ರಾಯಚೂರು: ರಾಜ್ಯ ವಿಧಾನಸಭಾ ಚುನಾವಣಾ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದರೂ ಆಡಳಿತ ರೂಢ ಬಿಜೆಪಿ ಪಕ್ಷ ಸೋಲು ಕಂಡಿತ್ತು. ಹೀಗಾಗಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಜೀನಾಮೆಗೆ ಪಕ್ಷದಲ್ಲಿ ಒತ್ತಾಯ ಕೇಳಿಬಂದಿತ್ತು. ಈ ನಡುವೆ ಚುನಾವಣೆಯಲ್ಲಿ ಕೇವಲ ಪ್ರಧಾನಿ ಮೋದಿ ಅವರ ಹೆಸರನ್ನೇ ಮುಂದಿಟ್ಟುಕೊಂಡು ಗೆಲ್ಲಬೇಕಿದ್ದರೆ ನೀವೆಲ್ಲಾ ಇರುವುದಾದರೂ ಯಾಕೆ? ಎಂದು ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಮುಖಂಡರು, ನಾಯಕರ ವಿರುದ್ಧ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಕಿಡಿಕಾರಿರುವುದು ಕಂಡುಬಂದಿದೆ.
ರಾಯಚೂರಿನಲ್ಲಿ ಶುಕ್ರವಾರ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಮಾಲೀಕಯ್ಯ ಗುತ್ತೇದಾರ್ ಅಸಮಾಧಾನ ಹೊರಹಾಕಿದ್ದಾರೆ.
ನಮ್ಮ ಸರ್ಕಾರಕ್ಕೆ ಜಂಭ ಬಂದು, ಆಕಾಶದಲ್ಲಿತ್ತು ಎಂದು ಟೀಕಿಸಿರುವ ಅವರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿತ್ತು. ಚುನಾವಣೆಯಲ್ಲಿ ಎಲ್ಲರೂ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಹೇಳುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲೇ ಮತ ಪಡೆಯಬೇಕು ಎಂಬ ಧೋರಣೆ ಇತ್ತು. ಹಾಗಿದ್ದರೆ ನೀವ್ಯಾಕೆ ಇದ್ದೀರಪ್ಪಾ? ಎಂದು ಮಾಲೀಕಯ್ಯ ಗುತ್ತೇದಾರ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ | BJP Politics: ಕಟೀಲ್ ಯು ಟರ್ನ್ ಹೊಡೆದಿದ್ದೇಕೆ? ಯಾರಾಗ್ತಾರೆ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ?
ಬಿಜೆಪಿಗೆ ಇಂತಹ ಪರಿಸ್ಥಿತಿ ಬಂದಿರುವುದರಿಂದ ಬಹಳ ನೋವಾಗಿದೆ. ಮಾಜಿ ಸಿಎಂ ಬಿ.ಎಸ್.ವೈ ಒಳ್ಳೆ ಆಡಳಿತ ನೀಡಿದ್ದರು. ಸುಮ್ಮನೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತು. ಇದು ಕೂಡ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಬೇಸರ ಹೊರಹಾಕಿದ್ದಾರೆ.