Site icon Vistara News

ನನ್ನ ಬೆಳವಣಿಗೆಯಲ್ಲಿ ಎಜೆಆರ್ ಪಾತ್ರ ದೊಡ್ಡದು ಎಂದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ

ಯಡಿಯೂರಪ್ಪ

ಶಿವಮೊಗ್ಗ: ರಾಜ್ಯ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚಿಸುತ್ತಿದ್ದ ಎ.ಜೆ.ರಾಮಚಂದ್ರ (ಎಜೆಆರ್) ಅವರು, ಭವಿಷ್ಯದ ರಾಜಕೀಯ ನಡೆಗಳ ಬಗ್ಗೆ ಅವರು ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದರು. ರಾಮಚಂದ್ರ ಹಾಗೂ ದಿವಂಗತ ಹಿರಿಯೂರು ಕೃಷ್ಣಮೂರ್ತಿ ಅವರಂತಹವರಿಂದ ನಾವು ಇಂದು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದೇವೆ. ನನ್ನ ವೈಯಕ್ತಿಕ ಬೆಳವಣಿಗೆಯಲ್ಲಿ ಎಜೆಆರ್ ಅವರ ಪಾತ್ರ ಮಹತ್ವದ್ದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿಕ್ಷಣ ತಜ್ಞ ಎ.ಜೆ.ರಾಮಚಂದ್ರ ಅವರಿಗೆ ಅಭಿವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಅವರಿಗೆ ಸರಿಸಾಟಿ ಮತ್ತೊಬ್ಬರಿಲ್ಲ ಎಂದು ಬಣ್ಣಿಸಿದರು. ಎಜೆಆರ್‌ ಅವರಿಗೆ 70ನೇ ವರ್ಷದ ಜನ್ಮ ದಿನದ ಶುಭಾಶಯ ಕೋರಿದರು.

40 ವರ್ಷಗಳಿಂದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರ, ವಿಶ್ವ ಹಿಂದು ಪರಿಷತ್‌, ಆರ್‌ಎಸ್‌ಎಸ್‌ ಸಕ್ರಿಯ ಕಾರ್ಯಕರ್ತರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಮೂಲತಃ ಶಿಕ್ಷಕರಾದ ಅವರು ಆರ್‌ಎಸ್‌ಎಸ್‌ನ ವಿಕಾಸ ವಿದ್ಯಾ ಸಂಸ್ಥೆಯ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದಾರೆ. ಹೀಗಾಗಿ ಸಂಸ್ಥೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸಂಸ್ಥೆ ಹೊಂದುವಲ್ಲಿ ಅವರ ಶ್ರಮವಿದೆ ಎಂದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನನ್ನ ಮೊದಲ ಚುನಾವಣೆಯಲ್ಲಿ ಎಜೆಆರ್ ಪ್ರಮುಖ ಪಾತ್ರ ವಹಿಸಿದ್ದರು. ಇದರ ಪರಿಣಾಮ ನಾನು ವಿಧಾನಸಭೆ ಪ್ರವೇಶಿಸುವುದು ಸಾಧ್ಯವಾಯಿತು ಎಂದರು.

ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಗೆಲುವಲ್ಲಿ ಎಜೆಆರ್ ಪಾತ್ರ ದೊಡ್ಡದು. ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಅವರು ಬೆವರು ಸುರಿಸಿದ್ದಾರೆ. ಎಜೆಆರ್ ಅವರಿಗೆ ವಿಧಾನ ಪರಿಷತ್ ಸದಸ್ಯರಾಗುವ ಎಲ್ಲ ಅರ್ಹತೆಯೂ ಇತ್ತು. ಆದರೆ ಅವರು ಅಧಿಕಾರ ಬಯಸಲಿಲ್ಲ. ಇದೊಂದು ರಾಜಕೀಯದ ಅಚ್ಚರಿ ಎಂದರು.

ಆರ್.ಎಸ್.ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಸಂಸದ‌ ಬಿ.ವೈ.ರಾಘವೇಂದ್ರ ಮಾತನಾಡಿ ಎಜೆಆರ್ ಸೇವೆಯನ್ನು ಸ್ಮರಿಸಿದರು.

ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಅಭಿನಂದನಾ ಸಮಿತಿ ಅಧ್ಯಕ್ಷ ಬಿ.ಸಿ.ನಂಜುಂಡ ಶೆಟ್ಟಿ, ಉಪಾಧ್ಯಕ್ಷ ಕೆ.ಸಿ.ನಟರಾಜ ಭಾಗವತ್, ಸಂಚಾಲಕ ಎಂ.ಶಂಕರ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | BJP Strategy | ಲೋಕಸಭೆ ಚುನಾವಣೆಗೆ ಅಮಿತ್‌ ಶಾ ರಣತಂತ್ರ ಶುರು, 144 ಕ್ಷೇತ್ರಗಳ ಬಗ್ಗೆಯೇ ಏಕೆ ಪ್ರಾಮುಖ್ಯತೆ?

Exit mobile version