ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಹೆಸರಿನಲ್ಲಿ ಬಿಜೆಪಿಯವರು ಸ್ವಂತ ಕಾರ್ಯಕ್ರಮ ಮಾಡಿಕೊಂಡು, ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ದಾಸರಹಳ್ಳಿ ಶಾಸಕ ಮಂಜುನಾಥ್ ಅವರ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್‌ಗೆ ಆಮ್ ಆದ್ಮಿ ಪಕ್ಷದ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಂಪೇಗೌಡರ ಪ್ರತಿಮೆ ಅನಾವರಣಕ್ಕಾಗಿ ರಥಯಾತ್ರೆ ಮುಖಾಂತರ ಮಣ್ಣು ಶೇಖರಣೆ ಮಾಡುತ್ತಿದ್ದಾರೆ. ಇದು ರಾಜಕೀಯವಾಗಿ ಜನರನ್ನು ಸೆಳೆಯುವ ಕಾರ್ಯಕ್ರಮ ಆಗುತ್ತಿದೆ. ನಮ್ಮ ಸಮಾಜದ ಹಿರಿಯರನ್ನು ಕಡೆಗಣಿಸಲಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ | ಇನ್ಸ್‌ಪೆಕ್ಟರ್ ನಂದೀಶ್ ಸಾವು ಸಹಜ ಎಂದ ಸರ್ಕಾರ; ಇದು ಕೊಲೆ ಎಂದ ಪ್ರತಿಪಕ್ಷ
ಮೃತ್ತಿಕೆ ಸಂಗ್ರಹಣೆ ರಥಯಾತ್ರೆ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಭಾವಚಿತ್ರ ಹಾಕಿದ್ದಾರೆ. ಆದರೆ ನಮ್ಮ ಸಮಾಜದ ಸ್ವಾಮೀಜಿಗಳ ಭಾವಚಿತ್ರ ಇಲ್ಲ. ನಮ್ಮ ಸಮುದಾಯ ಹಿರಿಯರಾದ ಎಚ್.ಡಿ ದೇವೇಗೌಡರು, ಎಸ್.ಎಂ.ಕೃಷ್ಣ ಅವರ ಭಾವಚಿತ್ರ ಇಲ್ಲ. ಅವರಿಗೆ ಅಗೌರವ ತೋರಿಸುವ ಮೂಲಕ ಬಿಜೆಪಿಯ ಕಾರ್ಯಕ್ರಮ ಮಾಡಿಕೊಂಡು ಹೊರಟಿದ್ದಾರೆ. ಹಾಗಾಗಿ, ದಾಸರಹಳ್ಳಿ, ತಿಪಟೂರು, ದೇವನಹಳ್ಳಿ, ಹೊಸಕೋಟೆ ಸೇರಿದಂತೆ ಹಲವು ಕಡೆ ಬಿಜೆಪಿ ರಥಯಾತ್ರೆಗೆ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರ ಸಣ್ಣತನದ ವಾತಾವರಣ ನಿರ್ಮಾಣ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾದ ಕೆಲಸವನ್ನು ಒಂದು ಪಕ್ಷದ ಕೆಲಸ ಮಾಡಿಕೊಂಡಿದಕ್ಕೆ ಜನ ಧಿಕ್ಕರಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್ ಇದೆ.
ನನ್ನ ಮೇಲೆ ಜನರಿಗೆ ನಂಬಿಕೆ ಇದೆ. ಹೀಗಾಗಿ ಎಎಪಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಎರಡು ತಿಂಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದಲ್ಲಿ ಮಹಿಳೆಯರ ಸಂಘಟನೆಗೆ ಸ್ಥಾನಮಾನ ನೀಡಲು ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳ ಜನ ಪರ ಸರ್ಕಾರ ತರುವ ನಿಟ್ಟಿನಲ್ಲಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.
ಮಾದರಿಯಾಗಿ ಶಾಸಕ ಮಂಜುನಾಥ್ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಶಾಸಕರು ಎಲ್ಲ ಕ್ಷೇತ್ರಕ್ಕೂ ಬೇಕಾಗಿದೆ. ನವೆಂಬರ್ 1 ರಂದು ಕನ್ನಡ ಧ್ವಜ ನೀಡುತ್ತಿರುವ ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು,
ನಮ್ಮ ಪಂಚರತ್ನ ಯೋಜನೆ ಇಟ್ಟುಕೊಂಡು ಶಿಕ್ಷಣ, ಉದ್ಯೋಗ, ಸೇರಿದಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ನಾಡಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ ಎಂದರು.
ಇತ್ತೀಚೆಗೆ ಇನ್ಸ್‌ಪೆಕ್ಟರ್ ನಂದೀಶ್ ಅವರನ್ನು ಬಾಣಸವಾಡಿಗೆ ವರ್ಗಾವಣೆ ಮಾಡಲು ಪ್ರಯತ್ನ ಮಾಡಿದರು. ಆದರೆ ಕೆ.ಆರ್.ಪುರಂಗೆ ವರ್ಗಾವಣೆ ಮಾಡಿಸಿಕೊಂಡರು. ಸಚಿವ ಎಂಟಿಬಿ ನಾಗರಾಜ್ ಅವರು ವಿಡಿಯೋ ಮುಂದೆ ಇಟ್ಟಾಗ ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಈಗ ಕಾಂಗ್ರೆಸ್ ನಾಯಕರು ಸರ್ಕಾರದ ಮೇಲೆ ಬಿದ್ದಿದ್ದಾರೆ. ಈಗ ರಸ್ತೆಯಲ್ಲಿ ಬರುವಾಗ ನೋಡಿದೆ. ದಾರಿಯಲ್ಲಿ ಪೊಲೀಸರು ಹಣ ವಸೂಲಿ ಮಾಡುತ್ತಿದ್ದರು. ಯಾಕೆ ಈ ಪರಿಸ್ಥಿತಿ ಬರುತ್ತದೆ ನಮಗೆ? ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮನೆಮನೆಯ ಮೇಲೂ ಕನ್ನಡ ಭಾವುಟ ಹಾರಲಿ
ಈಗಾಗಲೇ ನಾನು ನವೆಂಬರ್ 1 ಕ್ಕೆ ಪ್ರತಿ ಮನೆಯಲ್ಲಿ ಕನ್ನಡ ಧ್ವಜ ಹಾರಿಸಲು ನಾನು ಮನವಿ ಮಾಡಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು, ಹಲವಾರು ಸಂಘಟನೆಗಳು ತಮ್ಮ ಮನೆ ಮೇಲೆ ಧ್ವಜ ಹಾರಿಸಲು ತೀರ್ಮಾನಿಸಿದಕ್ಕೆ ನಾನು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಎಚ್.ಡಿ.ಕುಮಾರಸ್ವಾಮಿ ಅವರು, ನವೆಂಬರ್1 ರಂದು ಪಂಚರತ್ನ ಯಾತ್ರೆ ಚಾಲನೆ ವೇಳೆ ನಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ನಾಡ ಭಾಷೆಗೆ ಧಕ್ಕೆ ಬರುವ ರೀತಿಯಲ್ಲಿ ಕೇಂದ್ರ ಸರ್ಕಾರ ವರ್ತಿಸುತ್ತಿದೆ, ಇದನ್ನು ನಾವು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ | ದೇಶದಲ್ಲಿ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡ ಏಕೈಕ ನಾಯಕ ಕುಮಾರಸ್ವಾಮಿ ಮಾತ್ರ: ಎಚ್.ಡಿ. ದೇವೇಗೌಡ