ಮೈಸೂರು: ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಎಂಕಾಂ ವಿದ್ಯಾರ್ಥಿನಿ ಮೇಘನಾ (೨೨) ಅವರನ್ನು ಬಲಿ ಪಡೆದ ಚಿರತೆಯನ್ನು ಜೀವಂತವಾಗಿ ಇಲ್ಲವೇ ಶವವಾಗಿ ಸೆರೆ ಹಿಡಿಯುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಇಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಚಿರತೆಗಳು ಇಬ್ಬರನ್ನು ಬಲಿ ಪಡೆದ ಹಿನ್ನೆಲೆಯಲ್ಲಿ ಚಿರತೆಯನ್ನು ಹಿಡಿಯುವಂತೆ ಸಾರ್ವಜನಿಕರಿಂದ ದೊಡ್ಡ ಮಟ್ಟದ ಒತ್ತಡವಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯೂ ಅದನ್ನು ಹಿಡಿಯಲು ಮುಂದಾಗಿದೆ. ಪ್ರಾಥಮಿಕವಾಗಿ ಅದನ್ನು ಜೀವಂತವಾಗಿ ಸೆರೆ ಹಿಡಿಯುವ ಪ್ಲ್ಯಾನ್ ಇದ್ದರೆ, ಅಗತ್ಯ ಬಿದ್ದರೆ ಗುಂಡು ಹೊಡೆದು ಸಾಯಿಸಲೂ ಹಿಂದೆ ಮುಂದೆ ನೋಡುವುದಿಲ್ಲ ಎಂಬ ಅಭಿಪ್ರಾಯವಿದೆ.
ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಹೇಳಿದ್ದೇನು?
ಮೈಸೂರು ವೃತ್ತದ ವ್ಯಾಪ್ತಿಯಲ್ಲಿ ಮೈಸೂರು, ಮಂಡ್ಯ, ಹುಣಸೂರು, ಬಂಡಿಪುರ ವಿಭಾಗಗಳು ಬರುತ್ತವೆ.
ಎಲ್ಲ ಕಡೆಯಿಂದ ಸಿಬ್ಬಂದಿ ಕರೆಸಿಕೊಂಡಿದ್ದೇವೆ. ಡ್ರೋನ್ ಮೂಲಕ ಚಿರತೆ ಚಲನವಲನ ಕಂಡು ಹಿಡಿಯಲು ಪ್ರಯತ್ನಿಸಲಾಗಿದೆ. ಚಿರತೆ ಕಂಡರೆ ಅರಿವಳಿಕೆ ಮದ್ದು ಹೊಡೆದು ಪ್ರಜ್ಞೆ ತಪ್ಪಿಸಲಾಗುವುದು. ಗುಂಡು ಹೊಡೆದು ಸಾಯಿಸುವುದಕ್ಕೂ ಪಿಸಿಸಿಎಫ್ ಅನುಮತಿ ಸಿಕ್ಕಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯ ಹೇಳಿದ್ದಾರೆ.
ʻʻನಾಲ್ಕು ಸಹಾಯವಾಣಿ ನಂಬರ್‌ಗಳನ್ನು ಗ್ರಾಮಸ್ಥರಿಗೆ ಕೊಟ್ಟಿದ್ದೇವೆ. ಚಿರತೆ ಸುಳಿವು ಸಿಕ್ಕ ಕೂಡಲೇ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ. ತಪ್ಪು ಮಾಹಿತಿ ನೀಡಿದರೆ ಕಾರ್ಯಾಚರಣೆಗೆ ತೊಂದರೆ ಆಗುತ್ತದೆʼʼ ಎಂದು ಹೇಳಿದ್ದಾರೆ.
ತಿಂಗಳಲ್ಲಿ ಎರಡು ಬಲಿ
ಡಿಸೆಂಬರ್ ೧ರಂದು ಸಂಜೆ ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದಲ್ಲಿ ಮೇಘನಾ (೨೨) ಅವರು ಊಟ ಮಾಡಿ ಬಟ್ಟಲು ತೊಳೆದು ನೀರನ್ನು ಚೆಲ್ಲಲೆಂದು ಹೊರಗೆ ಬಂದಾಗ ಚಿರತೆ ದಾಳಿ ಮಾಡಿ ಅವರ ಪ್ರಾಣವನ್ನೇ ಕಸಿದಿತ್ತು. ಇದೇ ವೇಳೆ, ಅಕ್ಟೋಬರ್ ೩೧ರಂದು ಇದೇ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಕಳೆದ ಅಕ್ಟೋಬರ್ ೩೧ರಂದು ಎಂ.ಎಲ್.ಹುಂಡಿ ಗ್ರಾಮದ ಮಂಜುನಾಥ್ (20) ಎಂಬ ಕಾಲೇಜು ವಿದ್ಯಾರ್ಥಿಯನ್ನು ಚಿರತೆ ಬಲಿ ಪಡೆದಿತ್ತು. . ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದಾಳಿ ನಡೆದಿತ್ತು.
ಇದನ್ನೂ ಓದಿ ಚಿರತೆ ಕಾಟ | ಬೆಂಗಳೂರಿನ ಸುತ್ತಮುತ್ತ ಹೊಂಚು ಹಾಕಿರುವ ನಾಲ್ಕು ಚಿರತೆ, ಅರಣ್ಯ ಇಲಾಖೆ ಅಲರ್ಟ್