Site icon Vistara News

Pavagada Naxal Attack: ಪಾವಗಡ ಸ್ಫೋಟ ಪ್ರಕರಣ; ಐವರು ಮಾಜಿ ನಕ್ಸಲೀಯರ ಸೆರೆ

Gunfight with Naxals, Three security forces personnel were martyred

ತುಮಕೂರು: 2005ರ ಪಾವಗಡದ ವೆಂಕಟಮ್ಮನಹಳ್ಳಿ ಬ್ಲಾಸ್ಟ್ ಪ್ರಕರಣದಲ್ಲಿ (Pavagada Naxal Attack) ಐವರು ಮಾಜಿ ನಕ್ಸಲೀಯರನ್ನು ಪೊಲೀಸರು ಬಂಧಿಸಿದ್ದಾರೆ. ಕೋರ್ಟ್‌ ವಿಚಾರಣೆಗೆ ನಿರಂತರವಾಗಿ ಗೈರಾಗಿದ್ದ ಪರಿಣಾಮ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಆಂಧ್ರಪ್ರದೇಶದ ಗಂತಿಮೇರಿಯ ನಾಗರಾಜು (40), ಧರ್ಮಾವರಂನ ಪದ್ಮ (35), ರಾಮಗಿರಿ ತಲ್ಲಿಮಡುಗುವಿನ ಬೋಯ ಓಬಳೇಶ್ (40), ರಾಮಮೋಹನ್ (42) ಹಾಗೂ ಆಂಜನೇಯುಲು (44) ಬಂಧಿತರು. ಪಾವಗಡ ತಾಲೂಕು ನ್ಯಾಯಾಲಯಲ್ಲಿ ಸ್ಫೋಟ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಮೂರ್ನಾಲ್ಕು ಬಾರಿ ಕೋರ್ಟ್ ವಿಚಾರಣೆಗೆ ಹಾಜರಾಗದೆ ಗೈರಾದ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆ ಮೇರೆಗೆ ಐವರನ್ನು ಬಂಧಿಸಲಾಗಿದೆ. ಪಾವಗಡ ಪೊಲೀಸರು ಆಂಧ್ರ ಪ್ರದೇಶದ ವಿವಿಧ ಭಾಗದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಂಧಿತ ನಕ್ಸಲೀಯರು

ಏನಿದು ಘಟನೆ?

2005ರಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿಯಾದ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಮತ್ತು ತಿರುಮಣಿಯಲ್ಲಿ ನಕ್ಸಲರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ವೆಂಕಟಮ್ಮನಹಳ್ಳಿಯಲ್ಲಿ 30 ಸಿಬ್ಬಂದಿಯ ಕೆಎಸ್​ಆರ್​ಪಿ ತುಕಡಿಯನ್ನು ನಿಯೋಜಿಸಲಾಗಿತ್ತು. 2005ರ ಸೆಪ್ಟೆಂಬರ್​ 10ರ ರಾತ್ರಿ 300 ನಕ್ಸಲ​​ರು ಕೆಎಸ್​ಆರ್‌ಪಿ ತುಕಡಿ ಮೇಲೆ ದಾಳಿ (Naxal attack) ಮಾಡಿದ್ದರು.

ಕೆಎಸ್​ಆರ್​ಪಿ ತುಕಡಿ ತಂಗಿದ್ದ ಶಾಲೆಯನ್ನು ಸುತ್ತುವರೆದು ಬಾಂಬ್‌ ಸ್ಫೋಟಿಸಿ, ಗ್ರೆನೇಡ್‌ ದಾಳಿ ನಡೆಸಿದ್ದರಿಂದ 7 ಪೊಲೀಸರು ಹಾಗೂ ಒಬ್ಬ ನಾಗರಿಕ ಮೃತಪಟ್ಟಿದ್ದರು. ಈ ಘಟನೆ ನಡೆಯುವ ಮುನ್ನ ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲ್​ ಸಹಚರರು ಮೃತಪಟ್ಟಿದ್ದರು. ಇದರ ಪ್ರತೀಕಾರ ತೀರಿಸಿಕೊಳ್ಳಲು ಈ ಹತ್ಯಾಕಾಂಡ ನಡೆದಿತ್ತು ಎನ್ನಲಾಗಿದೆ. ಘಟನೆ ಸಂಬಂಧ 16 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ | Killer Bmtc : ಎರಡು ದಿನದ ಅಂತರದಲ್ಲಿ ಬಿಎಂಟಿಸಿಗೆ ಮತ್ತೊಂದು ಬಲಿ

