Site icon Vistara News

ರೈತ, ದಲಿತ ಸಮುದಾಯಗಳಿಗೆ ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ದ್ರೋಹ: ಮಾಜಿ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ

ಬೆಂಗಳೂರು: ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸುವ ಮೂಲಕ ರೈತ ಮತ್ತು ದಲಿತ ಸಮುದಾಯಗಳಿಗೆ ಡಬಲ್ ಎಂಜಿನ್ ಸರ್ಕಾರ ಡಬಲ್ ದ್ರೋಹ ಎಸಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಅರ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾಯ್ದೆ ತಂದಿದೆ. ಈ ಕಾಯ್ದೆ ಜಾರಿ ಆಗುವ ಮೊದಲೇ ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ತನ್ನು ನಿಲ್ಲಿಸಿದೆ. ಹಾಗೆಯೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಏಳಿಗೆ ಬಗ್ಗೆಯೂ ಪುಟಗಟ್ಟಲೆ ಜಾಹೀರಾತು ನೀಡಲಾಗಿತ್ತು. ಆದರೆ, ಬಿಪಿಎಲ್ ಕಾರ್ಡ್ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನೇ ನಿಲ್ಲಿಸುವಂತೆ ಸರ್ಕಾರ ಸೆ.3ರಂದು ಆದೇಶ ಹೊರಡಿಸಿದೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬಂದು ಜನೋದ್ಧಾರದ ಭಾಷಣ ಮಾಡಿ ಹೋದ ಬೆನ್ನಲ್ಲೇ ಸರ್ಕಾರ ಈ ಎರಡು ಜನದ್ರೋಹದ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರ ಭಾಷಣಗಳೆಲ್ಲ ಪೂರ್ತಿ ಬೋಗಸ್ ಎನ್ನುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಂತಾಗಿದೆ. ಇದಕ್ಕಿಂತ ದೊಡ್ಡ ಜನದ್ರೋಹ ಮತ್ತೊಂದು ಇರಲಾರದು ಎಂದು ಕುಟುಕಿದ್ದಾರೆ.

ರೈತ ಸಮುದಾಯಕ್ಕೆ ಸರ್ಕಾರ ನೀಡುವ ಯಾವ ಸವಲತ್ತುಗಳು ಮತ್ತು ರಿಯಾಯಿತಿ, ವಿನಾಯಿತಿಗಳನ್ನೂ ಉಚಿತ ಎಂದು ಭಾವಿಸಲೇಬಾರದು. ‘ಸರ್ಕಾರವೇ ರೈತರ ಸಾಲಗಾರ’ ಎಂದು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಪದೇ ಪದೇ ಹೇಳುತ್ತಿದ್ದರು. ನಾನೂ ಕೂಡ ಈ ಮಾತನ್ನು ಪೂರ್ತಿಯಾಗಿ ಸಮರ್ಥಿಸುತ್ತೇನೆ. ಹೀಗಾಗಿ ಈ ತಕ್ಷಣದಿಂದಲೇ ಸರ್ಕಾರ ತನ್ನ ಜನದ್ರೋಹಿ, ರೈತ ವಿರೋಧಿ ಕೃತ್ಯವನ್ನು ನಿಲ್ಲಿಸಬೇಕು. ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಮೊದಲಿಗಿಂತ ಹೆಚ್ಚು ಸಮರ್ಪಕವಾಗಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ರೈತ ಸಮುದಾಯದ ಹೊಟ್ಟೆಯ ಸಿಟ್ಟು ನಿಮ್ಮನ್ನು ಸುಡುತ್ತದೆ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನು ಮುಂದುವರಿಸಬೇಕು ಎಂದು ಹೇಳಿದ್ದಾರೆ.

ವಿದ್ಯುತ್ ಸೋರಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ವೈಜ್ಞಾನಿಕ ಕ್ರಮಗಳನ್ನು ಬೃಹತ್ ಕಂಪನಿಗಳು ಉಳಿಸಿಕೊಂಡಿರುವ ದೊಡ್ಡ ಪ್ರಮಾಣದ ಬಾಕಿಯನ್ನು ವಸೂಲಿ ಮಾಡಬೇಕು. ಇಲಾಖೆಯ ಭ್ರಷ್ಟಾಚಾರವನ್ನು ಹದ್ದುಬಸ್ತಿಗೆ ತರುವ ಬಗ್ಗೆ ಹೆಚ್ಚು ಗಮನ ಕೊಡಬೇಕಾದ ಸರ್ಕಾರ ರೈತರು ಮತ್ತು ಎಸ್‌ಸಿ, ಎಸ್‌ಟಿ ಸಮುದಾಯವನ್ನು ತನ್ನ ಲೋಪಗಳಿಗೆ ಹೊಣೆ ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಕ್ರಮ. ಈ ಕೂಡಲೇ ಇಂತಹ ಅನಾಗರಿಕ ಧೋರಣೆಯನ್ನು ನಿಲ್ಲಿಸಿ ವಿದ್ಯುತ್ ಯೋಜನೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಜೆಡಿಎಸ್‌ ಸಮಾವೇಶದಲ್ಲಿ ಗದ್ದಲ; ಮಾಜಿ ಸಚಿವ ಎಚ್‌.ಡಿ. ರೇವಣ್ಣ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು

Exit mobile version