Site icon Vistara News

ವಿಧಾನಸೌಧ | ಐವರು ಪದ್ಮ ಪ್ರಶಸ್ತಿ ಪುರಸ್ಕೃತರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪೌರ ಸನ್ಮಾನ

ರಾಷ್ಟ್ರಪತಿ

ಬೆಂಗಳೂರು: ಐವರು ಪದ್ಮ ಪ್ರಶಸ್ತಿ ಪುರಸ್ಕೃತರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಧಾನಸೌಧದಲ್ಲಿ ಪೌರ ಸನ್ಮಾನ ನೆರವೇರಿಸಲಾಯಿತು. ಪದ್ಮಭೂಷಣ ಪುರಸ್ಕೃತರಾದ ಸಾಹಿತಿ ಚಂದ್ರಶೇಖರ ಕಂಬಾರ ಹಾಗೂ ಉದ್ಯಮಿ ಕಿರಣ್ ಮಜುಂದಾರ್ ಶಾ, ಪದ್ಮಶ್ರೀ ಪುರಸ್ಕೃತರಾದ ಮಧು ಪಂಡಿತ್ ದಾಸ್, ಪ್ರಕಾಶ್ ಪಡುಕೋಣೆ, ಜೋಗತಿ ಮಂಜಮ್ಮ ಅವರು ಗೌರವ ಸಲ್ಲಿಸಿದರು. ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರಿಗೆ ಪೌರಸನ್ಮಾನ ನಡೆಸಲಾಗಿದೆ.

ಸನ್ಮಾನದ ನಂತರ ಕನ್ನಡದಲ್ಲೇ ಮಾತುಗಳನ್ನಾರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಕರ್ನಾಟಕ ನನಗೆ ಮೆಚ್ಚಿನ ರಾಜ್ಯ. ಬೆಂಗಳೂರು ಚಂದದ ಊರು, ಇಲ್ಲಿನ ಶಾಂತಿ ಪ್ರಿಯ ಜನರ ಬಗ್ಗೆ ಜಗತ್ತೇ ಕೊಂಡಾಡುತ್ತಿದೆ. ಉತ್ತರ ಭಾರತದ ಹಲವು ಜನ ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡಿದ್ದು, ಇಲ್ಲಿನವರ ಜತೆ ಸ್ಥಳೀಯರಂತೆ ಬೆರೆತುಹೋಗಿದ್ದಾರೆ. ಕನ್ನಡಿಗರು ಉದಾರರು, ಆದರ್ಶ ಪಾಲಕರು, ಶಾಂತಿಪ್ರಿಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ | PayCM ಪೋಸ್ಟರ್ ಅಭಿಯಾನ ವಿರುದ್ಧ ಸ್ವಾಮೀಜಿಗಳು ಗರಂ, ಸಿಎಂಗೆ ಅಗೌರವ ತೋರಿಸಬೇಡಿ ಎಂದ 25 ಶ್ರೀಗಳು

ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಅನೇಕರು ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ಸ್ವಾತಂತ್ರ್ಯಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ಹರ್ಡೇಕರ್ ಮಂಜಪ್ಪ, ತಗಡೂರು ರಾಮಚಂದ್ರರಾವ್, ಯಶೋಧರ ದಾಸಪ್ಪನವರು ಜೀವಿಸಿದ್ದ ನಾಡು ಇದು. ಬಾಣಾವರ ರಾಮಸ್ವಾಮಿ ಅವರಂತಹ ಅಮರ ದೇಶಪ್ರೇಮಿಗೆ ಈ ನೆಲ ಜನ್ಮನೀಡಿದೆ. ಪಂಪ, ರನ್ನ, ಪೊನ್ನರ ನೆಲೆ ಬೀಡು ಇದು, ಬೇಲೂರು, ಹಳೇಬೀಡು, ಪಟ್ಟದ ಕಲ್ಲು ಐತಿಹಾಸಿಕ ಕ್ಷೇತ್ರಗಳು ಮಹತ್ವ ಪಡೆದುಕೊಂಡಿವೆ ಎಂದರು.

ಬಸವಣ್ಣ, ಅಕ್ಕಮಹಾದೇವಿ, ಪುರಂದರ ದಾಸ, ಕನಕದಾಸರಂತಹ ಮಹನೀಯರು ಈ ನಾಡನ್ನು ಶ್ರೀಮಂತಗೊಳಿಸಿದ್ದು, ಕುವೆಂಪು, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್, ದ.ರಾ. ಬೇಂದ್ರೆ ಮುಂತಾದವರು ಸಾಹಿತ್ಯ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿರುವ ಗಣ್ಯರು, ಸಾಧಕರು ನನಗೆ ರಾಜ್ಯದ ಸಂಸ್ಕೃತಿಯ ದರ್ಶನ ಮಾಡಿಸಿದ್ದಾರೆ. ಅವರು ಏನೇ ಹೊಗಳಿದರೂ ನಾನು ಜನತಾ ಸೇವೆಗೆ ಇರುವ ಸೇವಕಿ ಎಂದು ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಭಾರತದ ಮೊದಲ ಪ್ರಜೆ ರಾಷ್ಟ್ರಪತಿಗಳಿಗೆ ಕರ್ನಾಟಕ ಮತ್ತು ವಿಧಾನಸೌಧದ ಇತಿಹಾಸದಲ್ಲಿ ಮೊದಲ ಬಾರಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆದಿದೆ. ದಸರಾ ಉದ್ಘಾಟನೆಗೆ ಬರಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದ್ದೆ. ಅದಕ್ಕೆ ಒಪ್ಪಿ ಅವರು ಆಗಮಿಸಿದ್ದಾರೆ. ಇದು ರಾಜ್ಯದ ಬಗ್ಗೆ ಅವರಿಗೆ ಇರುವ ಪ್ರೀತಿ ತೋರಿಸುತ್ತದೆ ಎಂದರು.

