ಬೆಂಗಳೂರು: ಚಾಮರಾಜಪೇಟೆ ಶಾಸಕ ಹಾಗೂ ತಮ್ಮ ಆಪ್ತ ಬಿ.ಜೆಡ್. ಜಮೀರ್ ಅಹ್ಮದ್ ಅವರ ಮೇಲೆ ಎಸಿಬಿ ದಾಳಿಗೆ ಸಂಬಂಧಿಸಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಕಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೊಟ್ಟು ಮಾಡಿದ್ದಾರೆ.
ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಹಲವು ಹಲವು ಅಧಿಕಾರಿಗಳು ಹಾಗೂ ಸಚಿವರ ಕೈವಾಡವಿದೆ. ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧವೂ ಆರೋಪ ಕೇಳಿಬಂದಿದೆ. ಇವರನ್ನು ರಕ್ಷಿಸಲು ಎಸಿಬಿ ದಾಳಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಕರಣದ ವಿಚಾರಣೆ ವೇಳೆ ಸಚಿವ ಅಶ್ವತ್ಥನಾರಾಯಣ ಹೆಸರು ಹೇಳಿದ್ದ ಅಭ್ಯರ್ಥಿಯನ್ನು ಬಿಟ್ಟು ಕಳುಹಿಸಲಾಗಿತ್ತು, ಆನಂತರ ಆತನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಹೀಗೆ ಅಶ್ವತ್ಥನಾರಾಯಣ ಅವರ ಕಡೆಯಿಂದ ಐದು ಮಂದಿ ಅಕ್ರಮವಾಗಿ ನೇಮಕವಾಗಿದ್ದಾರೆ. ಈ ಪ್ರಕರಣದಲ್ಲಿ ಮಾಜಿ ಸಿಎಂ ಮಗನ ಹೆಸರು ಕೂಡ ಕೇಳಿ ಬಂದಿದೆ ಎಂದು ಹೇಳಿದರು. ಮಾಜಿ ಸಿಎಂ ಪುತ್ರ ಯಾರು ಎಂದು ಹೆಸರು ಬಹಿರಂಗಪಡಿಸಿ ಎಂಬ ಪತ್ರಕರ್ತರ ಪ್ರಶ್ನೆ ನಂತರ, ಬಿ.ವೈ. ವಿಜಯೇಂದ್ರ ಅವರ ಹೆಸರನ್ನು ಸಿದ್ದರಾಮಯ್ಯ ಹೇಳಿದರು.
ನಂತರ ಈ ವಿಚಾರದಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪಿಎಸ್‌ಐ ಹಗರಣದಲ್ಲಿ ಸಚಿವರು ಹಾಗೂ ಮಾಜಿ ಸಿಎಂ ಪುತ್ರನ ಪಾತ್ರವಿದೆ ಎಂದು ವರದಿಗಳು ಹೇಳುತ್ತವೆ. ಶಾಸಕ ಜಮೀರ್ ಅಹ್ಮದ್ ಅವರ ಮನೆ ಹಾಗೂ ಕಚೇರಿಗಳ ಮೇಲಿನ ದಾಳಿಯು ಪಿಎಸ್‌ಐ ಹಗರಣದ ಕುರಿತು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ಕಾರಣಕ್ಕೆ ನಡೆದಿದೆ. ರಾಜಕೀಯ ಪ್ರೇರಿತವಾದ ಈ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ಅಕ್ರಮದಲ್ಲಿ ಭಾಗಿಯಾಗಿರುವವರಿಗೆ ಸಿಎಂ ಬಸವರಾಜ ಬೊಮ್ಮಾಯಿ ರಕ್ಷಣೆ ನೀಡುತ್ತಿದ್ದು, ಈ ಕೂಡಲೇ ಅವರು ರಾಜೀನಾಮೆ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ವತ್ಥನಾರಾಯಣ ಅವರ ಮೇಲೆ ಸಿಐಡಿ ಕ್ರಮ ಕೈಗೊಳ್ಳುತ್ತದೆಯೇ?, ಅಕ್ರಮದಲ್ಲಿ ಒಬ್ಬ ಅಭ್ಯರ್ಥಿಯಿಂದ 30 ಲಕ್ಷದಿಂದ 1 ಕೋಟಿ ರೂ.ವರೆಗೆ ವಸೂಲಿ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಆರೋಪಿಸಿದರು.
ಇದನ್ನೂ ಓದಿ | PSI Scam | ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು: ಸಿದ್ದರಾಮಯ್ಯ, ಶಿವಕುಮಾರ್, ಕುಮಾರಸ್ವಾಮಿ ವಾಗ್ದಾಳಿ