ಉಡುಪಿ: ಎಲ್ಲೆಡೆ ದೀಪಾವಳಿ ಸಂಭ್ರಮ (Deepavali Festival) ಜೋರಾಗುತ್ತಿದ್ದಂತೆಯೇ ಕೆಲವು ಕಡೆ ಅನಾಹುತಗಳೂ (Fire Tragedy) ನಡೆಯುತ್ತಿವೆ. ಪಟಾಕಿಗಳಿಂದಾಗಿ ಹಲವರಿಗೆ ಗಾಯವಾದ ಘಟನೆ ರಾಜ್ಯಾದ್ಯಂತ ನಡೆದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ (Gangolli port) ಲಂಗರು ಹಾಕಿದ್ದ ಬೋಟ್‌ನಲ್ಲಿ (Fishing boats gutted in fire tragedy) ಬೆಂಕಿ ಕಾಣಿಸಿಕೊಂಡು ಅದು ಏಳು ಬೋಟ್‌ಗಳಿಗೆ ವಿಸ್ತರಿಸಿ ಅವೆಲ್ಲವೂ ಸುಟ್ಟು ಕರಕಲಾಗಿವೆ.
ಗಂಗೊಳ್ಳಿ ಮೀನುಗಾರಿಕಾ ಬಂದರು ಪರಿಸರದಲ್ಲಿ ದೀಪಾವಳಿ ಪ್ರಯುಕ್ತ ಪೂಜೆ ನಡೆಯುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪಟಾಕಿ ಸಿಡಿದು ಬೆಂಕಿ ಹಬ್ಬಿರಬಹುದೇ ಎಂಬ ಸಂಶಯ ಕಾಡಿದೆ. ಸ್ಥಳೀಯ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲಾಗುತ್ತಿದ್ದು, ಬೆಂಕಿಯ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದುರಂತದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ.
ಇಲ್ಲೇ ಸಮೀಪದಲ್ಲಿ ದೀಪಾವಳಿ ಹಬ್ಬ ಆಚರಣೆ ನಡೆದಿದ್ದು, ದೊಡ್ಡ ಮಟ್ಟದಲ್ಲಿ ಪಟಾಕಿ ಸಿಡಿಸಲಾಗಿದೆ. ಹೀಗೆ ಸಿಡಿಸುವಾಗ ಕಿಡಿ ಬೋಡ್‌ಗೆ ಬಿದ್ದಿರಬಹುದಾ ಎಂಬ ಸಂಶಯ ಕಾಡಿದೆ. ಇದರ ಬಗ್ಗೆ ತನಿಖೆ ನಡೆಯಬೇಕಾಗಿದೆ.
ರಾಜಧಾನಿಯಲ್ಲಿ ಮೊದಲ ದಿನ ಪಟಾಕಿ ಸಿಡಿತಕ್ಕೆ 29 ಜನರ ಕಣ್ಣಿಗೆ ಗಾಯ
ಬೆಂಗಳೂರು: ದೀಪಾವಳಿ ಹಬ್ಬದ (Deepavali 2023) ಮೊದಲ ದಿನವಾದ ಭಾನುವಾರ ಒಂದೇ ದಿನ ಪಟಾಕಿ ಸಿಡಿದು ಕಣ್ಣಿಗೆ ಗಾಯವಾದ (Firecracker injury) 29 ಪ್ರಕರಣಗಳು ದಾಖಲಾಗಿವೆ.
ನಿನ್ನೆ ಒಂದೇ ದಿನ 29ಕ್ಕೂ ಹೆಚ್ಚು ಪಟಾಕಿ ಸಿಡಿತದಿಂದ ಗಾಯ ಪ್ರಕರಣಗಳು ದಾಖಲಾಗಿದ್ದು, ನಾರಾಯಣ ನೇತ್ರಾಲಯದಲ್ಲಿ (Narayana netralaya) 22 ಮಂದಿ ಹಾಗೂ ಮಿಂಟೋ ಆಸ್ಪತ್ರೆಯಲ್ಲಿ 7 ಮಂದಿ ಚಿಕಿತ್ಸೆಗಾಗಿ ಧಾವಿಸಿದ್ದಾರೆ.
ನಾರಾಯಣ ನೇತ್ರಾಲಯದ 22 ಪ್ರಕರಣಗಳಲ್ಲಿ 10 ಮಂದಿಗೆ ಮೇಜರ್ ಗಾಯಗಳಾಗಿವೆ. ಸರ್ಜರಿಯ ಅಗತ್ಯವಿದೆ. 12 ಜನರಿಗೆ ಮೈನರ್ ಇಂಜುರಿಯಾಗಿದೆ. 4 ಮಕ್ಕಳು ಹಾಗೂ ಉಳಿದ ವಯಸ್ಕರು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ (Minto hospital) 7 ಪ್ರಕರಣ ದಾಖಲಾಗಿದ್ದು, ಇಬ್ಬರಿಗೆ ಮೇಜರ್ ಇಂಜುರಿ; ಉಳಿದ 5 ಕೇಸ್‌ಗಳು ಒಪಿಡಿಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. 10 ವರ್ಷದ ಬಾಲಕಿ ಮತ್ತು 18 ವರ್ಷದ ಯುವಕನ ಕಣ್ಣಿಗೆ ಗಂಭೀರ ಗಾಯವಾಗಿದೆ. ಇಬ್ಬರಿಗೂ ಸರ್ಜರಿ ಮಾಡುವ ಅವಶ್ಯಕತೆ ಇದೆ ಎಂದು ಡಾಕ್ಟರ್ ಮಾಹಿತಿ ನೀಡಿದ್ದಾರೆ.
ಪಟಾಕಿ ಹಚ್ಚುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಇಂಥ ಅವಘಡಗಳಾಗುತ್ತಿವೆ. ಪಟಾಕಿಯ ಮೇಲೆ ಬಾಗಿ ಹಚ್ಚುವುದು ಅಥವಾ ಮೈಗೆ ಸಮೀಪದಲ್ಲಿ ಹಿಡಿದು ಹಚ್ಚುವುದು, ನೈಲಾನ್ ಬಟ್ಟೆಗಳನ್ನ ಧರಿಸಿಕೊಂಡಿರುವುದು ಇತ್ಯಾದಿಗಳು ಅಪಾಯಕಾರಿಗಳಾಗಿವೆ.