ಚಾಮರಾಜ ನಗರ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ ೩೦ರಂದು ಗುಂಡ್ಲುಪೇಟೆಯ ಮೂಲಕ ರಾಜ್ಯವನ್ನು ಪ್ರವೇಶ ಮಾಡಲಿದೆ. ಈ ಯಾತ್ರೆಯ ಸ್ವಾಗತಕ್ಕಾಗಿ ಹಾಕಲಾದ ಫ್ಲೆಕ್ಸ್‌ಗಳನ್ನು ಬುಧವಾರ ರಾತ್ರಿ ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಇದರಿಂದಾಗಿ ಸಣ್ಣಮಟ್ಟಿನ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಬರುವ ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಿದ ಫ್ಲೆಕ್ಸ್‌ಗಳು, ರಾಜ್ಯದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಬ್ಲೇಡ್‌ನಿಂದ ಗೀರಿ ಹರಿದು ಹಾಕಲಾಗಿದೆ. ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಹಲವು ಕಡೆಗಳಲ್ಲಿ ಒಟ್ಟಾಗಿ ಮತ್ತು ಬೇರೆ ಬೇರೆಯಾಗಿ ಹಲವು ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಒಂದು ರೀತಿಯ ಹಬ್ಬದ ವಾತಾವರಣವನ್ನೇ ಸೃಷ್ಟಿಸಲಾಗಿದೆ. ಆದರೆ, ಫ್ಲೆಕ್ಸ್‌ಗಳನ್ನು ಹರಿದು ಹಾಕಿರುವುದು ಜಗಳಕ್ಕೆ ಕಾರಣವಾಗುವ ಸನ್ನಿವೇಶ ನಿರ್ಮಿಸಿದೆ.
ರಾಜ್ಯದಲ್ಲಿ ಯಾತ್ರೆ ಸಂಚಾರ ಹೇಗೆ?
ತಮಿಳುನಾಡಿನಲ್ಲಿ ಸೆ.7ರಂದು ಚಾಲನೆ ಮಡೆದ ಈ ಯಾತ್ರೆ ಸೆ.30 ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಲಕ ರಾಜ್ಯ ಪ್ರವೇಶಿಸಲಿದೆ. ಒಟ್ಟು 7 ಜಿಲ್ಲೆಯಲ್ಲಿ 22 ದಿನಗಳ ಕಾಲ ಈ ಯಾತ್ರೆ ಸಂಚರಿಸಲಿದೆ.
ಸೆಪ್ಟೆಂಬರ್ 30 ಗುಂಡ್ಲುಪೇಟೆಯಿಂದ ಬೇಗೂರು ಯಾತ್ರೆ ಶುರುವಾಗಲಿದ್ದು, ಅ. ೨೦ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶಕ್ಕೆ ತಯಾರಿ ನಡೆಸಲಾಗಿದೆ. ಎರಡು ದಿನ ಗುಂಡ್ಲುಪೇಟೆಯಲ್ಲಿ ಯಾತ್ರೆ ಸಂಚರಿಸಲಿದ್ದು, ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಅಕ್ಟೋಬರ್ 1 ರಂದು ಬೇಗೂರಿನಿಂದ ತಾಂಡವಪುರ, ಹೆಗ್ಗಡದೇವನಕೋಟೆ, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ, ವಿರಾಜಪೇಟೆ, ನಂಜನಗೂಡು, ಹುಣಸೂರು, ರಾಮನಗರ,ಕನಕಪುರ, ಚನ್ನಪಟ್ಟಣ, ಕೈ ಶಾಸಕರು, ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಅಕ್ಟೋಬರ್ 2 ರಂದು ಕಡಕೋಳದಿಂದ ಮೈಸೂರು ಸಿಟಿಯಲ್ಲಿ ಸಂಚಾರ, ಮೂಡಬಿದಿರಿ, ಮಂಗಳೂರು ಉತ್ತರ ಮತ್ತು ದಕ್ಷಿಣ, ನಗರ, ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಕೃಷ್ಣರಾಜನಗರ,ಚಾಮರಾಜ, ಟಿ ನರಸಿಪುರ, ನರಸಿಂಹರಾಜ,ವರುಣ ಕ್ಷೇತ್ರದ ಕೈ ಶಾಸಕರು, ನಾಯಕರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಐಕ್ಯತಾ ಯಾತ್ರೆ ಒಂದು ದಿನ ಸಂಚಾರ ಮಾಡಲಿದ್ದು, ಅಕ್ಟೋಬರ್ 04 ರಂದು ಮೈಸೂರು ಸಿಟಿಯಿಂದ ಟಿಎಸ್ ಛತ್ರಾವರೆಗೂ ಸಾಗಲಿದೆ. ಯಶವಂತಪುರ, ಚಿಕ್ಕಪೇಟೆ, ಚಾಮರಾಜಪೇಟೆ, ಬಿ.ಟಿಎಂ ಲೇಔಟ್, ಜಯನಗರ, ಮಳ್ಳವಳ್ಳಿ, ಮದ್ದೂರು, ಮೇಲುಕೋಟೆ, ಶ್ರೀರಂಗಪಟ್ಟಣ, ಕೃಷ್ಣರಾಜ ನಗರ ಕ್ಷೇತ್ರದವರು ಭಾಗಿಯಾಗಲಿದ್ದಾರೆ. ಒಟ್ಟು 10 ಕ್ಷೇತ್ರಗಳ ಜನ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 04 ಮತ್ತು 05 ರಂದು ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆ ಯಾತ್ರೆಗೆ ಎರಡು ದಿನದ ವಿರಾಮವಿರುತ್ತದೆ. ಅಕ್ಟೋಬರ್ ೬ರಂದು ಮೇಲುಕೋಟೆಯಿಂದ ಯಾತ್ರೆ ಆರಂಭವಾಗಲಿದೆ.