ತುಮಕೂರು: ರೈತರ ಮೇಲೆ ಯದ್ವಾತದ್ವಾ ಲಾಠಿ ಬೀಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಹತ್ತಕ್ಕೂ ಹೆಚ್ಚು ರೈತರ ತಲೆಬುರುಡೆ ಒಡೆದುಹೋಗುವಂತೆ ಥಳಿಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಗಂಗಯ್ಯನಪಾಳ್ಯದಲ್ಲಿ ಈ ಅಮಾನುಷ ಘಟನೆ ನಡೆದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಇದ್ದಕ್ಕಿದ್ದಂತೆ ತಲೆ ಮೈಕೈ ಎನ್ನದೆ ಲಾಠಿ ಚಾರ್ಜ್ ನಡೆಸಿದ್ದು, 20ಕ್ಕೂ ಹೆಚ್ಚು ರೈತರಿಗೆ ಗಾಯಗಳಾಗಿವೆ. ಮೂವರು ರೈತರಿಗೆ ಗಂಭೀರ ಗಾಯವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ರೈತರಿಗೆ ಲಾಠಿ ಹಿಡಿದು ಮನಬಂದಂತೆ ಥಳಿಸುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಬಗರ್‌ಹುಕುಂ ಗಲಾಟೆ ಈ ಗಲಭೆಗೆ ಕಾರಣವಾಗಿದೆ. ಗಂಗಯ್ಯನ ಪಾಳ್ಯದಲ್ಲಿರುವ ಬಗರ್ ಹುಕುಂ ಭೂಮಿಯನ್ನು ನೂರಾರು ರೈತರು ಕಳೆದ 40-50 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿದ್ದು, ಏಕಾಏಕಿ ಕಳೆದ ಮೂರು ವರ್ಷಗಳ ಹಿಂದೆ ಇದು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಅಂದಿನಿಂದ ಇಂದಿನವರೆಗೂ ಬಗರ ಹುಕುಂ ಭೂಮಿ ಪಡೆಯಲು ರೈತರು ಹೋರಾಟ ಮಾಡುತ್ತಿದ್ದಾರೆ. ರೈತ ಸಂಘಟನೆ ಹಾಗೂ ನೂರಾರು ರೈತರಿಂದ ನಿರಂತರ ಹೋರಾಟ ನಡೆದಿದ್ದು, ತಹಶೀಲ್ದಾರ್, ಎಸಿ, ಡಿಸಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಚಿವರ ಜೊತೆ ಸಭೆ ಕೂಡ ನಡೆಸಿದ್ದರು.
ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಅವರು ಒಂದು ಸಲ ಸರ್ವೆ ಮಾಡಿ ರೈತರಿಗೆ ಭೂಮಿ ಕೊಡಿಸೋಣ ಎಂದಿದ್ದರು. ಇನ್ನೊಂದು ಸಲ ಅದನ್ನು ಸರ್ಕಾರ ತಡೆಹಿಡಿದಿದೆ ಎಂದಿದ್ದರು. ಜಂಟಿ ಸರ್ವೆ ಮಾಡಿ ನೋಡೋಣ ಎಂದು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿ ಪರಿಶೀಲನೆ ಮಾಡುತ್ತೇವೆ ಎಂದು ಕಾಲ ತಳ್ಳಿದ್ದರು. ಜಂಟಿ ಸರ್ವೆ ಮಾಡಲು ಹಿಂದೇಟು ಹಾಕಿದ್ದರು. ಎಷ್ಟೇ ಪ್ರತಿಭಟನೆ ಮಾಡಿದರೂ ರೈತರಿಗೆ ಜಮೀನು ಬಿಟ್ಟು ಕೊಡದ ಪರಿಣಾಮ ನಮಗೆ ಭೂಮಿ ಬೇಕೇ ಬೇಕು ಎಂದು ಪಟ್ಟು ಹಿಡಿದ ಸುಮಾರು 500ಕ್ಕೂ ಹೆಚ್ಚು ರೈತರು ಕಳೆದ ಒಂದು ತಿಂಗಳಿಂದ ಪ್ರತಿಭಟನೆ ನಡೆಸಿದ್ದರು.
ರೈತರ ಪ್ರತಿಭಟನೆಗೆ ಬಗ್ಗದ ಅರಣ್ಯ ಅಧಿಕಾರಿಗಳು ಗುಬ್ಬಿ ಅರಣ್ಯ ವಲಯ ಅಧಿಕಾರಿ ದುಗ್ಗಪ್ಪ ನೇತೃತ್ವದಲ್ಲಿ ನಿನ್ನೆ ಸಂಜೆ ಏಕಾಏಕಿ ಬುಲ್‌ಡೋಜರ್ ಕೊಂಡೊಯ್ದು ರೈತರ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದರು. ಇದನ್ನು ತಡೆಯಲು ಹೋದ ರೈತರಿಗೆ ಲಾಠಿ ಹಿಡಿದು ಮನಸೋಇಚ್ಛೆ ಥಳಿಸಿದ್ದಾರೆ. 30ಕ್ಕೂ ಹೆಚ್ಚು ರೈತರನ್ನು ಥಳಿಸಲಾಗಿದೆ. ಗಾಯಾಳುಗಳು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಕ್ಷಸರಂತೆ ವರ್ತಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಮೇಲೆ ಗೂಂಡಾ ವರ್ತನೆ ಮಾಡಿದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದೇ ವೇಳೆ ಆಕ್ರೋಶಗೊಂಡ ರೈತರು ಕೂಡ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಸಿಬ್ಬಂದಿಗೆ ಗಾಯವಾಗಿದೆ.
ಇದನ್ನೂ ಓದಿ: Sagara News: ರೈತರ 20 ಎಕರೆ ಜಮೀನಿಗೆ ಗುಂಡಿ ತೆಗೆದು ಒಕ್ಕಲೆಬ್ಬಿಸಲು ಮುಂದಾದ ಅರಣ್ಯ ಇಲಾಖೆ: ರೈತರ ಧರಣಿ