Site icon Vistara News

ಸಾಂಸ್ಕೃತಿಕ ಭಯೋತ್ಪಾದನೆ ವಿರುದ್ಧ ಹೋರಾಡಬೇಕಿದೆ : ಮಾಜಿ ಸಿಎಂ ಸಿದ್ದರಾಮಯ್ಯ

ಶಿವಮೊಗ್ಗ: ಪಠ್ಯ ಪರಿಷ್ಕರಣೆಯ ವಿರುದ್ಧದ ಹೋರಾಟ ಕನ್ನಡದ ಅಸ್ಮಿತೆಗಾಗಿನ ಹೋರಾಟ. ಈ ಹೋರಾಟ ಕುವೆಂಪು ಹುಟ್ಟಿದ ನೆಲದಿಂದ ಆರಂಭವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡಿಗಕರ ಅಸ್ಮಿತೆಗೆ ಧಕ್ಕೆಯನ್ನುಂಟುಮಾಡಿ, ಕನ್ನಡದ ಮನಸ್ಸುಗಳಿಗೆ ನೋವುಂಟು ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ. ಇವರು ಹಿಂದೂ ಹಿಂದೂ ಎಂದು ಭಜನೆ ಮಾಡುತ್ತಾರೆ, ಅಂಬೇಡ್ಕರ್‌, ನಾರಾಯಣ ಗುರು ಹಿಂದೂಗಳಲ್ಲವೇ, ಅವರ ಪಾಠವನ್ನೇಕೆ ತಿರುಚಬೇಕಿತ್ತು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಪಠ್ಯ ಪರಿಷ್ಕರಣೆ ವಿರೋಧಿಸಿ ಕಾಂಗ್ರಸ್‌ ನಡೆಸಿರುವ ಕುಪ್ಪಳಿ-ತೀರ್ಥಹಳ್ಳಿ ಪಾದಯಾತ್ರೆ ಯಾವುದೇ ರಾಜಕೀಯ ಲಾಭಕ್ಕಾಗಿ ಮಾಡಿರುವ ಹೋರಾಟ ಅಲ್ಲ, ಕನ್ನಡದ ಅಸ್ಮಿತೆಗಾಗಿ ನಡೆದ ಹೋರಾಟ ಎಂದು ಬಣ್ಣಿಸಿದರು.

ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಬುಧವಾರ ಕುಪ್ಪಳಿ-ತೀರ್ಥಹಳ್ಳಿ ಪ್ರತಿಭಟನಾ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಸಿದ್ದರಾಮಯ್ಯ, ಬಸವಣ್ಣ, ಅಂಬೇಡ್ಕರ್‌, ಕುವೆಂಪು, ನಾರಾಯಣ ಗುರುಗಳಂತಹ ಮಹಾಪುರುಷರ ಚರಿತ್ರೆಯನ್ನು ತಿರುಚಲಾಗುತ್ತಿದೆ. ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಮನುಷ್ಯ ಧರ್ಮದ ಸ್ಥಾಪನೆ ಮಾಡಿದರು. ಅವರು ಎಲ್ಲಾ ಮೌಢ್ಯ, ಕಂದಾಚಾರ, ಜಾತಿ ವ್ಯವಸ್ಥೆಗಳ ವಿರುದ್ಧ ಹೋರಾಟ ಮಾಡಿ ಮನುಷ್ಯ ಮನುಷ್ಯನಾಗಿ ಬಾಳುವ ಅವಕಾಶವಾಗಬೇಕು ಎಂದು ದುಡಿದರು. ಆದರೆ ಬಸವಣ್ಣ ಅವರ ಆಶಯಗಳಿಗೆ ವಿರುದ್ಧವಾಗಿ ಜನರನ್ನು ಮತ್ತೆ ವೈದಿಕ ಧರ್ಮದ ಕಡೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

ಅಂಬೇಡ್ಕರ್‌ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗದೇ ಹೋಗಿದ್ದರೆ ಈ ದೇಶಕ್ಕೆ ಇಂತಹ ಯೋಗ್ಯ ಸಂವಿಧಾನ ಸಿಗುತ್ತಿರಲಿಲ್ಲ. ಆರ್‌ಎಸ್‌ಎಸ್‌ ಮತ್ತು ಅಂಗ ಸಂಸ್ಥೆಗಳಿಗೆ ಸಂವಿಧಾನ ರಚನೆಯಾದ ದಿನದಿಂದಲೂ ಅದರ ಬಗ್ಗೆ ಗೌರವ ಇಲ್ಲ. ಕಾರಣ ಸಂವಿಧಾನ ಸಮಾನತೆ, ಜಾತ್ಯಾತೀತತೆಯನ್ನು ಸಾರುತ್ತದೆ, ಇದು ಮನುವಾದಿಗಳಿಗೆ ಇಷ್ಟವಿಲ್ಲ ಎಂದರು.

