ಉಡುಪಿ: ನೀವು ಕಡಲಲೆಗಳಲ್ಲಿ ಕಾಲು ತೋಯಿಸಿಕೊಂಡು ಸಂಭ್ರಮಪಟ್ಟಿರಬಹುದು. ನೀರಿಗೆ ಮೈಯೊಡ್ಡಿ ಮಧುರಾನುಭವ ಪಡೆದಿರಬಹುದು, ಬೋಟಿನಲ್ಲಿ ಪ್ರಯಾಣಿಸುತ್ತಾ ಏಳುಬೀಳಿನ ಸುಖ ಅನುಭವಿಸಿರಬಹುದು. ಆದರೆ, ಎಂದಾದರೂ ನೀರಿನ ಮೇಲೆ ಸಾಗುತ್ತಾ ಜೋಕಾಲಿಯಾಡುವ ರೋಚಕತೆಯನ್ನು ಕಂಡಿದ್ದೀರಾ?
ಹಾಗಿದ್ದರೆ ಕರ್ನಾಟಕದ ಸುಂದರ ಕಡಲ ಕಿನಾರೆ ಮಲ್ಪೆಗೆ ಒಮ್ಮೆ ಬನ್ನಿ. ಇಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ತೇಲುವ ಸೇತುವೆಯೊಂದು ನಿರ್ಮಾಣವಾಗಿ ಶುಕ್ರವಾರ ಲೋಕಾರ್ಪಣೆಗೊಂಡಿದೆ. ಈಗಾಗಲೇ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ಕಡಲ ತೀರದಲ್ಲಿ ಅಲೆಗಳ ನಡುವೆ ಜೀಕುವ ಈ ಫ್ಲೋಟಿಂಗ್ ಬ್ರಿಜ್ ಎಲ್ಲರ ಗಮನವನ್ನು ಸೆಳೆದಿದೆ.
ಏನಿದು ತೇಲು ಸೇತುವೆ?
ನೀರಿನ ಮೇಲೆ ನಡೆಯುವ, ತೇಲುವ, ಜೋಕಾಲಿಯಾಡುತ್ತಾ ರುದ್ರ ಮತ್ತು ರಮಣೀಯತೆಯನ್ನು ಏಕಕಾಲದಲ್ಲಿ ಅನುಭವಿಸುವಂತೆ ಮಾಡುವ ವಿಶಿಷ್ಟ ವಿನ್ಯಾಸದ ಫ್ಲೋಟಿಂಗ್ ಬ್ರಿಜ್ ಇದು.
ಸಮುದ್ರ ತೀರದಿಂದ 100 ಮೀಟರ್ ಉದ್ದಕ್ಕೆ ಸಮುದ್ರದೊಳಗೆ ಈ ತೇಲು ಸೇತುವೆ ಹಾದು ಹೋಗುತ್ತದೆ. ತೀರದಿಂದ ನೀರಿನ ಒಳಗೆ ಸಾಗುವ ಈ ಸೇತುವೆ ಹ್ಯಾಗಿಂಗ್ ಬ್ರಿಜ್ ಮಾದರಿಯಲ್ಲಿ ನಿರ್ಮಾಣವಾಗಿದ್ದು, 3.5 ಮೀಟರ್ ಅಗಲವಿದೆ. ಫೋಂಟೋನ್ ಬ್ಲಾಕ್‌ಗಳಿಂದ ಮಾಡಲಾಗಿರುವ ಈ ಸೇತುವೆ ಅಲೆಗಳು ಏರಿಳಿದಂತೆ ಮೇಲೆ ಕೆಳಗೆ ಹೋಗುತ್ತದೆ. ಅಂದರೆ ಇದರ ಮೇಲೆ ನಡೆದು ಹೋಗುವಾಗ ತೆರೆಗಳು ಬಂದಾಗ ಈ ಬಾಕ್ಸ್‌ಗಳು ಮೇಲಕ್ಕೇಳುತ್ತವೆ. ತೆರೆ ಇಳಿದಾಗ ಕೆಳಗೆ ಇಳಿಯುತ್ತದೆ. ತೆರೆ ನಿಧಾನವಾಗಿ ಒಳಭಾಗದಿಂದ ತೀರದ ಕಡೆಗೆ ಬರುವಾಗ ಅದು ಏರಿಳಿಯುವ ಅನುಭವವನ್ನು ನೀಡುತ್ತದೆ.
ಇದರ ಮೇಲೆ ಸಾಗುವಾಗ ನಾವು ನೀರಿನ ಮೇಲೆ ಸಾಗಿದ ಅನುಭವ ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ನೀರಿನ ಅಲೆಗಳ ಅಬ್ಬರಕ್ಕೆ ಮೇಲಕ್ಕೆ ಹಾರಿ ಕೆಳಗೆ ಬಿದ್ದಂತೆ ಜೋಕಾಲಿಯ ಖುಷಿ.
