Site icon Vistara News

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ʼಜೀವನದಿʼ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಜೀವನದಿ

ಪಾಂಡವಪುರ: ತಾಲೂಕಿನ ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ʼಜೀವನದಿʼ ರಾಷ್ಟ್ರೀಯ ಪ್ರಶಸ್ತಿಯನ್ನು ಶ್ರೀ ತ್ರಿನೇತ್ರ ಸ್ವಾಮೀಜಿ ಪ್ರದಾನ ಮಾಡಿ ಗೌರವಿಸಿದರು.

ತಾಲೂಕಿನ ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದ ವತಿಯಿಂದ ಶ್ರೀ ಮಠದ ಸಂಸ್ಥಾಪಕರಾದ ಮಹಾತಪಸ್ವಿ ಹಾಗೂ ಶತಾಯುಷಿ ಪೂಜ್ಯ ಲಿಂಗೈಕ್ಯರಾದ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮಿ ಅವರ 14ನೇ ವರ್ಷದ ಪುಣ್ಯಸ್ಮರಣೆ ಹಾಗೂ 6ನೇ ವರ್ಷದ ಮಹಾ ರಥೋತ್ಸವದ ಅಂಗವಾಗಿ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ʼಸಾಹಿತ್ಯ ಶಿವ ಭೂಷಣʼ ಪ್ರಶಸ್ತಿ ಪ್ರದಾನ ಮತ್ತು ಚಂದ್ರವನ ಕಂಪು ಎಂಬ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ಅಥಣಿಯ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮೀಜಿಗೆ ʼಸಾಹಿತ್ಯ ಶಿವಭೂಷಣ ಪ್ರಶಸ್ತಿʼ ಪ್ರದಾನ ಮಾಡಲಾಯಿತು. ಅಲ್ಲದೆ, ಬೆಂಗಳೂರಿನ ಜಿ.ಮರಿಸ್ವಾಮಿ ಅವರು ʼಚಂದ್ರವನ ಕಂಪುʼ ಎಂಬ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು.

ಲಿಂಗೈಕ್ಯ ಶ್ರೀ ಮರಿದೇವರು ಮಹಾ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಶ್ರೀಮಠದ ಡಿ.ಎಂ.ಎಸ್ ಜ್ಞಾನಕುಟೀರ ಶಾಲಾ ಕಟ್ಟಡ ಹಾಗೂ ಸಮಾರಂಭವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಶ್ರೀ ಮರಿದೇವರು ಮಹಾತಪಸ್ವಿಯಾಗಿದ್ದರು. ನಾನು ಆಗಾಗ ಮಠಕ್ಕೆ ಭೇಟಿ ನೀಡುತ್ತಿದ್ದಾಗ ನಾಡಿನ ದೊರೆಯಾಗುವೆ, ಮುನ್ನುಗ್ಗು ಎಂದು ಆರ್ಶೀವಾದ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಾನು ರಾಜ್ಯದ ಉನ್ನತ ಸ್ಥಾನಗಳನ್ನು ಪಡೆಯುವಂತಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅಪೇಕ್ಷೆಯಂತೆ ನಾನೂ ಕೂಡ ನನ್ನ ಮನೆ ಮೇಲೆ ಭಾರತ ಬಾವುಟ ಹಾರಿಸಿದ್ದೇನೆ. ಶ್ರೀಕ್ಷೇತ್ರ ಮಠದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ | ಪ್ರಿಯಾಂಕ್‌ ಖರ್ಗೆಗೆ ತಿರುಗೇಟು: ಕಾಂಗ್ರೆಸ್‌ ನಾಯಕರ ಲಂಚ-ಮಂಚದ ಕತೆ ತೆರೆದಿಟ್ಟ ಬಿಜೆಪಿ

