Site icon Vistara News

ಪಠ್ಯದಲ್ಲಿ ಕೋಮುವಾದದ ಅಫೀಮು ಸೇರಿಸುತ್ತಿದ್ದಾರೆ: ಮಾಜಿ ಸಚಿವ ಮಹದೇವಪ್ಪ

ಮಹದೇವಪ್ಪ

ಮೈಸೂರು: ಕೋಮುವಾದದ ಅಫೀಮುವನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದು ರಾಜ್ಯ ಸರ್ಕಾರದ ಉದ್ದೇಶ. ಅವರಿಗೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಜನಾಭಿಪ್ರಾಯಕ್ಕೆ ಇವರು ಯಾವತ್ತೂ ಮನ್ನಣೆ ನೀಡಿಲ್ಲ, ಇದು ದಪ್ಪ ಚರ್ಮದ ಸರ್ಕಾರ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಅಂಬೇಡ್ಕರ್, ಬಸವಣ್ಣ, ಕುವೆಂಪು, ಕನಕದಾಸರು ಯಾರ ಮೇಲೂ ಗೌರವ ಇಲ್ಲ. ಇದು ಪಠ್ಯಪರಿಷ್ಕರಣೆಯ ಮೂಲಕ ಮತ್ತೆ ಸಾಬೀತಾಗಿದೆ. ಬರಗೂರು ಸಮಿತಿ ತಪ್ಪು ಮಾಡಿಲ್ಲವೇ ಎಂದು ಇವರು ಈಗ ಹೇಳುವುದು ಸಮರ್ಥನೀಯವಲ್ಲ ಎಂದು ಟೀಕಿಸಿದರು.

ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ವಿಚಾರ ಪ್ರತಿಕ್ರಿಯಿಸಿದ ಮಹದೇವಪ್ಪ, ಇದು ಸಾಮಾಜಿಕ ನ್ಯಾಯದ ಸಂಕೇತವಲ್ಲ. ಪ್ರಧಾನಿ ಹುದ್ದೆ, ರಾಷ್ಟ್ರಪತಿ ಹುದ್ದೆ, ಮುಖ್ಯಮಂತ್ರಿ ಹುದ್ದೆಯನ್ನು ಜಾತಿಯಿಂದ ನೋಡುವುದೇ ಸಂವಿಧಾನಕ್ಕೆ ಮಾಡುವ ಅಪಮಾನ. ದ್ರೌಪದಿ ಮುರ್ಮು ಅವರು ಬಿಜೆಪಿಯಲ್ಲಿ ಹಲವು ಘಟಕಗಳಲ್ಲಿ ಕೆಲಸ ಮಾಡಿದ್ದಾರೆ. ಜಾತಿ ನೋಡಿ ಅವರಿಗೆ ಸ್ಥಾನ ಕೊಡುವುದಾದರೆ ಅದು ತಪ್ಪು. ಅವರ ಕಾರ್ಯ ವೈಖರಿ ನೋಡಿ ಸ್ಥಾನ ಕೊಡಬೇಕು. ಬಿಜೆಪಿ ಇದರಲ್ಲೂ ಜಾತಿ ನಮೂದಿಸುತ್ತಾ ಸಂವಿಧಾನಕ್ಕೆ ಅಗೌರವ ತೋರುತ್ತಿದೆ ಎಂದು ಹರಿಹಾಯ್ದರು.

ಪ್ರತಾಪ್‌ ಸಿಂಹಗೆ ತಿರುಗೇಟು

ಮೈಸೂರಿನ ಅಭಿವೃದ್ಧಿ ಚರ್ಚೆಗೆ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಬರಲಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ನಾವು ಮಾಡಿರುವ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿದೆ. ಏನೂ ಕೆಲಸ ಮಾಡದೇ ಬರೀ ಬೊಗಳೆ ಬಿಟ್ಟುಕೊಂಡು ಅವರು ಓಡಾಡುತ್ತಿದ್ದಾರೆ. ಅವರು ಏನಾದರೂ ಅಭಿವೃದ್ಧಿ ಮಾಡಿದ್ದರೆ ತಾನೇ ಚರ್ಚೆ ಮಾಡುವುದು?. ಸುಮ್ಮನೆ ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಕೂತಿದ್ದಾರೆ. ನಾವು ಜಿಲ್ಲಾಸ್ಪತ್ರೆ ಕಟ್ಟದಿದ್ದರೆ ಕೋವಿಡ್ ಸಂದರ್ಭದಲ್ಲಿ ರೋಗಿಗಳನ್ನು ಎಲ್ಲಿ ಮಲಗಿಸುತ್ತಿದ್ದರು?. ಇಂತಹ ನೂರು‌ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | ಸಿದ್ದರಾಮಯ್ಯ, ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು : ಸಿ.ಟಿ.ರವಿ ಟೀಕೆ

Exit mobile version