ಕಾರವಾರ: ಅರಬ್ಬೀ ಸಮುದ್ರದಲ್ಲಿ ಬಂಡೆಕಲ್ಲಿಗೆ ತಾಗಿ ಮುಳುಗುತ್ತಿದ್ದ ದೋಣಿಯಿಂದ 17 ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಬಳಿ ನಡೆದಿದೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಶ್ರೀದೇವಿ ಅನುಗ್ರಹ ಹೆಸರಿನ ಪರ್ಸಿನ್ ಬೋಟ್ ಮುಳುಗುವ ಹಂತ ತಲುಪಿದಾಗ, ಕರಾವಳಿ ಕಾವಲು ಪಡೆಯಿಂದ ರಕ್ಷಣೆ (Fishermen Rescued) ಮಾಡಲಾಗಿದೆ.
ಸುಧಾಕರ ಖಾರ್ವಿ ಎಂಬುವವರ ಮೀನುಗಾರಿಕಾ ದೋಣಿ ಸಮುದ್ರದಲ್ಲಿ ಮೀನುಗಾರಿಗೆಕೆಂದು ತೆರಳಿತ್ತು. ಮೀನುಗಾರಿಕೆ ಮುಗಿಸಿ ಮೀನು ತುಂಬಿಕೊಂಡು ವಾಪಸಾಗುತ್ತಿದ್ದ ವೇಳೆ ಆಕಸ್ಮಿಕವಾಗಿ ಬಂಡೆಗಲ್ಲೊಂದಕ್ಕೆ ದೋಣಿಯ ತಳ ಬಡಿದಿದ್ದು, ಪರಿಣಾಮ ಬೋಟ್‌ಗೆ ಹಾನಿಯಾಗಿ ನೀರು ತುಂಬಿಕೊಳ್ಳಲು ಆರಂಭಿಸಿತ್ತು.
ಈ ವೇಳೆ ಮೀನುಗಾರರು ರಕ್ಷಣೆಗಾಗಿ ಸಂದೇಶ ರವಾನಿಸಿದ್ದು, ಅದರಂತೆ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಇತರ ದೋಣಿಗಳ ಮೀನುಗಾರರು ಮುಳುಗುತ್ತಿದ್ದ ಬೋಟ್‌ನಲ್ಲಿದ್ದ 17 ಮೀನುಗಾರರನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ.
ಸಮುದ್ರದಲ್ಲಿ ಇಂತಹದ್ದೊಂದು ದುರ್ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ಬೋಟ್ ಮುಳುಗಡೆಯಾಗಿರುವ ಹಿನ್ನಲೆ ದೋಣಿ, ಬಲೆ ಸೇರಿದಂತೆ ಬೋಟ್‌ನಲ್ಲಿದ್ದ ಯಂತ್ರೋಪಕರಣಗಳು ನೀರುಪಾಲಾಗಿದ್ದು, 10 ಲಕ್ಷ ರೂಪಾಯಿಗೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ | Car Accident : ಜೋಯಿಡಾದಲ್ಲಿ ರಸ್ತೆ ಪಕ್ಕ ಹೋಗುತ್ತಿದ್ದವರ ಮೇಲೆ ಕಾರು ಹರಿದು ಮೂವರ ಸಾವು, ಒಬ್ಬರಿಗೆ ಗಾಯ