ಧಾರ್ಮಿಕ ಪ್ರಜ್ಞೆ, ರಾಷ್ಟ್ರಾಭಿಮಾನ ಮೂಡಿಸುವ ಕೆಲಸ ದೇಶದ ಉದ್ದಗಲಕ್ಕೂ ನಡೆಯುತ್ತಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ. ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲು ಸರ್ಕಾರ ಅನುದಾನ ನೀಡಲಿದೆ. ಪೋಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಅಧಿಕಾರ ಮುಖ್ಯವಲ್ಲ, ಶಾಶ್ವತವೂ ಅಲ್ಲ. ಅಧಿಕಾರ ಸಿಕ್ಕಾಗ ಏನು ಮಾಡಿದ್ದೇವೆ ಎಂಬುವುದು ಮುಖ್ಯ. ಸಿಎಂ ಆಗಿದ್ದಾಗ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಎಂಬ ಐತಿಹಾಸಿಕ ಕಾರ್ಯಕ್ರಮ ಜಾರಿ ಮಾಡಿದ್ದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ನೀಡಿದ್ದೇನೆ. ಕರ್ನಾಟಕವನ್ನು ಮಾದರಿ ಮಾಡುವ ಅನೇಕ ಕಾರ್ಯಕ್ರಮವನ್ನು ಜಾರಿ ಮಾಡಿದ್ದೆ ಎಂದು ಯಡಿಯೂರಪ್ಪ ತಿಳಿಸಿದರು.

ಬೇಬಿ ಗ್ರಾಮ ಮಠದ ಶ್ರೀ ತ್ರಿನೇತ್ರ ಸ್ವಾಮೀಜಿ ಅವರು ಮಾತನಾಡಿ, ಮಹಾತಪಸ್ವಿ ಲಿಂಗೈಕ್ಯ ಶ್ರೀ ಮರಿದೇವರು ಅವರನ್ನು ಪೂಜಿಸುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ “ಜೀವನದಿ ಪ್ರಶಸ್ತಿ” ನೀಡಿರುವುದು ನಮಗೆ ತುಂಬಾ ಸಂತಸ ತಂದಿದೆ ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೇಲುಕೋಟೆ ಕ್ಷೇತ್ರ ಸೇರಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಸಹಕಾರಿಯಾಗಿದ್ದಾರೆ ಎಂದರು.

ಡಿಎಂಎಸ್ ಶಾಲೆಯ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಯುವ ಸಬಲೀಕರಣ, ರೇಷ್ಮೆ ಹಾಗೂ ಕ್ರೀಡಾ‌ ಸಚಿವ ಕೆ.ಸಿ.ನಾರಾಯಣಗೌಡ, ಬಿ.ಎಸ್.ಯಡಿಯೂರಪ್ಪ ಹಾಗೂ ಶ್ರೀಮಠಕ್ಕೂ ಅವಿನಾಭಾವ ಸಂಬಂಧವಿದೆ. ನಾನು ಕೂಡ ಶ್ರೀಮಠದ ಭಕ್ತನಾಗಿದ್ದೇನೆ ಎಂದರು.

ಸಮಾರಂಭದಲ್ಲಿ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ, ಬಿಜೆಪಿ ಮುಖಂಡರಾದ ಡಾ.ಎನ್.ಎಸ್.ಇಂದ್ರೇಶ್, ರುದ್ರೇಶ್, ನಟೇಶ್, ಧನರಾಜ್, ಸಿದ್ಧಲಿಂಗೇಶ್ವರ ಗೃಹ ಮಂಡಳಿ ಅಧ್ಯಕ್ಷ ಯು.ಎಸ್.ಶೇಖರ್, ಹೊನಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ.ಚಂದ್ರಶೇಖರಯ್ಯ, ನಿರಂಜನ್ ಬಾಬು ಮತ್ತಿತರರು ಇದ್ದರು.

ಇದನ್ನೂ ಓದಿ | ಜನೋತ್ಸವ | ವಿವಿಧೆಡೆ ರ‍್ಯಾಲಿ ಮಾಡಲು ಒಪ್ಪದ ದೊಡ್ಡಬಳ್ಳಾಪುರ ಜನ; ಆಗಸ್ಟ್‌ 28ರಂದು ಕಾರ್ಯಕ್ರಮ

Exit mobile version