Site icon Vistara News

Karnataka Congress: ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರ್ಪಡೆಗೆ ಸಮಯ ನಿಗದಿ: ಅಥಣಿಯಿಂದ ಸ್ಪರ್ಧೆ ಖಚಿತ

DK Shivakumar along with Siddaramaiah and Laxman savadi

#image_title

ಬೆಂಗಳೂರು: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರ್ಪಡೆ ಖಚಿತವಾಗಿದ್ದು, ಅಥಣಿ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣಜಿತ್‌ ಸಿಂಗ್‌ ಸುರ್ಜೆವಾಲ ಅವರೊಂದಿಗೆ ಮಾತುಕತೆ ನಂತರ ಪಕ್ಷ ಸೇರುವ ತೀರ್ಮಾನ ಮಾಡಿದ್ದಾರೆ.

ಮೊದಲಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಮ್ಮ ಅವರ ಮಾತುಕತೆ ಬಹಳ ಸೌಹಾರ್ದಯುತವಾಗಿ ನಡೆದಿದೆ. ಅವರ ಗೌರವವನ್ನು ಕಾಪಾಡುತ್ತೇವೆ. ನಮ್ಮ ಕುಟುಂಬದ ಸದಸ್ಯರಾಗಲು ಸ್ವಯಿಚ್ಛೆಯಿಂದ ಒಪ್ಪಿದ್ದಾರೆ. 4 ಗಂಟೆಗೆ ವಿಧಾನ ಪರಿಷತ್‌ ಸಭಾಪತಿಯವರನ್ನು ಭೇಟಿ ಮಾಡಿ ರಾಜೀನಾಮೆ ನೀಡುತ್ತಾರೆ, 4.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಸೇರುತ್ತಾರೆ.

ಯಾವ ನಿಬಂಧನೆಗಳನ್ನು ವಿಧಿಸಿದ್ದಾರೆ ಎಂಬ ಪ್ರಶ್ನೆಗೆ, ಯಾವ ನಿಬಂಧನೆಯೂ ಇಲ್ಲ. ನಮ್ಮ ಪಕ್ಷ, ಸಿದ್ಧಾಂತ ಹಾಗೂ ನಾಯಕತ್ವ ಒಪ್ಪಿ ಬಂದಿದ್ದಾರೆ. ಅವರಿಗೆ ಗೌರವ ನೀಡನೇಕಾದ್ದು ನಮ್ಮ ಕರ್ತವ್ಯ. ಇನ್ನೂ ಬಹಳಷ್ಟು ಜನರು ಆಗಮಿಸುವವರಿದ್ದಾರೆ, ಅವರೆಲ್ಲರನ್ನೂ ಸ್ವಾಗತಿಸುತ್ತೇವೆ.

ಸತೀಶ್‌ ಜಾರಕಿಹೊಳಿ ಅವರು ಸಭೆಯಲ್ಲಿ ಇರಲಿಲ್ಲ ಎಂಬ ಪ್ರಶ್ನೆಗೆ, ಆ ರೀತಿ ಏನೂ ಇಲ್ಲ. ಅವರೊಂದಿಗೆ ಮಾತನಾಡಿದ್ದೇನೆ. ಬೇರೆ ಕಾರ್ಯಕ್ರಮದ ನಿಮಿತ್ತ ಆಗಮಿಸಿಲ್ಲ ಎಂದರು.

ಸಿದ್ದರಾಮಯ್ಯ ಮಾತನಾಡಿ, ಲಕ್ಷ್ಮಣ ಸವದಿ ಹಿರಿಯ ರಾಜಕಾರಣಿ. ಬಿಜೆಪಿ ತೀರ್ಮಾನದಿಂದ ಅವರು ಅವಮಾನಕ್ಕೆ ಒಳಗಾಗಿದ್ದಾರೆ. ಒಬ್ಬ ಹಿರಿಯ ರಾಜಕಾರಣಿಯನ್ನು ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಧಾನ ಪರಿಷತ್‌ ಸದಸ್ಯತ್ವ ಇನ್ನೂ ಐದು ವರ್ಷ ಇದ್ದರೂ ರಾಜೀನಾಮೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಸೇರುತ್ತೇನೆ, ನನಗೆ ಕಾಂಗ್ರೆಸ್‌ ಪಕ್ಷದಲ್ಲಿ ಗೌರವದಿಂದ ನಡೆಸಿಕೊಳ್ಳಬೇಕು ಎಂದಷ್ಟೇ ಹೇಳಿದ್ದಾರೆ. ಅಥಣಿ ಕ್ಷೇತ್ರದಿಂದ ನೂರಕ್ಕೆ ನೂರು ಸ್ಪರ್ಧೆ ಮಾಡುತ್ತಾರೆ ಎಂದರು.

ಲಕ್ಷ್ಮಣ ಸವದಿ ಮಾತನಾಡಿ, ಸುದೀರ್ಘ ಚರ್ಚೆ ಮಾಡಿದ್ದೇವೆ. ಕಂಡೀಷನ್‌ ಏನೂ ಇಲ್ಲ. ಅಥಣಿಯಿಂದ ಸ್ಪರ್ಧೆ ಮಾಡುತ್ತೇನೆ, ಮುಂದೆ ಸರ್ಕಾರ ಬಂದಾಗ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು, ನೀರಾವರಿ ಯೋಜನೆಗಳನ್ನು ಮುಗಿಸಿಕೊಡಬೇಕು ಎಂದು ಕೇಳಿದ್ದೇನೆ. ನನ್ನ ಮಗನಿಗೂ ಟಿಕೆಟ್‌ ಕೇಳಿಲ್ಲ, ಹೆಂಡತಿಗೂ ಕೇಳಿಲ್ಲ, ಅಣ್ಣನಿಗೂ ಕೇಳಿಲ್ಲ ಎಂದರು. ನಿಮ್ಮ ಸೇರ್ಪಡೆ ಕುರಿತು ಸತೀಶ್‌ ಜಾರಕಿಹೊಳಿ ಅವರಿಗೆ ಗೊತ್ತೆ ಎಂಬ ಪ್ರಶ್ನೆಗೆ, ಅವರಿಗೆ ಗೊತ್ತಿದೆ, ಅವರ ಜತೆ ಮಾತನಾಡಿದ್ದೇನೆ ಎಂದರು. ತಾವು ಪಕ್ಷ ಬಿಡುತ್ತಿರುವುದಕ್ಕೆ ಬೇಸರವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂಬ ಪ್ರಶ್ನೆಗೆ, ಅದಕ್ಕೆ ನಾನೇನು ಮಾಡೋಕೆ ಆಗುತ್ತದೆ? ನಾನೇನು ಅವರ ದುಃಖ ಒರೆಸೋಕೆ ಆಗುತ್ತ? ಎಂದರು.

ಇದನ್ನೂ ಓದಿ: Karnataka Elections : ಲಕ್ಷ್ಮಣ ಸವದಿಗೆ ಟಿಕೆಟ್‌ ಇಲ್ಲ; ಅನ್ಯಾಯ ಮಾಡಬೇಡಿ ಎಂದು ಕಣ್ಣೀರು ಹಾಕಿದ ನಾಯಕ

Exit mobile version