Site icon Vistara News

Food Street | ಚರ್ಚ್​ಸ್ಟ್ರೀಟ್​ ಮಾದರಿ ಕಂಗೊಳಿಸಲಿದೆ ವಿ.ವಿ ಪುರಂ ಫುಡ್​​ಸ್ಟ್ರೀಟ್​; ಹೈಟೆಕ್‌ ಆಗುತ್ತಿದೆ ಆಹಾರಲೋಕ

vv puram food street1

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರುಚಿ ರುಚಿಯಾದ ಬಗೆ ಬಗೆಯ ತಿಂಡಿ, ತಿನಿಸು ಬೇಕು ಎಂದರೆ ಮೊದಲಿಗೆ ನೆನಪಿಗೆ ಬರುವುದೇ ವಿ.ವಿ ಪುರಂ ಫುಡ್‌ಸ್ಟ್ರೀಟ್‌. ಈಗ ಜನರ ನೆಚ್ಚಿನ ಫುಡ್‌ ಸ್ಟ್ರೀಟ್‌ಗೆ (Food Street) ಬಿಬಿಎಂಪಿ ಹೊಸ ರೂಪ ಕೊಡಲು ಸಜ್ಜಾಗಿದ್ದು, ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಫುಡ್‌ ಸ್ಟ್ರೀಟ್‌ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ (ಡಿ. ೧೩) ಗುದ್ದಲಿ ಪೂಜೆಯನ್ನು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ನೆರವೇರಿಸಿದರು.

ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್​ ರಾಯ್​​ಪುರ್​​​, ದಕ್ಷಿಣ ವಲಯ ಮುಖ್ಯ ಎಂಜಿನಿಯರ್‌ ಮೋಹನ್ ಕೃಷ್ಣ, ಕಾರ್ಯಪಾಲಕ ಎಂಜಿನಿಯರ್‌ ಮಹಂತೇಶ್ ಸಾಥ್‌ ನೀಡಿದರು.

Food Street

ಹೇಗಿರಲಿದೆ ಹೈಟೆಕ್​​​ ಫುಡ್​ಸ್ಟ್ರೀಟ್​?
ಗ್ರಾಹಕರಿಗೆ ಮೀಸಲಾದ ಆಸನ ವ್ಯವಸ್ಥೆ, ರಸ್ತೆಯ ಎರಡೂ ಬದಿಯಲ್ಲಿ 900 ಮಿ.ಮೀ RCC ಕಾಲುವೆ ಹಾಗೂ
ಎರಡೂ ಕಡೆ 300 ಮಿ.ಮೀ.ನ ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಮಾಡಲಾಗುತ್ತದೆ. 6 ಕಡೆ ಕೈತೊಳೆಯುವ ವ್ಯವಸ್ಥೆ ಜತೆಗೆ 5 ಅಗಲದ ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ಹಸಿ ಕಸ/ಒಣ ಕಸ ಹಾಕಲು ಡಸ್ಟ್‌ಬಿನ್‌ಗಳ ವ್ಯವಸ್ಥೆ, ಎರಡೂ ಕಡೆ ಮಳಿಗೆಗಳ ಮುಂಭಾಗ ಕೆನೋಪಿಗಳ ಅಳವಡಿಕೆ ಮಾಡಲಾಗುತ್ತದೆ. ವಿಶಾಲವಾದ ಪಾದಚಾರಿ ಮಾರ್ಗಗಳು ಹಾಗೂ ಸುತ್ತಮುತ್ತ ಸಸಿಗಳನ್ನು ನೆಡುವ ವ್ಯವಸ್ಥೆ ಮಾಡಲಾಗುತ್ತದೆ.

೬ ತಿಂಗಳೊಳಗೆ ಪೂರ್ಣ
ಫುಡ್​ಸ್ಟ್ರೀಟ್​ ಕಾಮಗಾರಿ ಶೀಘ್ರದಲ್ಲೇ ಶುರುವಾಗಲಿದ್ದು, ಪೂರ್ಣಗೊಳ್ಳಲು 4-6 ತಿಂಗಳ ಡೆಡ್​ಲೈನ್​ ನಿಗದಿಪಡಿಸಲಾಗಿದೆ. ಅಲ್ಲದೆ ಈ ಮಧ್ಯೆ ಏನಾದರೂ ಅಡೆತಡೆಗಳಾದರೆ ಸಮಯ ಇನ್ನಷ್ಟು ವಿಸ್ತರಣೆಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಇಲ್ಲಿನ ವ್ಯಾಪಾರಿಗಳಿಗೂ ಕಾಮಗಾರಿ ನಡೆಯುವಷ್ಟೂ ಕಾಲ ಆರ್ಥಿಕ ಹೊಡೆತಕ್ಕೆ ತುತ್ತಾಗುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ವಿವಿ ಪುರಂ ಫುಡ್​ಸ್ಟ್ರೀಟ್​ಗೆ ಆಧುನಿಕತೆಯ ಸ್ಪರ್ಶ ಸಿಗುತ್ತಿದೆ. ದಿನಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ಹಾಗೂ ತಿಂಡಿಪ್ರಿಯರ ಹಾಟ್​ಸ್ಪಾಟ್​​ ಇನ್ನಷ್ಟು ಕಲರ್​​ಫುಲ್​ ಆಗಿ ಮತ್ತಷ್ಟು ಗ್ರಾಹಕರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ | Road Accident | ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಗೆ ಲಾರಿ ಡಿಕ್ಕಿ; ಗಂಭೀರ ಗಾಯ

Exit mobile version