ಮಂಗಳೂರು: ಲಂಗರು ಹಾಕಿದ್ದ ಮೀನುಗಾರಿಕಾ ಬೋಟ್ (Fishing boat) ಒಂದು ಬೆಂಕಿಗಾಹುತಿಯಾಗಿದೆ. ಮಂಗಳೂರಿನ ಬೆಂಗ್ರೆಯ ಮೀನುಗಾರಿಕಾ ಬಂದರಿನಲ್ಲಿ (Bengre Fishing port) ಘಟನೆ ನಡೆದಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
ಮಂಗಳವಾರ ಮುಂಜಾನೆ ಬೋಟ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಡೀಸೆಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬೋಟ್ ಹೊತ್ತಿ ಉರಿದಿದೆ. ಬೆಂಕಿ ಇಡೀ ಬೋಟನ್ನು ಆವರಿಸಿ ಕೋಟ್ಯಾಂತರ ಮೌಲ್ಯದ ವಸ್ತುಗಳು ನಾಶವಾಗಿವೆ.
ಲಂಗರು ಹಾಕಿರುವ ಇನ್ನಷ್ಟು ಬೋಟ್ ಗಳಿಗೆ ಬೆಂಕಿ ಹರಡುವ ಮುನ್ನ ಎಚ್ಚೆತ್ತ ಮೀನುಗಾರರು ಕೂಡಲೇ ಬೆಂಕಿ ಹತ್ತಿಕೊಂಡ ಬೋಟನ್ನು ಬಂದರಿನಿಂದ ನದಿ ಕಡೆಗೆ ಒಯ್ದಿದ್ದಾರೆ. ಈ ಮೂಲಕ ಬೇರೆ ಬೋಟ್‌ಗಳಿಗೆ ಬೆಂಕಿ ಹತ್ತಿಕೊಳ್ಳುವುದನ್ನು ತಡೆದಿದ್ದಾರೆ. ಅರುಣ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ಇದಾಗಿದೆ. ಬಳಿಕ ಕದ್ರಿ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಮೂರು ಸರಕು ಸಾಗಾಟದ ಬೋಟ್‌ಗಳಿಗೆ ಬೆಂಕಿ ಬಿದ್ದಿತ್ತು
ಕಳೆದ ವರ್ಷದ ಅಕ್ಟೋಬರ್ 22ರಂದು ಮಂಗಳೂರು ಹೊರವಲಯದ ಬೆಂಗ್ರೆ ನದಿ ತೀರದಲ್ಲಿ ಲಂಗರು ಹಾಕಿದ್ದ ಮೂರಕ್ಕೂ ಅಧಿಕ ಸರಕು ಸಾಗಾಟದ ಬೋಟ್‌ಗಳು ಬೆಂಕಿಗೆ ಆಹುತಿಯಾಗಿದ್ದವು.
ಇವು ಲಕ್ಷದ್ವೀಪಕ್ಕೆ ಸರಕು ಸಾಗಾಟ ಮಾಡುವ ಬೋಟ್‌ಗಳಾಗಿದ್ದು, ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ರಿಪೇರಿಗೆ ನಿಲ್ಲಿಸಿದ್ದ ಇವುಗಳಿಗೆ ಬೆಂಕಿ ಬಿದ್ದಿದೆ. ಒಂದು ಬೋಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹಬ್ಬಿದ ಬೆಂಕಿ ಬೇರೆ ಬೋಟ್‌ಗಳಿಗೆ ಹಬ್ಬಿತ್ತು.
ಇದನ್ನೂ ಓದಿ : Fire Accident : ಅತ್ತಿಬೆಲೆ ಬೆನ್ನಲ್ಲೇ ತಮಿಳುನಾಡಲ್ಲೂ ಪಟಾಕಿ ಸ್ಫೋಟ; 10 ಮಂದಿ ಸಾವು, ಹಲವರು ಗಂಭೀರ
ಬೆಂಕಿಯ ಕೆನ್ನಾಲಿಗೆಗಳು ಆಕಾಶದೆತ್ತರಕ್ಕೆ ಹಬ್ಬಿದ್ದು, ಜನರು ಆತಂಕಕ್ಕೊಳಗಾದರು. ಅಗ್ನಿಶಾಮಕ ದಳದವರು ಕೂಡಲೇ ಧಾವಿಸಿದರೂ ಬಹುತೇಕ ಬೋಟ್ ಸುಟ್ಟುಹೋಗಿದೆ. ಕೋಟ್ಯಾಂತರ ರೂಪಾಯಿ ನಷ್ಟವಾಗಿತ್ತು.