ಮೈಸೂರು: ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಬಡಾವಣೆಯ ಪಟಾಕಿ ಗೋದಾಮಿನಲ್ಲಿ ಅಗ್ನಿ ಅನಾಹುತ (Fire tragedy) ಸಂಭವಿಸಿದ್ದು, ಇಡೀ ಕಟ್ಟಡವೇ ಬೆಂಕಿಗೆ ಆಹುತಿಯಾಗಿದೆ.
ಮಧ್ಯಾಹ್ನದ ಹೊತ್ತು ಒಮ್ಮಿಂದೊಮ್ಮೆಗೇ ಇಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆಗಳು ಆಕಾಶದೆತ್ತರಕ್ಕೆ ಹರಡಿದವು, ದಟ್ಟ ಹೊಗೆಯಂತೂ ಆ ಪರಿಸರದಲ್ಲೆಲ್ಲಾ ಹರಡಿತ್ತು. ಅದರ ನಡುವೆ ಸಂಗ್ರಹಿಸಿಟ್ಟಿದ್ದ ಪಟಾಕಿಗಳು ದೀಪಾವಳಿಯಂತೆ ಸಿಡಿಯುತ್ತಿದ್ದವು.
ಲಕ್ಷಾಂತರ ರೂ. ಮೌಲ್ಯದ ಪಟಾಕಿ ಬೆಂಕಿಗಾಹುತಿಯಾಗಿದ್ದು, ಅಕ್ಕ ಪಕ್ಕದ ಮಳಿಗೆಗಳಿಗೂ ವ್ಯಾಪಿಸಿದ ಬೆಂಕಿಯಿಂದಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದು ಕೆರೆಯ ಪಕ್ಕದಲ್ಲೇ ಇರುವ ಒಂದು ಕಟ್ಟಡವಾಗಿದ್ದರೂ ಯಾರೂ ಏನೂ ಮಾಡಲಾಗದ ಅಸಹಾಯಕತೆ ನಿರ್ಮಾಣವಾಗಿತ್ತು. ಕೊನೆಗೆ ಎಂಟು ಅಗ್ನಿಶಾಮಕ ವಾಹನಗಳು ಆಗಮಿಸಿದವು. ಸಿಬ್ಬಂದಿ ಹರಸಾಹಸದಿಂದ ಬೆಂಕಿಯನ್ನು ನಿಯಂತ್ರಿಸಿದರು.
ಪಟಾಕಿ ಮಳಿಗೆಯಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಜೀವಹಾನಿ ತಪ್ಪಿದೆ. ಇಲ್ಲದಿದ್ದಲ್ಲಿ ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಅಪಾಯವಿತ್ತು. ಸ್ಥಳಕ್ಕೆ ಹೆಬ್ಬಾಳು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : Road Accident: ಕಡಬದ ಬಿಳಿನೆಲೆಯಲ್ಲಿ ಆಲ್ಟೋ-ತೂಫಾನ್ ಮುಖಾಮುಖಿ ಡಿಕ್ಕಿ; ಮಗು ಸೇರಿ ನಾಲ್ವರು ಮೃತ್ಯು, ಹಲವರು ಗಂಭೀರ