Site icon Vistara News

ವಿದ್ಯಾರಶ್ಮಿ ಪೆಲತಡ್ಕ, ಬೇಳೂರು ರಘುನಂದನ್‌ ಸಹಿತ ಐವರು ಸಾಹಿತ್ಯ ಸಾಧಕರಿಗೆ ಪ್ರತಿಷ್ಠಿತ ಮಯೂರವರ್ಮ ಪ್ರಶಸ್ತಿ

Mayuravarma award

#image_title

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ೨೦೨೨ನೇ ಸಾಲಿನ ಮಯೂರವರ್ಮ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆ ಪುರವಣಿಗಳ ಮುಖ್ಯಸ್ಥರಾದ ವಿದ್ಯಾರಶ್ಮಿ ಪೆಲತಡ್ಕ ಸೇರಿದಂತೆ ಐವರನ್ನು ಆಯ್ಕೆ ಮಾಡಲಾಗಿದೆ.

ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ, ಗಡಿಭಾಗ ಕಾಸರಗೋಡಿನ ವಿದ್ಯಾರಶ್ಮಿ ಪೆಲತಡ್ಕ ಹಾಗೂ ಹಾಸನದ ಬೇಲೂರು ರಘುನಂದನ ಅವರನ್ನು ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿʼಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ೨೫,೦೦೧ ರೂ. ನಗದು ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.

ಈ ಮಯೂರ ವರ್ಮ ಪ್ರಶಸ್ತಿಯನ್ನು ೪೫ ವರ್ಷದೊಳಗಿನ ಐದು ಜನ ಪ್ರತಿಭಾವಂತ ಸಾಧಕರಿಗೆ ಪ್ರದಾನ ಮಾಡಲಾಗುತ್ತದೆ. ಪ್ರತಿವರ್ಷ ಪುರಸ್ಕೃತರ ಆಯ್ಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು, ಪರಿಷತ್ತಿನ ಅಧ್ಯಕ್ಷರ ನೇತ್ರತ್ವದಲ್ಲಿ ೭ (ಏಳು) ಮಂದಿಯ ಆಯ್ಕೆ ಸಮಿತಿಯನ್ನು ರಚಿಸಿ ಕೂಲಂಕಶವಾಗಿ ಚರ್ಚಿಸಿ ಆಯ್ಕೆ ಮಾಡಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ವೈದೇಹಿ ಅವರಿಗೆ ನೃಪತುಂಗ ಪ್ರಶಸ್ತಿ

ಏಳು ಲಕ್ಷ ರೂ. ನಗದು ಹೊಂದಿರುವ ನೃಪತುಂಗ ಪ್ರಶಸ್ತಿಗೆ ಹಿರಿಯ ಸಾಹಿತಿ, ಉಡುಪಿ ವೈದೇಹಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಜ್ಞಾನಪೀಠ ಪ್ರಶಸ್ತಿಗೆ ಸರಿಸಮಾನವಾದ ಕನ್ನಡ ನಾಡಿನ ಪ್ರಶಸ್ತಿಯೆಂದು ಪ್ರಖ್ಯಾತವಾಗಿದೆ ಎಂದು ಜೋಶಿ ಹೇಳಿದ್ದಾರೆ.

ಈ ಬಾರಿ ಹಿರಿಯ ಬರಹಗಾರ್ತಿ ಶ್ರೀಮತಿ ವೈದೇಹಿ ಅವರನ್ನು ಈ ಮೌಲಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಜಾನಕಿ ಶ್ರೀನಿವಾಸಮೂರ್ತಿ ಅವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರಾಗಿದ್ದು, ಸಣ್ಣಕತೆ, ಕಾವ್ಯ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಹುಲುಸಾದ ಕೃಷಿ ಮಾಡಿದ್ದಾರೆ. ಇವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಈ ಮೌಲಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ನೃಪತುಂಗ ಹಾಗೂ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗಾಗಿ ಆಯ್ಕೆಯನ್ನು ಮಾಡಲಾಗಿದೆ. ನಿಕಟಪೂರ್ವ ನೃಪತುಂಗ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಹಿರಿಯ ಸಾಹಿತಿ ಡಾ. ಎಸ್.ಆರ್.ಲೀಲಾ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಶ್ರೀ ಸತೀಶ್, ಕ.ರಾ,ರ.ಸಾ.ಸಂಸ್ಥೆಯ ಕನ್ನಡ ಕ್ರಿಯಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ವ.ಚ.ಚನ್ನೇಗೌಡ ಆಯ್ಕೆ ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಹಿರಿಯ ಪತ್ರಕರ್ತ ಡಿ. ಉಮಾಪತಿಗೆ ಕೆಯುಡಬ್ಲ್ಯೂಜೆಯ ಪ್ರತಿಷ್ಠಿತ ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ

Exit mobile version