ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ. ದೇವೇಗೌಡರಿಗೆ ಆಪ್ತರಾಗಿದ್ದ ಐವರು ಪ್ರಮುಖ ಮುಖಂಡರು ಜೆಡಿಎಸ್‌ಗೆ ರಾಜೀನಾಮೆ (Defection politics) ನೀಡಿದ್ದಾರೆ. ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿಲ್ಲಾ ನಾಯಕ ಸಂಘದ ಅಧ್ಯಕ್ಷ ದೇವರಾಜು, ಬೆಳವಾಡಿ ಜೆಡಿಎಸ್ ಪ್ರಭಾವಿ ಮುಖಂಡ ಶಿವಮೂರ್ತಿ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಇವರು ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಶಕ್ತಿಯಾಗಿ ನಿಂತಿದ್ದರು ಎನ್ನಲಾಗಿದೆ. ಈ ನಡುವೆ, ಇವರೆಲ್ಲರೂ ಕಾಂಗ್ರೆಸ್ ಕಡೆಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದರು. ಆದರೆ, ಅತ್ತಿತ್ತ ತೂಗುಯ್ಯಾಲೆಯಲ್ಲಿ ಇದ್ದ ಜಿ.ಟಿ. ದೇವೇಗೌಡರು ಕೊನೆಗೆ ಜೆಡಿಎಸ್‌ನಲ್ಲೇ ಉಳಿಯುವ ತೀರ್ಮಾನ ಮಾಡಿದ್ದರು.
ಆದರೆ, ಅಷ್ಟು ಹೊತ್ತಿಗೆ ಒಂದು ಹೆಜ್ಜೆ ಹೊರಗಿಟ್ಟಿದ್ದ ಈ ಐವರು ನಾಯಕರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಕೇರ್ಗಳ್ಳಿಯಲ್ಲಿ ನಡೆದ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶದಲ್ಲಿ ಸಮಾವೇಶದಲ್ಲಿ ಸಾವಿರಕ್ಕೂ ಅಧಿಕ ಕಾರ್ಯಕರ್ತರ ಸಮ್ಮುಖದಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದರು.
ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ರೆಡಿ
ಮಂಗಳವಾರ ಸಂಜೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ರಮ್ಮನಹಳ್ಳಿ ಗ್ರಾಮದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಲಿದ್ದು, ಆ ಕಾರ್ಯಕ್ರಮದಲ್ಲೇ ಈ ಐವರು ನಾಯಕರು ಅನಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿದ್ದರಾಮಯ್ಯ ಜತೆ ಗುರುತಿಸಿಕೊಳ್ಳಲು ಹೊರಟಿರುವ ಅವರು ಮತ್ತೊಮ್ಮೆ ಸ್ವಾಭಿಮಾನಿ ಸಮಾವೇಶ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಜೊಳಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ | ಜಿ.ಟಿ. ದೇವೇಗೌಡ ಮನೆ ಬಾಗಿಲಿಗೆ ಎಚ್.ಡಿ. ದೇವೇಗೌಡ; ಕಾಲಿಗೆ ಬಿದ್ದು ಕಣ್ಣೀರಿಟ್ಟ ಜಿಟಿಡಿ, ಮುಗಿದ ಮುನಿಸು