Site icon Vistara News

ಮೈತ್ರಿ ಸರ್ಕಾರದಲ್ಲೂ ಕಮಿಷನ್‌ ದಂಧೆ ನಡೆದಿತ್ತು; ಮಾಜಿ ಸಿಎಂ ಎಚ್‌ಡಿಕೆ

ಎಚ್‌ಡಿಕೆ

ತುಮಕೂರು: ನಾನು ಮುಖ್ಯಮಂತ್ರಿಯಾದಾಗ ಪರ್ಸೆಂಟೇಜ್‌ ನಿಲ್ಲಿಸಬೇಕೆಂದು ತೀರ್ಮಾನಿಸಿದ್ದೆ. ಆದರೆ, ಮೈತ್ರಿ ಸರ್ಕಾರದಲ್ಲೂ ಕಮಿಷನ್‌ ದಂಧೆ ನಡೆದಿದೆ. ಇದೆಲ್ಲವನ್ನೂ ಸರಿಪಡಿಸಲು ಕಠಿಣ ನಿರ್ಧಾರ ಮಾಡಬೇಕಾದರೆ ಒಂದು ಸ್ವತಂತ್ರ ಸರ್ಕಾರ ಅಧಿಕಾರಿಕ್ಕೆ ಬರಬೇಕು ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ನಗರದ ಗಾಜಿನ ಮನೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲೂ ಭ್ರಷ್ಟಾಚಾರ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಉಡುಗೊರೆ ಕೊಡುವ ಪದ್ಧತಿ ಇಟ್ಟುಕೊಂಡಿದ್ದರು. ಸ್ವಾತಂತ್ರ್ಯ ಬಂದ ಬಳಿಕ ಸಣ್ಣಪುಟ್ಟ ಮಟ್ಟದಲ್ಲಿ ಸರ್ಕಾರದ ವ್ಯವಹಾರ ನಡೆಯುತ್ತಿತ್ತು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸ್ವೇಚ್ಛಾಚಾರದಿಂದ ನಡೆಯುತ್ತಿದೆ. ಜನಸಾಮಾನ್ಯರಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌ ಆರೋಪದ ಬಗ್ಗೆ ಹೇಳಿದರು.

ಇದನ್ನೂ ಓದಿ | ಡಿಕೆ ಶಿವಕುಮಾರ್ ಅವರೇ ಮೊಟ್ಟೆ ಹೊಡೆಸಿರುವ ಸಾಧ್ಯತೆ ಇದೆ ಎಂದ ನಳಿನ್‌ ಕುಮಾರ್‌ ಕಟೀಲ್‌!‌

ಸಿಎಂ ಆಗಿದ್ದಾಗಿನಿಂದ ಪರ್ಸೆಂಟೇಜ್‌ ಬಗ್ಗೆ ಎಲ್ಲವೂ ನನಗೆ ಗೊತ್ತಿದೆ. ಆದರೆ, ನನ್ನ ಕಚೇರಿಯೊಳಗೆ ರೇವಣ್ಣ ಇದ್ದರು. ಆ ಒಂದು ವಿಷಯಗಳಲ್ಲಿ ನಾವು ದೂರ, ನಾವು ಸರ್ಕಾರದಲ್ಲಿ ಅಧಿಕಾರ ನಡೆಸಬೇಕಾದರೆ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ನಾನು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿ, ರೈತರ ಸಾಲ ಮನ್ನಾ ಮಾಡಿದೆ. ಅದರಲ್ಲಿ ಕಮಿಷನ್‌ ತೆಗೆದುಕೊಳ್ಳಲು ಆಗುತ್ತಾ? ರೈತರಿಂದ ಪ್ರೀತಿ ಗಳಿಸಬಹುದು, ಅದೇ ನನಗೆ ಕಮಿಷನ್‌ ಎಂದರು.

ಒಬ್ಬರೋ ಇಬ್ಬರೋ ಬಿಟ್ಟರೆ, ಬಿಜೆಪಿ ರಾಜ್ಯ ಸರ್ಕಾರದಲ್ಲಿ ಬೇರೆ ಸಚಿವರ ಬಗ್ಗೆ ಚರ್ಚೆ ಮಾಡುವುದರಲ್ಲಿ ಪ್ರಯೋಜನವಿಲ್ಲ. ಮೈತ್ರಿ ಸರ್ಕಾರದ ವೇಳೆ ಕೆಲ ಇಲಾಖೆಯಲ್ಲಿ ಕಮಿಷನ್‌ ನಡೆದಿದೆ. ಜೆಡಿಎಸ್‌ ಮಂತ್ರಿಗಳಿಗೆ ಕಮಿಷನ್‌ ಇಟ್ಟುಕೊಳ್ಳಿ ಎಂದು ನಾನು ಸೂಚನೆ ಕೊಟ್ಟಿರಲಿಲ್ಲ. ಯಾರಿಗೂ ಆ ಕೆಲಸ ಮಾಡಲು ಬಿಟ್ಟಿಲ್ಲ. ಈ ಭ್ರಷ್ಟಾಚಾರವನ್ನು ನಿಲ್ಲಿಸುವುದು ಹೇಗೆಂದು ಚರ್ಚೆ ಮಾಡಬೇಕು. ಇದಕ್ಕೆ ಜನರು ಕೂಡ ರೆಡಿಯಾಗಬೇಕು, ಇದು ಒಬ್ಬಿಬ್ಬರು ಮಾಡುವಂತಹ ಕೆಲಸ ಅಲ್ಲ ಎಂದರು.

ಮುಂದಿನ ಚುನಾವಣೆಯಲ್ಲಿ ತಿಗಳ ಸಮುದಾಯಕ್ಕೆ ಒಂದೆರಡು ಟಿಕೆಟ್‌ ಕೊಡಲು ನಾನು ಸಿದ್ಧ. ಸಣ್ಣ ಸಣ್ಣ ಸಮುದಾಯಕ್ಕೂ ಅವಕಾಶ ಕೊಡಬೇಕೆಂಬುದು ನಮ್ಮ ಆಸೆ. ಮೈಸೂರಿನಲ್ಲಿ ಜಿ.ಟಿ. ದೇವೇಗೌಡ ಅವರು ಪಾರ್ಟಿ ಬಿಟ್ಟು ಹೋಗಿಲ್ಲ. ಅವರು ಜೆಡಿಎಸ್‌ನಲ್ಲಿಯೇ ಇದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | ಮುನಿಸು ಮರೆತು ಒಂದಾದ ಎಚ್‌ಡಿಕೆ, ಜಿಟಿಡಿ, ಪುತ್ರ ಹರೀಶ್‌ ಗೌಡರನ್ನೂ ಹಾಡಿ ಹೊಗಳಿದ ಕುಮಾರಸ್ವಾಮಿ

Exit mobile version