Site icon Vistara News

JDS Pancharatna Yatra | ನ.18 ಅಥವಾ 20ರಂದು ಪಂಚರತ್ನ ರಥಯಾತ್ರೆ ಪುನರಾರಂಭ: ಎಚ್‌.ಡಿ.ಕುಮಾರಸ್ವಾಮಿ

JDS Pancharatna Yatra

ಬೆಂಗಳೂರು: ಮಳೆಯಿಂದ ರದ್ದಾಗಿದ್ದ ಪಂಚರತ್ನ ರಥಯಾತ್ರೆಯನ್ನು(JDS Pancharatna Yatra) ನ.18 ಅಥವಾ 20ರಂದು ಮತ್ತೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಿಂದಲೇ ಶುರು ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ದಿನದಲ್ಲಿ ಒಂದು ದಿನಾಂಕವನ್ನು ಎರಡು ಮೂರು ದಿನದಲ್ಲಿ ನಿರ್ಧಾರ ಮಾಡುತ್ತೇವೆ. ಪಂಚರತ್ನ ರಥಯಾತ್ರೆ ಮಳೆಯಿಂದ ರದ್ದಾಗಿತ್ತು. ಪೂರ್ವ ನಿಗದಿತ ವೇಳಾಪಟ್ಟಿಯಂತೆ ಸೋಮವಾರದಿಂದ ಮತ್ತೆ ಪ್ರಾರಂಭ ಮಾಡಬೇಕಿತ್ತು. ಆದರೆ ಮತ್ತೆ ಮಳೆಯಾಗುತ್ತಿದೆ. ಮಳೆ ಇನ್ನೂ ಒಂದು ವಾರ ಇರುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮತ್ತೆ ಮುಂದಕ್ಕೆ ಹಾಕಿದ್ದೇವೆ ಎಂದು ಹೇಳಿದ್ದರು.

ನವೆಂಬರ್ 18 ಇಲ್ಲವೇ 20ಕ್ಕೆ ಆರಂಭ ಆಗಲಿರುವ ಪಂಚರತ್ನ ರಥಯಾತ್ರೆ ಡಿಸೆಂಬರ್ 29 ರವರೆಗೆ ನಡೆಯಲಿದೆ. 2023ರ ಜನವರಿ 3ರಿಂದ ಕಲ್ಯಾಣ ಕರ್ನಾಟಕದಿಂದ ಪ್ರಾರಂಭ ಆಗಲಿದೆ. ಅಲ್ಲಿಂದ ಮೈಸೂರಿಗೆ ಬರುವ ತನಕ ಮುಂದುವರಿಸುತ್ತೇವೆ. ಒಟ್ಟು ಲಭ್ಯ ಅವಧಿಯೊಳಗೆ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಾರ್ಚ್ ಒಳಗೆ ಯಾತ್ರೆಯನ್ನು ಮುಗಿಸುತ್ತೇವೆ ಎಂದು ಮಾಹಿತಿ ನೀಡಿದರು.

ಪಂಚರತ್ನ ಕಾರ್ಯಕ್ರಮ
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಬಾಣಂತಿ ಮತ್ತು ಎರಡು ನವಜಾತ ಶಿಶುಗಳ ಸಾವು ಅತಿ ನೋವಿನ ಘಟನೆ. ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎನ್ನುವ ಕಾರಣಕ್ಕೆ ಪಂಚರತ್ನ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಆರೋಗ್ಯ ಸಂಪತ್ತು, ವಸತಿ ಅಸರೆ, ಕೃಷಿಗೆ ಕಾಯಕಲ್ಪ, ಯುವನವ ಮಾರ್ಗ ಮಹಿಳಾ ಸಬಲೀಕರಣ, ಶಿಕ್ಷಣ ಕಾರ್ಯಕ್ರಮಗಳನ್ನು ಪಂಚರತ್ನ ಯೋಜನೆಯಲ್ಲಿ ಜಾರಿ ಮಾಡಲಾಗುವುದು. ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉದ್ಯೋಗ, ಉಚಿತ ವಿದ್ಯುತ್ ಸೇರಿ ಹಲವಾರು ಅಂಶಗಳು ಈ ಯೋಜನೆಗಳಲ್ಲಿ ಸೇರಿವೆ ಎಂದು ಮಾಹಿತಿ ನೀಡಿದರು.

