ವಿಜಯನಗರ: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 30ಕ್ಕೂ ಅಧಿಕ ಜನ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದರು. ಈ ಪೈಕಿ ವೃದ್ಧೆಯೊಬ್ಬರು ಮೃತಪಟ್ಟಿರುವುದು ಕಂಡುಬಂದಿದೆ.
ಕಾರಿಗನೂರಿನ RBSSN ಕ್ಯಾಂಪ್ ನಿವಾಸಿ ಸೀತಮ್ಮ (66) ಮೃತ ವೃದ್ಧೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದರಿಂದ ಗ್ರಾಮದ 30ಕ್ಕೂ ಹೆಚ್ಚು ಮಂದಿಯನ್ನು ಶನಿವಾರ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಸೀತಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಭಾನುವಾರ ಸಂಜೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಟ್ಯಾಂಕರ್ ಕ್ಲೀನ್ ಮಾಡದೆ ಪೂರೈಕೆ ಮಾಡಿದ್ದರಿಂದ ಗ್ರಾಮಕ್ಕೆ ಪಾಚಿ ಮಿಶ್ರಿತ ಕುಡಿಯುವ ನೀರು ಸರಬರಾಜು ಆಗಿತ್ತು. ಅನಿವಾರ್ಯತೆಯಿಂದ ಆ ನೀರನ್ನೇ ಕುಡಿದ ಹಿನ್ನೆಲೆಯಲ್ಲಿ 30ಕ್ಕೂ ಅಧಿಕ ಜನಕ್ಕೆ ವಾಂತಿ, ಭೇದಿಯಾಗಿ ಅಸ್ವಸ್ಥರಾಗಿದ್ದರು. ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಧ್ಯಾಹ್ನ ಶಾಸಕ ಗವಿಯಪ್ಪ, ಡಿಸಿ ದಿವಾಕರ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ | ಅಕ್ಕ-ತಮ್ಮನ ಮೇಲೆ ನೈತಿಕ ಪೊಲೀಸ್ ಗಿರಿ ಕೇಸ್; ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ
ವರದಕ್ಷಿಣಿಗಾಗಿ ಹೆಂಡತಿನಾ ಹೆಲ್ಮೆಟ್‌ನಿಂದ ಹೊಡೆದು ಕೊಂದ ದುಷ್ಟ ಪತಿ
ದಾವಣಗೆರೆ: ಹೆಲ್ಮೆಟ್‌ನಿಂದ ಹೊಡೆದು ಪತ್ನಿ ಕೊಲೆ (Murder Case) ಮಾಡಿ ಅಪಘಾತದ ನಾಟಕವಾಡಿದ್ದ ಕಿರಾತಕನನ್ನು ಪೊಲೀಸರು ಬಂಧಿಸಿದ್ದಾರೆ. ಯಶೋಧ (23) ಹತ್ಯೆಯಾದವಳು. ವರದಕ್ಷಿಣೆ ಕೊಡಲಿಲ್ಲ ಎಂಬ ಕಾರಣಕ್ಕೆ ಮೂರು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಪತಿಯೇ ಹೊಡೆದು ಕೊಂದಿದ್ದಾನೆ.
ಕಳೆದ ಜನವರಿ 4ರಂದು ದಾವಣಗೆರೆಯ ಚನ್ನಗಿರಿ ತಾಲೂಕಿನ ನುಗ್ಗಿಹಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ದಾವಣಗೆರೆ ತಾಲೂಕಿನ ನರಗನಹಳ್ಳಿ ಗ್ರಾಮದ ತಿಪ್ಪೇಶ್ (28) ಎಂಬಾತ ಕೊಲೆ ಆರೋಪಿ ಆಗಿದ್ದಾನೆ. ಈ ತಿಪ್ಪೇಶ್ ಹಾಗೂ ಚನ್ನಗಿರಿ ತಾಲೂಕಿನ ಸಾರಥಿ ಹೊಸೂರು ಗ್ರಾಮದ ಯಶೋಧಾಳನ್ನು ಪರಸ್ಪರ ಪ್ರೀತಿಸಿ, ಆರು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ.
ಕಳೆದ ಜನವರಿ 4ರಂದು ತಿಪ್ಪೇಶ್ ಜತೆ ಯಶೋಧ ತವರಿಗೆ ಬಂದಿದ್ದಳು. ನಂತರ ವಾಪಸ್ಸು ಹೋಗುವಾಗ ಬೈಕ್ ಅಪಘಾತವಾಗಿ ಯಶೋಧಾ ಮೃತಪಟ್ಟಿದ್ದಾಳೆ ಎಂದು ಸಂಬಂಧಿಕರಿಗೆ ಮಾಹಿತಿ ನೀಡಿದ್ದ. ಆದರೆ ಯಶೋಧಾಳ ಮೃತದೇಹವನ್ನು ನೋಡಿದ ತಂದೆ ಚಂದ್ರಪ್ಪಗೆ ಅನುಮಾನ ಮೂಡಿತ್ತು. ಹೀಗಾಗಿ ನನ್ನ ಮಗಳು ಬೈಕ್ ಅಪಘಾತದಲ್ಲಿ ಮೃತಪಟ್ಟಿಲ್ಲ, ಬದಲಿಗೆ ಕೊಲೆಯಾಗಿದೆ ಎಂದು ದೂರು ನೀಡಿದ್ದರು.
ಇದನ್ನೂ ಓದಿ | BK Hariprasad: ಬಿ.ಕೆ. ಹರಿಪ್ರಸಾದ್ ವಿರುದ್ಧ ಪುನೀತ್ ಕೆರೆಹಳ್ಳಿ ಕಂಪ್ಲೇಂಟ್; ಕಾಂಗ್ರೆಸ್‌ನಿಂದ ಪ್ರತಿ ದೂರು
ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪೊಲೀಸರಿಗೆ ಅಪಘಾತದ ಹಿಂದಿನ ರಹಸ್ಯ ಬಹಿರಂಗಗೊಳಿಸಿದ್ದಾರೆ. ತಿಪ್ಪೇಶ್‌ನನ್ನು ಬಂಧಿಸಿ ತನಿಖೆಗೊಳಪಡಿಸಿದಾಗ ತಾನೇ ಹೆಲ್ಮೆಟ್‌ನಿಂದ ಹೊಡೆದು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ಮಾಡಿ ಬೈಕ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿದ್ದಾಗಿ ತಿಳಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಿಪ್ಪೇಶ್‌ನನ್ನು ಜೈಲಿ ಅಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