ಮಡಿಕೇರಿ: ಅರಣ್ಯ ವೀಕ್ಷಣೆಯ ಕೆಲಸ ಮಾಡುತ್ತಿದ್ದ ವಾಚರ್ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಅರಣ್ಯ ಪ್ರದೇಶದ ತೊಡಿಕಾನದ ಸಿಪಿಟಿ ೭೬ರಲ್ಲಿ ಘಟನೆ ನಡೆದಿದೆ.
ಅರಣ್ಯ ವೀಕ್ಷಕ ಚಿನ್ನಪ್ಪ ಎಂ. ಎಚ್ ಮೃತಪಟ್ಟ ಅರಣ್ಯ ಇಲಾಖೆ ಸಿಬ್ಬಂದಿಯಾಗಿದ್ದಾರೆ. ಇವರು ಅರಣ್ಯದಲ್ಲಿ ಬೀಟ್‌ಗೆ ಹೋದಾಗ ಬಾಯಾರಿಕೆಯಾಗಿತ್ತು. ಅವರು ಅರಣ್ಯದೊಳಗಿನ ಜಲಪಾತದ ಬಳಿ ನೀರು ಕುಡಿಯಲು ಹೋಗಿದ್ದರು. ಈ ವೇಳೆ ಕಾಲು ಜಾರಿ ಝರಿಯ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಮಂಗಳವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಕಾರ್ಯಾಚರಣೆ ಶುರು ಮಾಡಿದರು. ಜಲಪಾತದ ಕೆಳಭಾಗದ ನೀರಲ್ಲಿ ಅರಣ್ಯ ವೀಕ್ಷಕ ಚಿನ್ನಪ್ಪ ಮೃತದೇಹ ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಪ್ರದೇಶದಿಂದ ಮೃತದೇಹ ಹೊತ್ತು ತಂದಿದ್ದಾರೆ. ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.