ಹಾಸನ: ಗ್ರಾಮಗಳನ್ನು ಪ್ರವೇಶಿಸುತ್ತಿರುವ ಕಾಡಾನೆಗಳು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಮನೆಗಳ ಮುಂದೆ ಕಾದುನಿಲ್ಲುವ ದೃಶ್ಯಗಳು ಸಕಲೇಶಪುರ ತಾಲೂಕಿನಲ್ಲಿ ಕಂಡುಬರುತ್ತಿವೆ.
ಹಸಿದ ಹೊಟ್ಟೆಗೆ ಹಿಡಿಯಷ್ಟು ಆಹಾರ ಸಿಗದೇ ಕಾಡಾನೆಗಳು ಪರದಾಟ ಅನುಭವಿಸುತ್ತಿದ್ದು, ಗ್ರಾಮಗಳನ್ನು ಪ್ರವೇಶಿಸಿ ಆಹಾರಕ್ಕಾಗಿ ಮನೆಗಳ ಮುಂದೆ ಬಂದು ನಿಲ್ಲುತ್ತಿವೆ. ಆಹಾರಕ್ಕಾಗಿ ಅವು ಅಂಗಲಾಚುತ್ತಿರುವ ದೃಶ್ಯಗಳು ಅಯ್ಯೋ ಎನಿಸದೇ ಇರದು. ಆದರೆ ಆನೆಗೆ ಕೊಡುವಷ್ಟು ಆಹಾರ ಈ ಮನೆಗಳಲ್ಲೂ ಇಲ್ಲದ ಕಾರಣ ಗ್ರಾಮಸ್ಥರೂ ಅಸಹಾಯಕತೆ, ಆತಂಕ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ | Electrocution | ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ರಹಸ್ಯವಾಗಿ ಮಣ್ಣುಮಾಡಲು ಹೋಗಿ ಸಿಕ್ಕಿಬಿದ್ದ ಹೊಲದ ಮಾಲೀಕ
ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮನು ಎಂಬಾತ ಕಾಡಾನೆ ತುಳಿತಕ್ಕೆ ಬಲಿಯಾಗಿದ್ದ. ಅದೇ ಗ್ರಾಮದ ಲೋಕೇಶ್ ಎಂಬವರ ಮನೆ ಬಳಿ ನಿನ್ನೆ ಮಧ್ಯಾಹ್ನ ಕಾಡಾನೆಯೊಂದು ಬಂದಿದೆ. ಆಹಾರಕ್ಕಾಗಿ ಮನೆಯ ಹಿಂದೆ ಮುಂದೆ ಓಡಾಡಿದ ಕಾಡಾನೆ ಸುಮಾರು ಅರ್ಧಗಂಟೆಗೂ ಹೆಚ್ಚು ಹೊತ್ತು ಮನೆಯ ಮುಂದೆ ನಿಂತಿತ್ತು.
ಮೊದಲೇ ಕಾಡಾನೆಗಳ ಭಯದಲ್ಲಿದ್ದ ಜನ ಆಹಾರ ನೀಡಲು ಹಿಂದೇಟು ಹಾಕಿದ್ದಾರೆ. ಕೆಲಹೊತ್ತು ಕಾದು ಯಾವುದೇ ಪ್ರಯೋಜನವಾಗದೇ ಕಾಡಾನೆ ವಾಪಸ್ಸು ಹೋಗಿದೆ. ಆಹಾರಕ್ಕಾಗಿ ಆನೆ ಮೂಕವಾಗಿ ಪರದಾಡುತ್ತಿದ್ದ ಕರುಣಾಜನಕ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.
ಕಾಡಿನೊಳಗೆ ಆಹಾರ ಸಿಗದೇ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ಹೀಗೇ ಮುಂದುವರಿದರೆ, ಕಾಡಾನೆಗಳು ನಾಡಿನಲ್ಲೇ ಬೀಡುಬಿಟ್ಟು ಜನರ ದಿನನಿತ್ಯದ ಚಟುವಟಿಕೆಗೆ ತೊಂದರೆಯಾಗಬಹುದು. ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | Elephant attack | ಆನೆ ತುಳಿತಕ್ಕೆ ಅರಣ್ಯ ವೀಕ್ಷಕ ಬಲಿ; ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಸ್ಥಳೀಯರ ಒತ್ತಾಯ