ಇನ್ನೇನು ನಾವು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇದ್ದೇವೆ. ಕೇವಲ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ಟೀಕಿಸುತ್ತ ಹೋಗುವುದು ನಮ್ಮ ಉದ್ದೇಶ ಅಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಇರುವ ಪಂಚರತ್ನ ಯೋಜನೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ. ರಾಜಕೀಯ ನಮ್ಮ ಉದ್ದೇಶ ಅಲ್ಲ ಎಂದವರು ಹೇಳಿದರು.

ಜೆಡಿಎಸ್ ಸೇರಿದ ತುಮಕೂರು ಜಿಲ್ಲೆ ಬಿಜೆಪಿ, ಕಾಂಗ್ರೆಸ್ ನಾಯಕರು
ತುಮಕೂರು ಜಿಲ್ಲೆ, ಅದರಲ್ಲೂ ಶಿರಾ ವಿಧಾನಸಭೆ ಕ್ಷೇತ್ರದ ವಿವಿಧ ಪಕ್ಷಗಳ ಮುಖಂಡರು, ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ ಅವರ ಸಮ್ಮುಖದಲ್ಲಿ ಶಿರಾ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕುಮಾರಸ್ವಾಮಿ ಅವರು ಸೇರ್ಪಡೆಗೊಂಡ ಮುಖಂಡರಿಗೆ ಜೆಡಿಎಸ್ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು. ತುಮಕೂರು ಜಿಪಂ ಮಾಜಿ ಅಧ್ಯಕ್ಷ ಕಲ್ಕೆರೆ ರವಿಕುಮಾರ್, ಕೆಎಂಎಫ್ ನಿರ್ದೇಶಕ ಎಸ್.ಆರ್.ಗೌಡ, ಸುಧಾಕರ್ ಗೌಡ, ವೀರೇಶ್, ಪ್ರವೀಣ್ ಮುಂತಾದ ಪ್ರಮುಖರು ಸೇರಿದಂತೆ ಅನೇಕ ಮುಖಂಡರು ತಮ್ಮ ನೂರಾರು ಜನ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರಿದರು. ಇವರೆಲ್ಲರೂ ಈ ಹಿಂದೆ ಜೆಡಿಎಸ್‌ನಿಂದ ಕಾಂಗ್ರೆಸ್‌, ಬಿಜೆಪಿಗೆ ಸೇರಿದವರಾಗಿದ್ದರು. ಈಗ ಅವರೆಲ್ಲರೂ ಮರಳಿ ಜೆಡಿಎಸ್‌ಗೆ ವಾಪಸ್ ಆಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ ಅವರು, ಶಿರಾ ಸೇರಿ ತುಮಕೂರು ಜಿಲ್ಲೆಯ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಜಯ ಸಾಧಿಸಲಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದ ಅವರು, 2018ರಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ದಿವಂಗತ ಬಿ.ಸತ್ಯನಾರಾಯಣ ಅವರನ್ನು ನೆನಪು ಮಾಡಿಕೊಂಡು, ಪಕ್ಷವನ್ನು ಸಂಘಟಿಸಿ ಶಿರಾದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಾವು ಸತ್ಯನಾರಾಯಣ ಅವರಿಗೆ ಸಲ್ಲಿಸುವ ಗೌರವ ಎಂದು ಹೇಳಿದರು.

ಇದನ್ನೂ ಓದಿ | Election 2023 | 25 ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆಯ ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ: ಮುತಾಲಿಕ್‌ ಘೋಷಣೆ

Exit mobile version