ಮುರ್ಮು ಅವರಿಗೆ ಸಾರ್ವಜನಿಕ ಜೀವನದ ಅಪಾರ ಅನುಭವ ಅವರಿಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ಕೂಡ ಕಂಡಿದ್ದಾರೆ. ಶಾಲೆ ಶಿಕ್ಷಕಿಯಿಂದ ಮುನಿಸಿಪಲ್ ಕೌನ್ಸಿಲರ್, ಶಾಸಕಿ, ಮಂತ್ರಿಯಾಗಿ ಒಡಿಶಾದದಲ್ಲಿ ಸೇವೆ ಸಲ್ಲಿಸಿ, ಬಳಿಕ ಜಾರ್ಖಂಡ್‌ನಲ್ಲಿ ರಾಜ್ಯಪಾಲರಾಗಿ ಕೆಲಸ ಮಾಡಿದ ಬಳಿಕ ರಾಷ್ಟ್ರಪತಿ ಸ್ಥಾನಕ್ಕೆ ಏರಿದ್ದಾರೆ ಎಂದರು.

ಇದನ್ನೂ ಓದಿ | ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ನೀಡಲಿ: ರಮೇಶ್‌ ಬಾಬು ಆಗ್ರಹ

ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಸಂದೇಶ ರವಾನೆಯಾಗಿದೆ. ನಾವು ಚಿಕ್ಕವರಿದ್ದಾಗ ನಮ್ಮ ಫೋಟೋ ನೋಡಿದಾಗ ಅದರಲ್ಲಿ ಮುಗ್ಧತೆ ಇರುತ್ತಿತ್ತು. ಆದರೆ ಈಗ ಆ ಮುಗ್ಧತೆ ಹೊರಟು ಹೋಗಿದೆ. ಇದರ ಜತೆಗೆ ಆತ್ಮಸಾಕ್ಷಿಯಿಂದ ಬದುಕುವುದು ಕೂಡ ಕಷ್ಟವಾಗಿದೆ. ಆದರೆ ಈ ಎರಡೂ ಗುಣಗಳು ರಾಷ್ಟ್ರಪತಿಗಳಲ್ಲಿ ನಾನು ಕಂಡಿದ್ದೇನೆ ಎಂದರು.

ಅವರು ಯಾವತ್ತೂ ಬದಲಾಗುವುದಿಲ್ಲ, ಚುನಾವಣೆ ಮುನ್ನ ಹಾಗೂ ರಾಷ್ಟ್ರಪತಿ ಆದ ಬಳಿಕವೂ ಅವರನ್ನು ಕಂಡಿದ್ದೇನೆ. ಅವರಲ್ಲಿ ಯಾವುದೇ ಬದಲಾವಣೆ ನೋಡಿಲ್ಲ ಎಂದರು. ಲೀಡರ್ ಯಾವತ್ತೂ ಮುಂದೆ ಲೀಡ್ ಮಾಡುತ್ತಾರೆ, ಹಾಗೆ ಮುರ್ಮು ಅವರು ಎಲ್ಲ ವಿಚಾರಗಳನ್ನು ತಿಳಿದುಕೊಂಡಿದ್ದರೂ ಅದನ್ನು ಅಭಿವ್ಯಕ್ತಿ ಮಾಡದೆ ಮುಗ್ಧತೆ ತೋರಿಸುತ್ತಾರೆ. ಆತ್ಮಸಾಕ್ಷಿಯಾಗಿ ನಡೆಯುವುದು ಬಹಳಷ್ಟು ಕಷ್ಟ, ಆದರೆ ನಮ್ಮ ರಾಷ್ಟ್ರಪತಿಯವರಲ್ಲಿ ಆ ಗುಣವಿದೆ. ದೇಶದಲ್ಲಿ ಮೊದಲು ಪವಾಡಗಳು ನಡೆಯುತ್ತಿದ್ದವು, ಈಗ ವಿಜ್ಞಾನದ ಮೂಲಕ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿವೆ ಎಂದರು.

ಇದಕ್ಕೂ ಮುನ್ನಾ ರಾಷ್ಟ್ರಪತಿಗೆ ಜೋಗತಿ ಮಂಜಮ್ಮ ದೃಷ್ಟಿ ತೆಗೆದದ್ದು ಕಂಡುಬಂತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ರಘುನಾಥ್ ಮಲ್ಕಾಪುರೆ, ಕೇಂದ್ರ ಸಚಿವ ನಾರಾಯಣ ಸ್ವಾಮಿ, ಹಂಗಾಮಿ ನ್ಯಾಯಮೂರ್ತಿ ಅಲೋಕ್ ಅರಾದೆ ಮತ್ತಿತರರು ಇದ್ದರು.

ಇದನ್ನೂ ಓದಿ | Real Shiv Sena | ನಿಜವಾದ ಶಿವಸೇನೆ ಯಾರದ್ದು? ಉದ್ಧವ್‌ ಅರ್ಜಿ ವಜಾಗೊಳಿಸಿದ ಸುಪ್ರೀಂ, ಶಿಂಧೆಗೆ ಮುನ್ನಡೆ

Exit mobile version