ಸೇತುವೆಯ ಕೊನೆಯಲ್ಲಿದೆ ವೇದಿಕೆ!
ತೀರದಿಂದ ನೂರು ಮೀಟರ್ ಒಳಗಿನ ವರೆಗೆ ಈ ಸೇತುವೆ ತೊನೆದಾಡುತ್ತದೆ. ಅದರ ಅಂತ್ಯದಲ್ಲಿ 12 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲದ ಒಂದು ವೇದಿಕೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಸುಮಾರು 15 ನಿಮಿಷ ನಿಂತು ಸಮುದ್ರದ ಸೌಂದರ್ಯವನ್ನು ಸವಿಯಲು ಅವಕಾಶವಿದೆ.
ಅಪಾಯವೇನೂ ಇಲ್ಲ…
ಈ ಆಕರ್ಷಕ ತೂಗುಮಂಚದಂಥ ಸೇತುವೆಯಲ್ಲಿ ಸಾಗಿ ನೀರಿನ ಅಲೆಗಳಲ್ಲಿ ಕುಣಿದೇಳುವುದು ಸುಂದರ ಅನುಭವವೇ ಆದರೂ ಅದರಲ್ಲಿ ಅಪಾಯವೇನೂ ಇಲ್ಲ,. ಯಾಕೆಂದರೆ ಸೇತುವೆ ಮೇಲೆ ಸಾಗುವಾಗ ಸಿಡಿಯುವ ಅಲೆಗಳ ನೀರು, ಮೇಲೆದ್ದು ಕೆಳಗೆ ಬೀಳುವ ಸೇತುವೆಯ ಓಲಾಟಗಳಿಂದ ಯಾರೂ ಸಮುದ್ರಕ್ಕೆ ಉರುಳಿ ಬೀಳದಂತೆ ಎರಡೂ ಬದಿಗಳಲ್ಲಿ ರೇಲಿಂಗ್ಸ್ ಅಳವಡಿಸಲಾಗಿದೆ. ಹಾಗಾಗಿ ನಿರ್ಭಯವಾಗಿ ಸಾಗಬಹುದು.
ಜತೆಗೆ ಸೇತುವೆಯ ಅಕ್ಕ ಪಕ್ಕದಲ್ಲಿ ರಕ್ಷಣೆಗಾಗಿ ಹತ್ತು ಮಂದಿ ಲೈಫ್ ಗಾರ್ಡ್‌ಗಳನ್ನು ನೇಮಿಸಲಾಗಿದೆ.
ಉದ್ಘಾಟನೆಯ ಸಂಭ್ರಮ
ಮಲ್ಪೆ ಬೀಚಿನ ಈ ಹೊಸ ಆಕರ್ಷಣೆಯನ್ನು ಉಡುಪಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಅವರಿಗೆ ಮಾಜಿ ಶಾಸಕ ರಘುಪತಿ ಭಟ್ ಸಾಥ್ ನೀಡಿದರು. ಇದು ಉಡುಪಿಯ ಪ್ರವಾಸೋದ್ಯಮಕ್ಕೆ ಹೊಸ ಮೆರುಗು ನೀಡಲಿದೆ ಎಂದು ಇಬ್ಬರೂ ಸಂಭ್ರಮದಿಂದ ಹೇಳಿಕೊಂಡರು.
ದೇಶದಲ್ಲಿ ಎರಡನೆಯದು
ಮಲ್ಪೆಯಲ್ಲಿ ತೆರೆದುಕೊಂಡಿರುವ ಈ ಅಪೂರ್ವ ಸಾಹಸಿಕ ಸಂಭ್ರಮ ರಾಜ್ಯಕ್ಕೆ ಹೊಸತು. ದೇಶದಲ್ಲಿ ಕೇರಳ ಬಿಟ್ಟರೆ ಬೇರೆ ಯಾವ ಭಾಗದಲ್ಲೂ ಇಂಥ ತೇಲು ಸೇತುವೆ ಇಲ್ಲ ಎನ್ನುವುದು ವಿಶೇಷ. ಕೇರಳದ ಬೇಪೋರ್ ಬೀಚ್‌ನಲ್ಲಿ ಮಾತ್ರ ಇದುವರೆಗೆ ಈ ರೀತಿಯ ಸೇತುವೆ ಇದೆ. ದೇಶದ ಕೆಲವು ಭಾಗದಲ್ಲಿ ಹಿನ್ನೀರಿನಲ್ಲಿ ನೀರಿನ ಮೇಲೆ ನಡಿಗೆಗೆ ಅನುಕೂಲವಾಗುವಂತೆ ಕೆಲವು ಸೇತುವೆಗಳಿವೆ. ಆದರೆ, ಸಮುದ್ರದ ನೀರಿನ ಅಬ್ಬರ, ಇಳಿತಕ್ಕೆ ಏಳುಬೀಳುವ ಇಂಥ ಅನುಭವ ಅತ್ಯಂತ ಅಪರೂಪ.