Site icon Vistara News

ಗುಲಾಂ ನಬಿ ಆಜಾದ್‌ ಬಳಿಕ ಕೆ.ಎಚ್‌. ಮುನಿಯಪ್ಪ ಕಾಂಗ್ರೆಸ್‌ ಬಿಡ್ತಾರಾ?: ರಾಜಕೀಯ ವಲಯದಲ್ಲಿ ಬಿಸಿ ಚರ್ಚೆ

K H Muniyappa

ಬೆಂಗಳೂರು: ಐವತ್ತು ವರ್ಷಗಳಿಂದ ಕಾಂಗ್ರೆಸ್‌ನ ಏಳುಬೀಳುಗಳಿಗೆ ಸಾಕ್ಷಿಯಾಗಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರು ಪಕ್ಷವನ್ನು ತೊರೆದ ನಡುವೆಯೇ ಸುದೀರ್ಘ ಅವಧಿಯಲ್ಲಿ ಕೈ ಪಾಳಯದಲ್ಲಿ ದೊಡ್ಡ ಹೆಸರಾಗಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಅವರೂ ನಿರ್ಗಮನದ ಹಾದಿಯಲ್ಲಿದ್ದಾರಾ?

ಕಂಬದ ಹಳ್ಳಿ ಹನುಮಪ್ಪ ಮುನಿಯಪ್ಪ ಅವರು ೧೯೯೧ರಿಂದ ೨೦೧೯ರವರೆಗೆ ಸುದೀರ್ಘ ಅವಧಿಗೆ ಲೋಕಸಭಾ ಸದಸ್ಯರಾಗಿದ್ದವರು. ಮನಮೋಹನ್‌ ಸಿಂಗ್‌ ಅವರ ಆಡಳಿತದಲ್ಲಿ ರೈಲ್ವೆ ಸೇರಿದಂತೆ ಹಲವು ಇಲಾಖೆಗಳನ್ನು ಮಂತ್ರಿಯಾಗಿ ನಿಭಾಯಿಸಿದವರು. ಕೋಲಾರ ಭಾಗದಲ್ಲಿ ಕಾಂಗ್ರೆಸ್‌ನ ಗಟ್ಟಿ ಹೆಸರು ಮತ್ತು ಪರಿಶಿಷ್ಟ ಜಾತಿಯ ದೊಡ್ಡ ನಾಯಕ. ಆದರೆ, ಕಳೆದ ಕೆಲವು ಸಮಯದಿಂದ ಅವರಿಗೆ ರಾಜ್ಯ ಕಾಂಗ್ರೆಸ್‌ನ ಇಬ್ಬರು ಪ್ರಧಾನ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರಿಬ್ಬರ ಮೇಲೂ ಸಿಕ್ಕಾಪಟ್ಟೆ ಮುನಿಸಿದೆ. ಅದನ್ನು ಅವರು ಕಾಲಕಾಲಕ್ಕೆ ನೇರವಾಗಿಯೇ ಹೇಳಿಕೊಂಡು ಬಂದಿದ್ದಾರೆ. ಈ ನಡುವೆ, ಅವರು ರಾಜ್ಯದ ಇಬ್ಬರು ಪ್ರಮುಖ ಬಿಜೆಪಿ ನಾಯಕರ ಜತೆ ಗಂಟೆಗಟ್ಟಲೆ ಖಾಸಗಿಯಾಗಿ ಮಾತನಾಡಿರುವುದು ಕುತೂಹಲ ಕೆರಳಿಸಿದೆ ಮತ್ತು ಅವರು ಕಾಂಗ್ರೆಸ್‌ನಿಂದ ನಿರ್ಗಮಿಸುವ ಕಾಲ ಸನ್ನಿಹಿತವಾಗಿದೆ ಎನ್ನುವುದನ್ನು ಸ್ವಲ್ಪ ಮಟ್ಟಿಗೆ ಧ್ವನಿಸಿದೆ. ಹಾಗಂತ ಮುನಿಯಪ್ಪ ಮಾತ್ರ ಇದನ್ನು ನೇರವಾಗಿ ಒಪ್ಪಿಕೊಳ್ಳುತ್ತಿಲ್ಲ.

