ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಕನ್ನಡಿಗರಾದ ಎಸ್ ಅಬ್ದುಲ್ ನಜೀರ್ (S Abdul Nazeer) ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಮತ್ತೊಂದೆಡೆ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ರಾಜೀನಾಮೆಯನ್ನು ಅಂಗೀಕರಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಜಾರ್ಖಂಡ್ ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಅವರನ್ನು ಮಹಾರಾಷ್ಟ್ರಕ್ಕೆ ರಾಜ್ಯಪಾಲರಾಗಿ ನಿಯೋಜಿಸಲಾಗಿದೆ. ವಿವಿಧ ರಾಜ್ಯಗಳಿಗೆ 12 ರಾಜ್ಯಪಾಲರು ಮತ್ತು ಒಬ್ಬರು ಲೆಫ್ಟಿನೆಂಟ್ ಗೌವರ್ನರ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ(Appointments of Governors).
ಜಾರ್ಖಂಡ್ ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಅವರನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ಮತ್ತು ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ನಿವೃತ್ತ ಬ್ರಿಗೇಡಿಯರ್ ಬಿ ಡಿ ಮಿಶ್ರಾ ಅವರನ್ನು ಲಡಾಕ್ ಲೆಫ್ಟಿನೆಂಟ್ ಗೌವರ್ನರ್ ಆಗಿ ನೇಮಕ ಮಾಡಲಾಗಿದೆ. ನಿವೃತ್ತ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ಅವರನ್ನು ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ, ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಸಿಕ್ಕಿಂ ರಾಜ್ಯಪಾಲರಾಗಿ, ಸಿಪಿ ರಾಧಾಕೃಷ್ಣನ್ ಜಾರ್ಖಂಡ್‌ನ ರಾಜ್ಯಪಾಲರಾಗಿ, ಶಿವ ಪ್ರತಾಪ್ ಶುಕ್ಲಾ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕಗೊಳಿಸಲಾಗಿದೆ. ಮತ್ತೊಂದೆಡೆ, ಕಟಾರಿಯಾ ಅವರೀಗ ಅಸ್ಸಾಮ್ ರಾಜ್ಯಪಾಲರಾಗಿದ್ದಾರೆ.
ಇದನ್ನೂ ಓದಿ: ವಿವಿಗಳಿಗೆ ರಾಜ್ಯಪಾಲರ ಬದಲು ಸಿಎಂ ಕುಲಾಧಿಪತಿ, ಹೊಸ ನಿಯಮ ಜಾರಿಗೆ ಮಮತಾ ತಂತ್ರ
ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದ ಬಿಸ್ವ ಭೂಷಣ್ ಹರಿಚರಣ್ ಅವರನ್ನು ಛತ್ತೀಸ್‌ಗಢಕ್ಕೆ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ, ಛತ್ತೀಸ್‌ಗಢ ರಾಜ್ಯಪಾಲರಾಗಿದ್ದ ಸುಶ್ರೀ ಅನುಸೂಯಾ ಉಕೆಯ ಅವರನ್ನು ಮಣಿಪುರಕ್ಕೆ ಕಳುಹಿಸಲಾಗಿದೆ. ಮಣಿಪುರ ರಾಜ್ಯಪಾಲರಾಗಿದ್ದ ಲಾ ಗಣೇಶನ್ ಅವರೀಗ ನಾಗಾಲ್ಯಾಂಡ್ ರಾಜ್ಯಪಾಲರಾಗಿದ್ದಾರೆ. ಹಾಗೆಯೇ, ಮೇಘಾಲಯ ರಾಜ್ಯಪಾಲರನ್ನಾಗಿ ಬಿಹಾರ ರಾಜ್ಯಪಾಲರಾಗಿದ್ದ ಫಗು ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ. ಬಿಹಾರಕ್ಕೆ ಹಿಮಾಚಲ ಪ್ರದೇಶ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರನ್ನು ಕಳುಹಿಸಲಾಗಿದೆ ಎಂದು ರಾಷ್ಟ್ರಪತಿ ಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.