ಮಂಡ್ಯ: ಕುತಂತ್ರ, ತಂತ್ರ ಎಲ್ಲ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ (HD Kumaraswamy) ಗೊತ್ತಿದೆ, ಅದು ನಮಗೆ ಗೊತ್ತಿಲ್ಲ. ನಾವು ಯಾರ ಬಗ್ಗೆ ದ್ವೇಷವನ್ನೂ ಮಾಡಲ್ಲ, ಕುತಂತ್ರವನ್ನೂ ಮಾಡಲ್ಲ. ನಮ್ಮದೇನಿದ್ದರೂ ನೇರಾ ನೇರ. ಈ ಚುನಾವಣೆಯಲ್ಲಿ (Karnataka Election 2023) ನಮ್ಮ ಹೋರಾಟ ನೇರವಾಗಿರಲಿದೆ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ (Cheluvarayaswamy) ಹೇಳಿದರು.
ಕೂಡಲ ಕುಪ್ಪೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರಿಗೆ ತಂತ್ರ ಕುತಂತ್ರ ಎಲ್ಲ ಗೊತ್ತಿದೆ. ನಮ್ಮದೇನಿದ್ದರೂ ನೇರಾ ನೇರಾ. ಅವರಿಗೆ ದ್ವೇಷ ಮಾಡುವ ಶಕ್ತಿ ಇದೆ. ಆದರೆ, ನಮಗೆ ದೇವರು ಆ ಶಕ್ತಿಯನ್ನು ಕೊಟ್ಟಿಲ್ಲ. ನಾವೇನಿದ್ದರೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇವೆ ಎಂದು ಹೇಳಿದರು.
ನಾವೇನು ವೈರಿಗಳಲ್ಲ ಅಥವಾ ನಾವ್ಯಾರನ್ನೂ ವೈರತ್ವದಿಂದ ನೋಡುವುದಿಲ್ಲ. ದೇವೇಗೌಡರ ಕುಟುಂಬವನ್ನಾಗಲಿ, ಮಾಜಿ ಸಿಎಂ ಕುಮಾರಸ್ವಾಮಿಯನ್ನಾಗಲಿ, ಅವರ ಪುತ್ರ ನಿಖಿಲ್ ಅವರನ್ನಾಗಲಿ ನಾನು ವೈರತ್ವದಿಂದ ನೋಡುವುದಿಲ್ಲ. ಹಾಗೆ ನೋಡುವ ಅಭ್ಯಾಸವೂ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Bangladesh Election: ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಕೆ!
ಮೇಲುಕೋಟೆ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹಾಕುವುದರ ಹಿಂದೆ ಯಾವುದೇ ತಂತ್ರ ಇಲ್ಲ. ಸ್ಥಳೀಯ ನಾಯಕರ ಒತ್ತಾಯದ ಮೇರೆಗೆ ಇದೊಂದು ಬಾರಿ ಅವರಿಗೆ ಬಿಟ್ಟುಕೊಡುವ ನಿರ್ಧಾರ ಮಾಡಲಾಗಿದೆ. ಮದ್ದೂರಿನಲ್ಲಿ ಟಿಕೆಟ್ ಹಂಚಿಕೆ ವಿಚಾರ ಯಾವುದೇ ಗೊಂದಲ ಇಲ್ಲ. ಮದ್ದೂರು ಟಿಕೆಟ್ ಹಂಚಿಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಅವರು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಮುಂದೆ ಕಣ್ಣೀರು ಹಾಕಿದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್
ಹಾವೇರಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹಾನಗಲ್ ಪಟ್ಟಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಅವರು ಜಾತ್ಯತೀತ ಜನತಾ ದಳ (Karnataka Election) ಸೇರ್ಪಡೆಯಾಗಿದ್ದಾರೆ. ಈ ವೇಳೆ 50 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಸಕ್ರಿಯನಾಗಿದ್ದೆ, ಆದರೆ ಈ ಬಾರಿ ಟಿಕೆಟ್ ಕೊಡದೆ ತಮಗೆ ಕಾಂಗ್ರೆಸ್ ವರಿಷ್ಠರು ಅನ್ಯಾಯ, ಮೋಸ ಮಾಡಿದ್ದಾರೆ ಎಂದು ಕಣ್ಣೀರು ಹಾಕಿದರು. ಬಳಿಕ ಅವರನ್ನು ಎಚ್ಡಿಕೆ ಸಮಾಧಾನಪಡಿಸಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಮನೋಹರ್ ತಹಶೀಲ್ದಾರ್ ಅವರು, ಇವತ್ತು ನನ್ನ ಜೀವನದ ಬದಲಾವಣೆಯ ದಿನ. 