ನಂತರ ಕ್ರಾಂತಿಕಾರಿ ಗಾಯಕ ಗದ್ದರ್‌, ಕ್ರಾಂತಿಕಾರಿ ಬರಹಗಾರ ವರವರರಾವ್‌ ಸೇರಿ 42 ಮಂದಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಗದ್ದರ್‌ ಅವರನ್ನು 2019ರ ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇತ್ತೀಚೆಗೆ ಅವರು ಮೃತಪಟ್ಟಿದ್ದಾರೆ. ಇನ್ನು ವರವರರಾವ್‌ ಅವರನ್ನು ಮಹಾರಾಷ್ಟ್ರ ಜೈಲಿನಿಂದ ಕರೆತಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಮೀನಿಗೆ ಹಾಕಿದ ಗಾಳಕ್ಕೆ ಸಿಕ್ಕ ಮೂಟೆಯಲ್ಲಿತ್ತು ಮಹಿಳೆಯ ಮೂಳೆ!

ಆನೇಕಲ್: ಕೆರೆಯಲ್ಲಿ ಅಪರಿಚಿತ ಮಹಿಳೆಯ ಮೂಳೆಗಳು ಪತ್ತೆಯಾಗಿವೆ. ಆನೇಕಲ್ ತಾಲೂಕಿನ ಸಮಂದೂರು ಗ್ರಾಮದ ತಿಮ್ಮಸಂದ್ರ ಕೆರೆಯಲ್ಲಿ (Dead body Found) ಘಟನೆ ನಡೆದಿದೆ. ಗ್ರಾಮದ ಯುವಕರು ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ಮೂಟೆಯೊಂದು ಸಿಕ್ಕಿದೆ.

ಮಹಿಳೆಯನ್ನು ಹತ್ಯೆ ಮಾಡಿ ಕಲ್ಲಿನ ಜತೆಗೆ ಮೂಟೆಯಲ್ಲಿ ಕಟ್ಟಿ ಕೆರೆಗೆ ಹಾಕಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಯುವಕರು ನಿನ್ನೆ ಭಾನುವಾರ ಮೀನು ಹಿಡಿಯಲು ಹೋಗಿದ್ದರು. ಈ ಸಂದರ್ಭದಲ್ಲಿ ಮೀನಿನ ಗಾಳಕ್ಕೆ ಮೂಟೆ ಸಿಕ್ಕಿಹಾಕಿಕೊಂಡಿದೆ. ಬೃಹತ್‌ ಮೀನು ಇರಬೇಕೆಂದು ಎಳೆದು ನೋಡಿದಾಗ ಮೂಟೆ ಸಿಕ್ಕಿದೆ. ಮೂಟೆ ಮೇಲೆತ್ತಿ ನೋಡಿದಾಗ ಮೂಳೆಗಳು ಪತ್ತೆ ಆಗಿವೆ. ಜತೆಗೆ ಮೂಟೆಯ ಒಳಗೆ ಇಟ್ಟಿಗೆ ತುಂಡುಗಳನ್ನು ಹಾಕಿ ನೀರಿನಲ್ಲಿ ಬಿಡಲಾಗಿದೆ. ಜತೆಗೆ ಮಹಿಳೆಯ ತಲೆ ಕೂದಲು, ದೇಹದ ಮೂಳೆಗಳು ಹಾಗೂ ಸೀರೆ ಜತೆಗೆ ತಲೆಗೆ ಹಾಕುವ ಕ್ಲಿಬ್, ಕೈಬಳೆಗಳು ಪತ್ತೆಯಾಗಿದೆ.

ಇದನ್ನೂ ಓದಿ | Mysuru News : ಉಪ ತಹಸೀಲ್ದಾರ್‌ ಕಿರುಕುಳ; ವಿಷ ಸೇವಿಸಿ ಕಂಪ್ಯೂಟರ್‌ ಆಪರೇಟರ್‌ ಆತ್ಮಹತ್ಯೆ

ಮಹಿಳೆಯ ಕೊಲೆ ಮಾಡಿ ಮೂಟೆಯಲ್ಲಿ ಕಟ್ಟಿ ನೀರಿನಲ್ಲಿ ಬಿಟ್ಟಿರುವ ಸಾಧ್ಯತೆ ಇದೆ. ಹಲವು ತಿಂಗಳುಗಳ ಹಿಂದೆಯೇ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿರಬೇಕೆಂದು ಅಂದಾಜಿಸಲಾಗಿದೆ. ಸದ್ಯ ಕಳೇಬರ ಪತ್ತೆಯಾದ ಕಾರಣಕ್ಕೆ ಯುವಕರು ಅತ್ತಿಬೆಲೆ ಪೊಲೀರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version