ಬೆಂಗಳೂರು/ಮೈಸೂರು: ಭ್ರೂಣ ಹತ್ಯೆ (Foeticide Case) ಪ್ರಕರಣದಲ್ಲಿ ದಿನಕ್ಕೊಂದು ಮಹತ್ತರ ಬೆಳವಣಿಗೆ ನಡೆಯುತ್ತಿದ್ದು, ಮತ್ತೊಬ್ಬ ಮಹಿಳೆ ಅರೆಸ್ಟ್ ಆಗಿದ್ದಾಳೆ. ಡಾ ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದ ನರ್ಸ್‌ವೊಬ್ಬಳನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದು, ಆ ಮೂಲಕ ಆರೋಪಿಗಳ ಸಂಖ್ಯೆ ಹತ್ತಕ್ಕೆ ಏರಿಕೆ ಆಗಿದೆ. ಮಂಜುಳಾ ಬಂಧಿತ ಆರೋಪಿ ಆಗಿದ್ದಾಳೆ.
ದಂಧೆ ಬಯಲಾಗುತ್ತಿದ್ದಂತೆ ಕಾಲ್ಕಿತ್ತಿದ್ದ ನರ್ಸ್
ಮಂಜುಳಾ ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಪೊಲೀಸರು ಯಾವಾಗ ಚಂದನ್ ಬಲ್ಲಾಳ್‌ನನ್ನು ಭ್ರೂಣ ಹತ್ಯೆ ದಂಧೆಯಲ್ಲಿ ಅರೆಸ್ಟ್ ಮಾಡಿದ್ದರೋ, ಆಗ ಮಂಜುಳಾ ಕೆಲಸ ಬಿಟ್ಟಿದ್ದಳು. ನಂತರ ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಹಲವು ದಿನಗಳಿಂದ ಮಂಜುಳಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆಕೆ ಜಾಡು ಹಿಡಿದು ಹೋದ ಪೊಲೀಸರು ಮೈಸೂರಿನ ಖಾಸಗಿ ಆಸ್ಪತ್ರೆಯಿಂದಲೇ ವಶಕ್ಕೆ ಪಡೆದು ಕರೆತಂದಿದ್ದಾರೆ.
ವಿಚಾರಣೆಯಲ್ಲಿ ಆರೋಪಿ ಮಂಜುಳಾ ಮೂಲತಃ ಚಾಮರಾಜನಗರದವಳು ಎಂದು ತಿಳಿದು ಬಂದಿದೆ. ಕಳೆದ ಒಂದು ವರ್ಷದಿಂದ ಡಾ. ಬಲ್ಲಾಳ್ ಜತೆ ಮೈಸೂರಿನ ರಾಜ್ ಕುಮಾರ್ ರಸ್ತೆಯ ಆಯುರ್ವೇದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆಯಲ್ಲೆ ಉಳಿದುಕೊಂಡು ಭ್ರೂಣ ಹತ್ಯೆ ದಂಧೆ ನಡೆಸುತ್ತಿದ್ದಳು.
ಇದನ್ನೂ ಓದಿ:Doctor death : ಮಂಡ್ಯದ ಮತ್ತೊಬ್ಬ ಡಾಕ್ಟರ್ ಆತ್ಮಹತ್ಯೆ; ಭ್ರೂಣ ಹತ್ಯೆಗೆ ಸಂಬಂಧ ಇದ್ಯಾ?
ಭ್ರೂಣಗಳನ್ನು ಟಾಯ್ಲೆಟ್‌ನಲ್ಲಿ ಫ್ಲಶ್!
ಭ್ರೂಣ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಘಾತಕಾರಿ ಅಂಶಗಳು ಹೊರಬೀಳುತ್ತಿವೆ. ಚಂದನ್ ಬಲ್ಲಾಳ್ ಮಾಲೀಕತ್ವದ ಮಾತಾ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಜುಳಾ, ತಿಂಗಳಿಗೆ 70ಕ್ಕೂ ಹೆಚ್ಚು ಅಬಾರ್ಷನ್ ಮಾಡಿಸುತ್ತಿದ್ದಳು. ಅಬಾರ್ಷನ್ ಮಾಡಿಸಿದ ಭ್ರೂಣಗಳನ್ನು ನಾನಾ ರೀತಿಯಲ್ಲಿ ಎಸೆಯುತ್ತಿದ್ದಳು.
ಭ್ರೂಣಗಳನ್ನು ಪೇಪರ್‌ನಲ್ಲಿ ಸುತ್ತಿ ಲ್ಯಾಬ್ ಟೆಕ್ನಿಶಿಯನ್ ನಿಸಾರ್‌ಗೆ ಕೊಡುತ್ತಿದ್ದಳು. ಆತ ಮಗುವನ್ನು ಕಾವೇರಿ ನದಿಯಲ್ಲಿ ಎಸೆದು ಬರುತ್ತಿದ್ದ. 12 ವಾರ ಕಳೆದ ಮಕ್ಕಳನ್ನು ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದವು. ಒಮ್ಮೊಮ್ಮೆ ಭ್ರೂಣಗಳನ್ನು ಟಾಯ್ಲೆಟ್‌ನಲ್ಲಿ ಎಸೆದು ಫ್ಲಶ್ ಮಾಡುತ್ತಿದ್ದಾಗಿ ವಿಚಾರಣೆಯಲ್ಲಿ ಹೇಳಿದ್ದಾಳೆ. ಒಂದೆರಡು ಪ್ರಕರಣಗಳಲ್ಲಿ 6 ತಿಂಗಳ ಮಕ್ಕಳನ್ನೂ ಗರ್ಭದಿಂದ ಹೊರತೆಗೆದಿದ್ದೇನೆ. ಆರು ತಿಂಗಳ ಮಗುವಿಗೂ ಜೀವ ಇರುತ್ತಿತ್ತು, ಆದರೆ ಅವುಗಳಿಗೆ ಧ್ವನಿ ಇನ್ನೂ ಬಂದಿರುವುದಿಲ್ಲ. ಆದರೆ ಹೊರ ತೆಗೆದಾಗ ಕೆಲ ಸಮಯದ ನಂತರ ಸಾಯುತ್ತಿದ್ದವು ಎಂದು ಮಂಜುಳಾ ಹೇಳಿದ್ದಾಳೆ.
ಆಪ್ತ ಸಮಾಲೋಚಕಿಯೂ ಆಗಿದ್ದ ನರ್ಸ್ ಮಂಜುಳಾ
ಭ್ರೂಣ ಹತ್ಯೆಗೆ ನರ್ಸ್ ಮಂಜುಳಾನೇ ಆಪ್ತ ಸಮಾಲೋಚಕಿ ಆಗಿರುತ್ತಿದ್ದಳು. ಪೋಷಕರ ಮನವೊಲಿಸಿ ಪ್ರಚೋದನೆ ನೀಡುತ್ತಿದ್ದಳು. ಮೂರ್ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದ ಮಂಜುಳಾ, ಅದೇ ಸಂಪರ್ಕದ ಆಧಾರದ ಮೇಲೆ ಬೇರೆ ಆಸ್ಪತ್ರೆಗೆ ಬಂದ ಗರ್ಭಿಣಿಯರ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಳು. ಭ್ರೂಣ ಲಿಂಗ ಪತ್ತೆಯ ಆಫರ್ ನೀಡಿ ಮಾತಾ ಆಸ್ಪತ್ರೆಯಲ್ಲಿ ಅಬಾರ್ಷನ್ ಮಾಡಿಸುತ್ತಿದ್ದಳು. ಸದ್ಯ ಮಂಜುಳಾನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.