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದೆ. ಶ್ರದ್ಧಾಭಕ್ತಿಯಿಂದ ಪಕ್ಷದ ವರ್ಚಸ್ಸಿಗೆ ಕಳಂಕ ಬಾರದಂತೆ ನಡೆದುಕೊಂಡು ಬಂದೆ. 2018ರಲ್ಲಿ ನಮಗೆ ಅವಕಾಶ ತಪ್ಪಿಸಿ ಧಾರವಾಡ ಜಿಲ್ಲೆಯವರಿಗೆ ಮಣೆ ಹಾಕಿದರು. ನನಗೆ ಅವಕಾಶ ಕೊಡಿ ಅಂತ ಕೇಳಿದರೂ ಕಾಂಗ್ರೆಸ್ ವರಿಷ್ಠರ ಮನಸು ಕರಗಲಿಲ್ಲ. ಉಪ ಚುನಾವಣೆಯಲ್ಲಿಯು ನನ್ನ ಮೂಗಿಗೆ ತುಪ್ಪ ಸವರಿದರು. ನಾನು ತಿರುಗಿ ಬಿದ್ದಿದ್ದರೆ ಅವರ ಮಾನ ಹರಾಜು ಆಗುತ್ತಿತ್ತು. ನನಗೆ ಮೋಸ ಮಾಡಿದರು, ಅನ್ಯಾಯ ಮಾಡಿದರು ಎಂದು ಭಾವುಕರಾಗಿ ಕಣ್ಣೀರು ಹಾಕಿದರು.
ಸ್ವಾಭಿಮಾನದ ಕಿಚ್ಚು ಹಚ್ಚಿ ಗೆಲ್ಲುತ್ತೇವೆ
ದುಃಖದಿಂದ ಭಾರವಾದ ಮನಸ್ಸಿನಿಂದ ಕಾಂಗ್ರೆಸ್ಗೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಕಣ್ಣೀರು ಹಾಕುತ್ತಲೇ ಮಾತನಾಡಿದ ಅವರು, ಕುಮಾರಸ್ವಾಮಿ ನಿಜವಾದ ಮಣ್ಣಿನ ಮಗ, ಬೂಟಾಟಿಕೆಯ ಮಗ ಅಲ್ಲ. ಅವರು ನನಗೆ ರಾಜಕೀಯ ಮರುಜನ್ಮ ಕೊಟ್ಟಿದ್ದಾರೆ. ಈ ತಾಲೂಕಿನಲ್ಲಿ ಅಭಿವೃದ್ಧಿ ಆಗಿದ್ದರೆ ಅದು ನನ್ನಿಂದ ಆಗಿದೆ, ದಿವಂಗತ ಸಿ.ಎಂ. ಉದಾಸಿಯವರಿಂದ ಆಗಿದೆ, ಬೇರೆ ಯಾರಿಂದಲು ಆಗಿಲ್ಲ. ಸ್ವಾಭಿಮಾನದ ಕಿಚ್ಚು ಹಚ್ಚಿ 2023ರ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಸೈಬರ್ ಸೇಫ್ಟಿ ಅಂಕಣ: ಅಂತರ್ಜಾಲದಲ್ಲಿ ಸುರಕ್ಷತೆ; ನಿಮ್ಮ ಖಾತೆಗಳನ್ನು ಸುರಕ್ಷಿತಗೊಳಿಸುವುದು ಹೇಗೆ?
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಈ ವಯಸ್ಸಿನಲ್ಲಿ ಮನೋಹರ್ ತಹಶೀಲ್ದಾರ್ ಅವರ ಮನಸ್ಸಿಗೆ ಆಘಾತವಾಗಿದೆ. ಅವರ ಪರವಾಗಿ ಪ್ರಚಾರಕ್ಕೆ ಮತ್ತೆ ಬರುತ್ತೇನೆ. ಮತ ಕೊಟ್ಟಿಲ್ಲ ಎಂದು ನಾನು ರೈತರನ್ನು ಕೈ ಬಿಟ್ಟಿಲ್ಲ. ಸ್ವತಂತ್ರ ಸರ್ಕಾರ ಬರದ ಹಿನ್ನೆಲೆಯಲ್ಲಿ ಮತ್ತೊಂದು ಪಕ್ಷದ ಜತೆ ಕೈ ಜೋಡಿಸಿದೆ. ಬಿಜೆಪಿಯವರು ನನ್ನ ಸರ್ಕಾರ ತೆಗೆದು ಅಧಿಕಾರಕ್ಕೆ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಡತನ ಏನು ಎಂಬುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ. ಮೋದಿಯವರು ಇಷ್ಟು ಸಲ ರಾಜ್ಯಕ್ಕೆ ಬಂದರೂ ಅವರ ಬಳಿ ಉತ್ತರ ಇಲ್ಲ. ಹೀಗಾಗಿ ನೀವು ನನಗೆ ಐದು ವರ್ಷ ಆಡಳಿತ ನೀಡಬೇಕು ಎಂದು ಕೋರಿದರು.
