Site icon Vistara News

Heart attack : ಕಾಲೇಜಿನಲ್ಲಿ ಕಬಡ್ಡಿ ಆಡುವಾಗ ಹೃದಯಾಘಾತ; ಪ್ರಥಮ ಪಿಯು ವಿದ್ಯಾರ್ಥಿನಿ ದುರ್ಮರಣ

Kabaddi death sangeetha

#image_title

ಆನೇಕಲ್: ಸಣ್ಣ ವಯಸ್ಸಿನಲ್ಲೇ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುವ ಆಘಾತಕಾರಿ ಸಾವಿನ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ. ಅತ್ತಿಬೆಲೆಯ ಕಾಲೇಜೊಂದರ ವಿದ್ಯಾರ್ಥಿನಿ ಕಬಡ್ಡಿ ಆಡುವ ವೇಳೆ ಹೃದಯಾಘಾತದಿಂದ (Heart attack) ಮೃತಪಟ್ಟಿದ್ದಾಳೆ.

ಆನೇಕಲ್‌ ಸಮೀಪದ ಅತ್ತಿಬೆಲೆಯ ಸೆಂಟ್ ಫಿಲೋಮಿನಾ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಉತ್ಸವದ ಸಂದರ್ಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂಗೀತಾ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ. ಸಂಜೆ ಐದು ಗಂಟೆಯ ಹೊತ್ತಿಗೆ ಘಟನೆ ನಡೆದಿದೆ.

ಇಲ್ಲಿ ಕ್ರೀಡಾ ಉತ್ಸವದಲ್ಲಿ ಮಹಿಳೆಯರ ತಂಡದ ಕಬಡ್ಡಿ ಕೂಡಾ ಇತ್ತು. ಸಂಗೀತಾ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ತಂಡದಲ್ಲಿ ಆಡುತ್ತಿದ್ದಳು. ಸಂಗೀತಾ ತನ್ನ ತಂಡದ ಪರವಾಗಿ ರೈಡಿಂಗ್‌ಗೆ ಹೋಗಿದ್ದಳು. ಆಗ ಎದುರಾಳಿ ತಂಡದವರು ಆಕೆಯನ್ನು ಹಿಡಿಯಲು ಮುಂದಾಗಿದ್ದರು. ಆಗ ಒಮ್ಮೆಗೇ ಹೃದಯಾಘಾತಗೊಂಡು ಸಂಗೀತಾ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಶಾಲೆಯ ಆಡಳಿತ ಮಂಡಳಿ ಆಸ್ಪತ್ರೆಗೆ ಕರೆದೊಯ್ದಿದೆ. ಆದರೆ, ಅಷ್ಟು ಹೊತ್ತಿಗಾಗಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಆನೇಕಲ್ ತಾಲೂಕಿನ ಬಳಗಾರನಹಳ್ಳಿಯಲ್ಲಿ ವಾಸವಿದ್ದ ಈಕೆ ಮೂಲತಃ ಧಾರವಾಡ ಮೂಲದವಳು. ವಿದ್ಯಾರ್ಥಿನಿ ಮೃತಪಟ್ಟ ಹಿನ್ನೆಲೆಯಲ್ಲಿ ಬುಧವಾರ ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

Exit mobile version