ಇದನ್ನೂ ಓದಿ | ಚರ್ಚೆಗೆ ಬರಲು ಸಿದ್ದರಾಮಯ್ಯ ಬಾಯಿ ಬಿದ್ದು ಹೋಗಿದೆಯಾ?: ಪ್ರತಾಪ್ ಸಿಂಹ ಕಿಡಿ

ಇಂದು ಆರಂಭವಾದ ಈ ಹೋರಾಟಕ್ಕೆ ರಾಜಕೀಯ ರೂಪ ಕೊಡಬಾರದು, ರಾಜಕೀಯ ರೂಪ ಪಡೆಯದೇ ಇದ್ದರೆ ಮಾತ್ರ ಇದು ಹೆಚ್ಚು ಯಶಸ್ವಿಯಾಗಲು ಸಾಧ್ಯ. ಇಂಥಾ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣವಾದ ಬೆಂಬಲ ಇರಲಿದೆ. ಇಂದು ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದೆ. ಇದರ ವಿರುದ್ಧ ಕನ್ನಡದ ಮನಸುಗಳು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಬಸವರಾಜ ಬೊಮ್ಮಾಯಿ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಿಸರ್ಜನೆ ಮಾಡಿದ್ದಾರೆ, ಆದರೆ ಆ ಸಮಿತಿ ಶಿಫಾರಸು ಮಾಡಿದ್ದ ಪಠ್ಯಗಳನ್ನು ತಿರಸ್ಕಾರ ಮಾಡಿಲ್ಲ. ಶಿಕ್ಷಣ ಸಚಿವ ನಾಗೇಶ್‌ ಅವರ ತಂದೆ ಚಂದ್ರಶೇಖರಯ್ಯ ಅವರು ರಾಮಕೃಷ್ಣ ಹೆಗಡೆ ಅವರ ಶಿಷ್ಯ, ಆದರೆ ಈ ಪುಣ್ಯಾತ್ಮ ನಾಗೇಶ್ ಆರ್‌ಎಸ್‌ಎಸ್‌ ಸೇರಿಕೊಂಡು ಬರೀ ಸುಳ್ಳು ಹೇಳುತ್ತಾರೆ. ಇಂಥವರು ಮಕ್ಕಳಿಗೆ ವಿದ್ಯೆ ಕಲಿಸಲು ಅರ್ಹರೆ? ಇಲ್ಲಿನ ಶಾಸಕ ಜ್ಞಾನೇಂದ್ರರಿಗೆ ಜ್ಞಾನವೇ ಇಲ್ಲ. ಆತ ಅಜ್ಞಾನಿ. ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಗೃಹ ಸಚಿವ ಎಂದರೆ ಆರಗ ಜ್ಞಾನೇಂದ್ರ ಎಂದು ಜರಿದರು. ಮಕ್ಕಳಿಗೆ ವಿಷ ಉಣಿಸುವ ಇಂಥವರ ವಿರುದ್ಧ ನಾವು ಹೋರಾಟವನ್ನು ಮಾಡಲೇಬೇಕು. ಈ ನಿಟ್ಟಿನಲ್ಲಿ ಇಂಥಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಆಶಿಸುತ್ತೇನೆ ಎಂದರು.

ಕಿಮ್ಮನೆ ರತ್ನಾಕರ್‌ ಅವರು ಒಬ್ಬ ಸಭ್ಯ ರಾಜಕಾರಣಿ. ರಾಜ್ಯ ಕಂಡ ಅತ್ಯಂತ ಸಭ್ಯತೆಯ, ಬದ್ಧತೆಯ ಕೆಲವೇ ರಾಜಕಾರಣಿಗಳಲ್ಲಿ ಇವರು ಒಬ್ಬರು. ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಅವರನ್ನು ಸಂಪುಟದಿಂದ ಕೈಬಿಟ್ಟ ವೇಳೆ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದಿದ್ದರು, ಸಚಿವ ಸಂಪುಟದಿಂದ ಕೈ ಬಿಟ್ಟರೆ ಖುಷಿ ಪಡುವ ವ್ಯಕ್ತಿ ಇವರು ಎಂದು ಕಿಮ್ಮನೆಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಕೆ.ಆರ್.ರಮೇಶ್‌ ಕುಮಾರ್‌ ಮಾತನಾಡಿ, ಪಠ್ಯ ಪರಿಷ್ಕರೆಗೆ ಟ್ಯುಟೋರಿಯಲ್‌ ಮಾಡುತ್ತಿದ್ದವರನ್ನು ನೇಮಿಸುತ್ತಾರೆ. ಶಿಕ್ಷಣ ಸಚಿವರು ಅವರನ್ನು ಪ್ರೋಫೆಸರ್‌ ಎಂದು ಹೇಳಿದ್ದಾರೆ. ಮುಗ್ಧ ಮಕ್ಕಳ ಮನಸ್ಸಿಗೆ ವಿಷ ತುಂಬುವ ಕೆಲಸವಾಗುತ್ತಿದೆ. ಕುವೆಂಪು, ಬಸವಣ್ಣ, ಸಾಹಿತಿಗಳು ಇವರು ಯಾರಿಗೂ ಸಮಾನರಲ್ಲವೇ, ಯಾರಿಗೇ ಯಾರನ್ನು ಪರಿಚಯ ಮಾಡಿಸಲು ಹೋಗುತ್ತಿದ್ದೀರಾ ಎಂದು ಅಸಮಾಧಾನ ಹೊರಹಾಕಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಸಂಗೀತ ನಿರ್ದೇಶಕ ಹಂಸಲೇಖ, ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು, ಶಾಸಕ ಟಿ.ಡಿ. ರಾಜೇಗೌಡ, ಡಿಎಸ್‌ಎಸ್‌ ರಾಜ್ಯ ಅಧ್ಯಕ್ಷ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | ಕಿಮ್ಮನೆ ಪಾದಯಾತ್ರೆಗೆ ಕಿಮ್ಮತ್ತು ಕೊಡದ ಡಿಕೆಶಿ: ಸಿದ್ದರಾಮಯ್ಯ ಹಾಜರ್‌

Exit mobile version