ಕೊಪ್ಪಳ: ಉತ್ತರ ಕನ್ನಡ, ದಕ್ಷಿಣ ಕನ್ನಡದ ಬಳಿಕ ಇದೀಗ ಕೊಪ್ಪಳದಲ್ಲಿಯೂ ಮತಾಂತರ (Forced conversion) ಭೂತ ವಕ್ಕರಿಸಿದೆ. ಅತ್ಯಾಚಾರ ಬೆದರಿಕೆ, ಆಮಿಷವೊಡ್ಡಿ ಬಲವಂತವಾಗಿ ಕುಟುಂಬವೊಂದನ್ನು ಮತಾಂತರ ಮಾಡಿರುವ ಆರೋಪ ಕೇಳಿ ಬಂದಿದ್ದು, ಮೂವರ ವಿರುದ್ಧ ಕಾರಟಗಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರಟಗಿ ಪಟ್ಟಣದಲ್ಲಿ ಬಲವಂತವಾಗಿ ಕುಟುಂಬವೊಂದನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿರುವ ಆರೋಪ ಕೇಳಿ ಬಂದಿದೆ. ಕಾರಟಗಿ ಪಟ್ಟಣದ ರಾಮನಗರದ ನಿವಾಸಿ ಶಂಕರ್ ಎಂಬುವವರು ಇಲ್ಲಿನ ಗ್ರೇಸ್ ಪ್ರಾರ್ಥನಾ ಮಂದಿರದ ಪಾಸ್ಟರ್ ಸತ್ಯನಾರಾಯಣ ಅಲಿಯಾಸ್ ಸ್ಯಾಮುವೆಲ್, ಶಿವಮ್ಮ ಅಲಿಯಾಸ್ ಸಾರಾ ಹಾಗೂ ಚಿರಂಜೀವಿ ಅಲಿಯಾಸ್ ಡ್ಯಾನಿಯೆಲ್ ಎಂಬುವವರ ಮೇಲೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಇದೇ ಡಿಸೆಂಬರ್ 9 ರಂದು ದೂರು ದಾಖಲಿಸಿದ್ದರು.
ಧರ್ಮ ಬಿಟ್ಟು ಹೋದರೆ ನಿಮ್ಮನ್ನ ಸಾಯಿಸುತ್ತೇವೆ!
ಮತಾಂತರಿಗಳು ಮನೆಗೆ ನುಗ್ಗಿ ಬಲವಂತದಿಂದ ಮತಾಂತರ ಮಾಡಿದ್ದಲ್ಲೇ, ಒಂದು ವೇಳೆ ಹಿಂದು ಧರ್ಮಕ್ಕೆ ಮರಳಿದರೆ ನಾನೇ ನಿಮ್ಮನ್ನು ಸಾಯಿಸುತ್ತೇನೆ’. ‘ನಿಮ್ಮ ಮಕ್ಕಳನ್ನು ಅಪಹರಿಸಿ ಅತ್ಯಾಚಾರ ಮಾಡಿಸುತ್ತೇನೆ’ ಎಂದು ಸತ್ಯನಾರಾಯಣ ಅಲಿಯಾಸ್ ಸ್ಯಾಮುವೆಲ್ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಶಂಕರ್ ಕಾರಟಗಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮನೆಯಲ್ಲಿದ್ದ ಹಿಂದು ದೇವರ ಫೋಟೊವನ್ನು ಕಿತ್ತೆಸೆದರು
ಕಳೆದ ಫೆಬ್ರವರಿ 6ರಂದು ಆರೋಪಿತರು ಮನೆಯಲ್ಲಿದ್ದ ಹಿಂದು ದೇವರ ಫೋಟೊಗಳನ್ನು ನಾಲೆಗೆ ಎಸೆದು ನಮ್ಮನ್ನು ಮತಾಂತರ ಮಾಡಿದರು. ಕ್ರಿಶ್ಚಿಯನ್ ಧರ್ಮವನ್ನು ಪಾಲಿಸದಿದ್ದರೆ ದೆವ್ವ, ಪಿಶಾಚಿಗಳಾಗಿ ಅಲೆಯುತ್ತೀರಿ. ಮತ್ತೆ ವಾಪಸ್ ಹಿಂದು ಧರ್ಮಕ್ಕೆ ಹೋಗದೆ ಕ್ರಿಶ್ಚಿಯನ್ ಧರ್ಮ ಪಾಲಿಸುವಂತೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಕಾನೂನು ಬಾಹಿರ ಚರ್ಚೆಗಳು
ಆಸೆ ಆಮಿಷಗಳ ಮೂಲಕ ಶಂಕರ ಅವರ ಕುಟುಂಬವನ್ನು ಮತಾಂತರ ಮಾಡಿದ್ದಾರೆ. ಇದರಿಂದ ಅನೇಕರು ಮತಾಂತರವಾಗುತ್ತಿದ್ದಾರೆ. ಕಾರಟಗಿ ಪಟ್ಟಣದಲ್ಲಿ ಕಾನೂನು ಬಾಹಿರವಾಗಿ ಚರ್ಚ್‌ಗಳು ಸ್ಥಾಪನೆಯಾಗುತ್ತಿದ್ದು ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಸಂಘಟನೆ ಕಾರ್ಯಕರ್ತ ರವಿಕುಮಾರ್ ಆಗ್ರಹಿಸಿದ್ದಾರೆ.
ದೂರು ದಾಖಲಿಸಿರುವ ಶಂಕರ್ ಹಾಗೂ ಆರೋಪ ಹೊತ್ತಿರುವ ಸ್ಯಾಮುವೆಲ್ ಸಂಬಂಧಿಕರಾಗಿದ್ದಾರೆ. ಇದು ಮತ್ತೊಂದು ಪ್ರಕರಣಕ್ಕೂ ತಳುಕು ಹಾಕಿಕೊಂಡಿದೆ ಎಂಬ ಮಾಹಿತಿ ಇದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸರಿಯಾಗಿ ತನಿಖೆ ನಡೆಸಿದಾಗ ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಎಂದು ಹಿಂದು ಸಂಘಟನೆಗಳು ಅಭಿಪ್ರಾಯ ಪಟ್ಟಿವೆ.
ಇದನ್ನೂ ಓದಿ | Forced conversion | ಕೊಪ್ಪಳದಲ್ಲಿ ಬಲವಂತದ ಮತಾಂತರ ಪ್ರಕರಣ, ಮೂವರ ವಿರುದ್ಧ ದೂರು ದಾಖಲು