ಸುಧಾಕರ್‌, ಸಿಎಂ ಬೊಮ್ಮಾಯಿ ಜತೆ ಚರ್ಚೆ
ಕೆ.ಎಚ್‌. ಮುನಿಯಪ್ಪ ಅವರು ಶುಕ್ರವಾರ ತಮ್ಮ ಕಟ್ಟಾ ವಿರೋಧಿ, ರಾಜ್ಯದ ಆರೋಗ್ಯ ಸಚಿವ ಕೆ. ಸುಧಾಕರ್‌ ಅವರ ಜತೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಖಾಸಗಿಯಾಗಿ ಚರ್ಚೆ ನಡೆಸಿದ್ದಾರೆ. ಸ್ವತಃ ಅವರೇ ಸುಧಾಕರ್‌ ಅವರ ಸದಾಶಿವ ನಗರ ನಿವಾಸಕ್ಕೆ ಹೋಗಿ ಮಾತನಾಡಿದ್ದಾರೆ.

ತಮ್ಮ ವಿರೊಧಿಗಳಾಗಿರುವ ಎಂ.ಸಿ ಸುಧಾಕರ್, ಕೊತ್ತನೂರು ಮಂಜುನಾಥ್ ಮತ್ತು ಹಲವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡಿದ್ದರಿಂದ ಮುನಿಯಪ್ಪ ಅವರು ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ಭಾಗದಲ್ಲಿ ನಡೆದ ಪಾದಯಾತ್ರೆಯಲ್ಲೂ ತಮ್ಮನ್ನು ನಿರ್ಲಕ್ಷಿಸಿ ಎಂ.ಸಿ. ಸುಧಾಕರ್‌ ಅವರನ್ನು ವಿಜೃಂಭಿಸಲಾಗಿದೆ ಎನ್ನುವುದು ಮುನಿಯಪ್ಪ ಮುನಿಸನ್ನು ಹೆಚ್ಚಿಸಿದೆ ಎನ್ನಲಾಗಿದೆ. ಹೀಗಾಗಿ ಸುಧಾಕರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ಹೆಚ್ಚು ಚರ್ಚೆಗೆ ಕಾರಣವಾಗಿದೆ. ಆದರೆ, ಮುನಿಯಪ್ಪ ಮಾತ್ರ, ಸುಧಾಕರ್‌ ತಮಗೆ ಆತ್ಮೀಯರು, ಅವರ ತಂದೆ ಜತೆಗೂ ಒಡನಾಟ ಎಂದು ಹೇಳಿಕೊಂಡಿದ್ದಾರೆ.

ಸುಧಾಕರ್‌ ಭೇಟಿಯ ಬಳಿಕ ಅವರು ಹೋಗಿದ್ದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ. ರೇಸ್‌ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಿಎಂ ಬೊಮ್ಮಾಯಿ‌ ಅವರನ್ನು ಭೇಟಿಯಾದ ಮುನಿಯಪ್ಪ ಇಲ್ಲಿ ಕೂಡಾ ಅಧಿಕೃತ ಕಾರಣವನ್ನೇ ಕೊಟ್ಟಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಅವಣಿಯಲ್ಲಿ ಆದಿಜಾಂಬವ ಮಠಕ್ಕೆ ಸಂಬಂಧಿಸಿ ಚರ್ಚೆಗಾಗಿ ಹೋಗಿದ್ದೆ ಎಂದಿದ್ದಾರೆ.

ಮಠಕ್ಕೆ ಭೂಮಿಯನ್ನು ಕೊಡಬೇಕು, ಅನುದಾನವನ್ನು ಕೊಡಬೇಕು. ಮಠದ ಅಭಿವೃದ್ಧಿ ಜತೆಗೆ ಮಠದ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನೂ ನಡೆಸಲು ನೆರವು ಬೇಕಾಗಿದೆ. ಹೀಗಾಗಿ ಸಿಎಂ ಭೇಟಿ ಮಾಡಿದ್ದೇನೆ ಎಂದಿದ್ದಾರೆ. ಇದು ಚಿಕ್ಕಬಳ್ಳಾಪುರದ ವಿಚಾರವಾಗಿರುವುದರಿಂದ ಸಚಿವ ಸುಧಾಕರ್‌ ಮೂಲಕ ಭೇಟಿಯಾಗಿದ್ದೇನೆ ಎಂದು ವಿವರಣೆ ನೀಡಿದ್ದಾರೆ.

