ಮಂಡ್ಯ: ನಾನು ಮಂಡ್ಯ ಜಿಲ್ಲೆಗೆ ಸೀಮಿತವಾದ ಆಡಳಿತ ನಡೆಸಿಲ್ಲ. ಇಡೀ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಆಡಳಿತ ಕೊಟ್ಟಿದ್ದೇನೆ. ನಾನು ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ, ಪಕ್ಷ ಅಧಿಕಾರಕ್ಕೆ ಬಂದರೆ ನಿಮಗೆ ಉಪಯೋಗ ಆಗುತ್ತದೆ. ಮುಂದಿನ ತಿಂಗಳಿನಿಂದ ಪಂಚರತ್ನ ಅಭಿಯಾನ ಆರಂಭವಾಗಲಿದೆ. 120 ದಿನ ರಾಜ್ಯಾದ್ಯಂತ ಸಂಚಾರ ಮಾಡಿ, ಹಳ್ಳಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ನಾಗಮಂಗಲದ ಸೋಮನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು ಚಾಮುಂಡಿ ತಾಯಿ ಆಶೀರ್ವಾದ ಪಡೆದು, ಪ್ರತಿದಿನ ಒಂದು ವಿಧಾನಸಭಾ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡುತ್ತೇನೆ.
ಇದನ್ನೂ ಓದಿ | JDS Convention | ಹಾಸನ, ಮಂಡ್ಯ ದೇವೇಗೌಡರ ಎರಡು ಕಣ್ಣುಗಳು: ರೇವಣ್ಣ ವ್ಯಾಖ್ಯಾನ
ಈ ಬಾರಿ ಮಾಧ್ಯಮಗಳು 18-20 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಗೆಲ್ಲುತ್ತದೆ ಎನ್ನುತ್ತಿವೆ, ವಿಚಲಿತರಾಗಬೇಡಿ. ನಮ್ಮ ಗುರಿ 123. ನಿಷ್ಠಾವಂತ ಕಾರ್ಯಕರ್ತರಿಂದ ನಮ್ಮ ಪಕ್ಷ ಬದುಕಿದೆ. ಬಡವರಿಗಾಗಿ ಮುಂದಿನ ಮೂರು ತಿಂಗಳು ನಿರಂತರ ಹೋರಾಟ ಮಾಡುತ್ತೇನೆ. ನಿಖಿಲ್ ಚುನಾವಣೆ ಸ್ಪರ್ಧೆ ಪ್ರತಿಕ್ರಿಯಿಸಿ, ಎಚ್‌ಡಿಕೆ, ಮಂಡ್ಯ ಜನರು ನಮ್ಮನ್ನು ಚುನಾವಣೆಯಲ್ಲಿ ಸೋಲಿಸಲಿಲ್ಲ. ಬಿಜೆಪಿ, ಕಾಂಗ್ರೆಸ್, ರೈತಸಂಘ, ಕೆಲ ಮಾಧ್ಯಮಗಳು ಚಕ್ರವ್ಯೂಹ ರಚಿಸಿ ನಮ್ಮನ್ನು ಸೋಲಿಸಿದರು ಎಂದರು.
ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಉಚಿತ 200 ಯುನಿಟ್ ವಿದ್ಯುತ್ ನೀಡುತ್ತೇನೆ. ಅಡುಗೆ ಮಾಡಲು, ಬೆಳಕು ಉರಿಸಲು ಉಚಿತ ವಿದ್ಯುತ್ ನೀಡುತ್ತೇವೆ. ಈ ಯೋಜನೆಗಳಿಗೆ ದುಡ್ಡು ಹೊಂದಿಸುವುದು ಹೇಗೆ ಎಂಬುವುದು ನನಗೆ ತಿಳಿದಿದೆ. ರಾಜ್ಯದ ಸಂಪತ್ತು ಕೆಲವೇ ಕೆಲವು ಜನರ ಬಳಿ ಇದೆ. ಅವರಿಗೆ ದುಡ್ಡು ಹೋಗದ ಹಾಗೆ ತಡೆಯುವುದು ನನಗೆ ಗೊತ್ತು ಎಂದರು.
ಕೆಲವರು ಜಾತಿ ರಾಜಕೀಯ ಶುರು ಮಾಡಿದ್ದಾರೆ. ನಾನು ಒಬ್ಬ ಒಕ್ಕಲಿಗ, ನನಗೂ ಒಮ್ಮೆ ಅವಕಾಶ ಕೊಡಿ ಎಂದು ಒಬ್ಬರು ಕೇಳುತ್ತಿದ್ದಾರೆ. ಸಮುದಾಯಕ್ಕೆ ಅವರು ನೀಡಿದ ಕೊಡುಗೆ ಏನು ಎಂಬುವುದು ಯೋಚಿಸಬೇಕು ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿ ಕಾರಿದರು. ಮಾಜಿ ಸಿಎಂ ಒಬ್ಬರು ಮಂಡ್ಯಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಏನು ಎನ್ನುತ್ತಾರೆ, ಅವರಾಡುವ ಮಾತಿಗೆ ನನ್ನ ರಕ್ತ ಕುದಿಯುತ್ತದೆ. ನೀವು ಸಿಎಂ ಆಗಿದ್ದಾಗ ನೂರಾರು ಜನ ಈ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಂಡರು. ಒಬ್ಬರ ಮನೆಗೂ ನೀವು ಹೋಗಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.
ಕೆ.ಆರ್. ಪೇಟೆಯಲ್ಲಿ ಭಾಷಣ ಮಾಡಿದ ಬಿಜೆಪಿ ನಾಯಕರು, ನಾನು ಬಜೆಟ್ ಮಂಡಿಸುವಾಗ ಮಂಡ್ಯ ಬಜೆಟ್ ಎಂದು ನಕ್ಕಿದ್ದರು. ನಾನು ಕೊಟ್ಟ ಅನುದಾನವನ್ನು ಬಿಜೆಪಿ ಸರ್ಕಾರ ವಾಪಸ್ ಪಡೆಯಿತು. 40 ಪರ್ಸೆಂಟ್ ಕಮಿಷನ್, ಪಿಎಸ್‌ಐ ಹಗರಣದಲ್ಲಿ ಸಚಿವರು ದುಡ್ಡು ಮಾಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಆರೋಪಿಸಿದರು.
ಸಮಾರಂಭದಲ್ಲಿ ಮಾಜಿ ಸಿಎಂ ಎಚ್‌ಡಿಕೆ ಸಮ್ಮುಖದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಆಪ್ತ ಯದುರಾಜ್, ನಾಗರಾಜ್, ಪ್ರವೀಣ, ಬೆಕ್ಕಳಲೆ ಪುಟ್ಟಸ್ವಾಮಿ, ದಶರಥ್, ಕೃಷ್ಣ ಸೇರಿ ಹಲವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಪಕ್ಷ ಸೇರ್ಪಡೆಯಾದವರನ್ನು ಜೆಡಿಎಸ್ ಶಾಲು ಹೊದಿಸಿ ಕುಮಾರಸ್ವಾಮಿ ಸ್ವಾಗತಿಸಿದರು.
ಇದನ್ನೂ ಓದಿ | JDS Convention | ದೇವೇಗೌಡರ ತ್ಯಾಗ ನೆನೆದು ಕಣ್ಣೀರಿಟ್ಟ ಎಚ್‌ಡಿಕೆ, ರೇವಣ್ಣ