೆ.
ಅತ್ತೂರು ಚರ್ಚ್ ಸಮೀಪದ ಪರ್ಪಲೆ ಗುಡ್ಡದಲ್ಲಿ ಈ ಮೇಣದ ಬತ್ತಿ ತಯಾರಿಕಾ ಘಟಕವಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡು ಒಮ್ಮೆಗೇ ಎಲ್ಲ ಕಡೆ ವ್ಯಾಪಿಸಿ ಅಗ್ನಿ ನರ್ತನವೇ ನಡೆದುಹೋಯಿತು.
ಯಂತ್ರೋಪಕರಣಗಳು ಸುಟ್ಟು ಕರಕಲಾಗಿವೆ. ಮೇಣದ ಬತ್ತಿ ತಯಾರಿಕೆಗೆ ದಾಸ್ತಾನು ಇರಿಸಲಾಗಿದ್ದ ಅಪಾರ ಪ್ರಮಾಣದ ಮೇಣ, ಉತ್ಪಾದನೆಯಾಗಿದ್ದ ಮೇಣದ ಬತ್ತಿಗಳು ಬೆಂಕಿಯ ಕೆನ್ನಾಲಗೆಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ.
ಏಕಾಏಕಿ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಘಟಕವನ್ನು ವ್ಯಾಪಿಸಿತ್ತು. ತಕ್ಷಣವೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದ್ದು, ಎರಡು ಅಗ್ನಿಶಾಮಕ ದಳದ ವಾಹನಗಳು ಘಟನಾಸ್ಥಳಕ್ಕೆ ಧಾವಿಸಿವೆ. ಆದರೆ, ಇಡೀ ಘಟಕದಲ್ಲಿ ಜ್ವಲನಶೀಲ ವಸ್ತುಗಳೇ ಹೆಚ್ಚಿದ್ದುದರಿಂದ ಬೆಂಕಿ ಒಮ್ಮಿಂದೊಮ್ಮೆಗೇ ಘಟಕವನ್ನು ಆವರಿಸಿತ್ತು. ಯಾವುದೇ ಅಗ್ನಿ ಶಮನವೂ ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆಯೇ ಘಟಕದಲ್ಲಿದ್ದ ಎಲ್ಲರೂ ಹೊರಗೋಡಿದ್ದರಿಂದ ಜೀವ ಹಾನಿ ಸಂಭವಿಸಲಿಲ್ಲ.
ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ; ಪ್ರಾಣಾಪಾಯದಿಂದ ಚಾಲಕ ಪಾರು
ಕೊಡಗು: ಇಲ್ಲಿನ ಕುಶಾಲನಗರದ ಜಿಎಂಪಿ ಶಾಲೆ (GMP school) ಎದುರಿನ ಬಿಎಂ ರಸ್ತೆಯಲ್ಲಿ ಗುರುವಾರ (ಮಾ.23) ನಸುಕಿನ ಜಾವ ಚಲಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ಲಾರಿಯು ಸುಟ್ಟು ಕರಕಲಾಗಿದೆ.
ಕೊಯಮತ್ತೂರಿನಿಂದ ಮಂಗಳೂರಿಗೆ ಗುಜರಿ ಸಾಗಿಸುತ್ತಿದ್ದ ಲಾರಿ (Lorry) ಇದಾಗಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿ ಚಾಲಕ ಹೊರಗೆ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಎರಡು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ; Murder Case: ದಾವಣಗೆರೆಯಲ್ಲಿ ಯುವಕನೊಬ್ಬನ ಕುತ್ತಿಗೆ ಕೊಯ್ದು, ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