ಮುಸ್ಲಿಮರಿಗೆ ದೇವೇಗೌಡರು ಕೊಟ್ಟ ಶೇ.4 ಮೀಸಲಾತಿಯನ್ನು ತೆಗೆದು ಹಾಕಿದ್ದಾರೆ. ಕಾಂಗ್ರೆಸ್, ಬಿಜೆಪಿ ನಿಮ್ಮ ಬದುಕನ್ನು ಹಾಳು ಮಾಡುತ್ತಿದ್ದಾರೆ, ನಿಮ್ಮ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಮೋದಿಗೆ ಚಿಂತೆ ಇದೆಯೇನು, ಅವರಿಗಂತೂ ಮದುವೇನೆ ಆಗಿಲ್ಲ. ಅವರದು ಗುಜರಾತ್ ಮಾಡೆಲ್, ನಮ್ಮ ಊರಲ್ಲಿ ಪಾನಿಪುರಿ ಮಾರುತ್ತಿದ್ದವನು ಗುಜರಾತ್ನವನು. ಕರ್ನಾಟಕದವರಾರು ಗುಜರಾತ್ಗೆ ಹೋಗಿಲ್ಲ. ಸಿದ್ದರಾಮಯ್ಯಗೆ ಸೋನಿಯಾಗಾಂಧಿ ಚಿಂತೆ, ಬೊಮ್ಮಾಯಿಗೆ ಮೋದಿ ಚಿಂತೆ. ಇವರಿಗೆ ಇರುವುದು ಹಲಾಲ್ ಕಟ್, ಜಟ್ಕಾ ಕಟ್, ಹಿಜಾಬ್ ಎಂದರೆ ಸೆರಗು, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ ಸೆರಗು ಹಾಕಿದ್ದರು. ಹೆಣ್ಣಿಗೆ ಸೆರೆಗೇ ಚಂದ ಎಂದು ಹಿಜಾಬ್ ನಿಷೇಧ ಮಾಡಬೇಕು ಎಂದು ಹೇಳುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಶಿವಕುಮಾರ್ ಅದೊಂದು ಹುಚ್ಚಮುಂಡೆದು, ಹಾನಗಲ್ ಮಾನ ಹೋಯ್ತು ಅಂತ ಶ್ರೀನಿವಾಸ ಮಾನೆಗೆ ಟಿಕೆಟ್ ಕೊಟ್ಟಾಗಲೇ ಹೇಳಿದೆ. ಜಗನ್ನಾಥ ಜೋಶಿಯವರು ನಿಜವಾದ ಆರ್ಎಸ್ಎಸ್. ಅವರಿಗೆ ತಿರುಗಾಡಲು ಚಪ್ಪಲಿ ಇರಲಿಲ್ಲ, ಅಂತಹವರ ಕಾಲ ಚಪ್ಪಲಿಗೆ ಪ್ರಲ್ಹಾದ್ ಜೋಶಿ ಸಮ ಅಲ್ಲ. ಮೇ 18ಕ್ಕೆ ಕುಮಾರಸ್ವಾಮಿ ವಿಧಾನಸೌದದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Vinod Raj: ವಿನೋದ್ ರಾಜ್ಗೆ ಮದುವೆಯಾಗಿದೆಯಾ? ಪತ್ನಿ, ಮಗನ ಫೋಟೊ ವೈರಲ್, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ!
ಶ್ರೀನಿವಾಸ ಮಾನೆ ನಿನಗೆ ಉಪ್ಪು ತಿಂದಿದ್ದ ನೆನಪು ಇದ್ದಿದ್ದರೆ, ಉಪಕಾರ ತೀರಿಸಬೇಕಿತ್ತು. ಹುಚ್ಚಮುಂಡೆವಾ, ಮನೋಹರ್ ತಹಶೀಲ್ದಾರ್ ಮನೆಗೆ ಏನಾದರೂ ಇಟ್ಟು ಹೋಗಬೇಕು, ತಗೊಂಡು ಹೋಗಲು ಏನು ಇಲ್ಲ. ನಮ್ಮ ಹತ್ರ ಪಾಪದ ದುಡ್ಡು ಇಲ್ಲ. ಕಾಂಗ್ರೆಸ್, ಬಿಜೆಪಿ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳು ಎಂದು ಮನೋಹರ್ ತಹಶೀಲ್ದಾರ್ ಮನೆ ಮೇಲೆ ಎಫ್ಎಸ್ಟಿ ಅಧಿಕಾರಿಗಳ ದಾಳಿ ಬಗ್ಗೆ ಕಿಡಿಕಾರಿದರು.