ಸುರ್ಜೇವಾಲಾ ಫೋನ್‌ ಬಳಿಕವೂ ಭೇಟಿ
ನಿಜವೆಂದರೆ, ಮುನಿಯಪ್ಪ ಅವರ ಚಟುವಟಿಕೆಗಳ ಬಗ್ಗೆ ಅರಿವಿದ್ದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಗುರುವಾರ ಸಂಜೆಯೇ ಕರೆ ಮಾಡಿ ಮಾತನಾಡಿದ್ದರು. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರ ಮೇಲಿರುವ ಸಿಟ್ಟಿನ ಬಗ್ಗೆಯೂ ಅವರು ಮಾತನಾಡಿದ್ದಾರೆ ಎನ್ನಲಾಗಿದೆ.

ʻʻಪಕ್ಷ ಯಾವತ್ತೂ ನಿಮ್ಮನ್ನು ಕಡೆಗಣಿಸಿಲ್ಲ. ಪಕ್ಷ ಬಿಡುವ ನಿರ್ಧಾರ ಮಾಡಬೇಡಿ. ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ. ಶೀಘ್ರದಲ್ಲಿ ನಿಮಗೆ ಉನ್ನತ ಸ್ಥಾನಮಾನ ನೀಡಲಾಗುತ್ತದೆ. ಎಐಸಿಸಿ ಮಟ್ಟದಲ್ಲಿ ನಿಮಗೆ ಜವಾಬ್ದಾರಿ ಕೊಡ್ತೇವೆ.. ಹೀಗಾಗಿ ಬೇರೆ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿʼʼ ಎಂದು ಸುರ್ಜೇವಾಲ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ. ತನ್ನ ಮನಸ್ಸಿನಲ್ಲಿರುವ ನೋವನ್ನೂ ಹೇಳಿಕೊಂಡಿರುವ ಮುನಿಯಪ್ಪ ಪಕ್ಷ ಬಿಡಬೇಡಿ ಎನ್ನುವ ಮನವಿಗೆ ಆಯಿತು ನೋಡೋಣ ಎಂದಿದ್ದಾರೆ ಎನ್ನಲಾಗಿದೆ. ಆದರೆ, ಅದರ ಮರುದಿನವೇ ಸುಧಾಕರ್‌ ಮತ್ತು ಸಿಎಂ ಜತೆ ಗಂಟೆಗಟ್ಟಲೆ ಮಾತನಾಡಿದ್ದಾರೆ.

ಕಾಂಗ್ರೆಸ್‌ ಬಿಡಲ್ಲ ಎಂದ ಮುನಿಯಪ್ಪ
ಇಷ್ಟೆಲ್ಲ ಚಟುವಟಿಕೆಗಳ ಬಳಿಕ ಮಾತನಾಡಿದ ಕೆ.ಎಚ್‌. ಮುನಿಯಪ್ಪ, ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಸಕ್ರಿಯವಾಗಿಯೇ ಇದ್ದೇನೆ. ಡಿ.ಕೆ.ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಮತ್ತು ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಒಟ್ಟಿಗೆ ಬಂದು ಒಂದು ಗಂಟೆ ಕಾಲ ಚರ್ಚೆ ಮಾಡಿದ್ದಾರೆ. ಕೆಲವು ಬಾರಿ ಹೈಕಮಾಂಡ್‌ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಅಸಮಾಧಾನ ಇದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ, ಗುಲಾಂ ನಬಿ ಆಜಾದ್‌ ರಾಜೀನಾಮೆ ವಿಚಾರದ ಬಗ್ಗೆ ಕೇಳಿದಾಗ, ಅವರಿಗೆ ಹೀಗೆ ಆಗಬಾರದಿತ್ತು. ಬಹಳಷ್ಟು ವಿಚಾರದಲ್ಲಿ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಈಗ ಪಕ್ಷದಲ್ಲಿ ಇದ್ದೇನೆ. ಮುಂದುವರಿಯುತ್ತೇನೆ ಎಂದಿದ್ದಾರೆ ಮುನಿಯಪ್ಪ.

ಇದನ್ನೂ ಓದಿ| Ghulam Nabi Azad | ಕಾಂಗ್ರೆಸ್​​ ತೊರೆದ ಗುಲಾಂ ನಬಿ ಆಜಾದ್; ರಾಹುಲ್​ ಗಾಂಧಿ ಅಪ್ರಬುದ್ಧ ಎಂದ ಹಿರಿಯ ನಾಯಕ

Exit mobile version