ಬೆಂಗಳೂರು: ನಾನು ಓದಿದ್ದು ಕಾರ್ಕಳ ಸಮೀಪದ ಮಠವೊಂದರ ಕಾನ್ವೆಂಟ್ ಶಾಲೆಯಲ್ಲಿ. ಅದರಲ್ಲಿ ತಪ್ಪೇನಿದೆ? ನಮ್ಮಂತಹವರು ಕಲ್ಬುರ್ಗಿಯಿಂದ ಬೆಂಗಳೂರಿಗೆ ಬಂದು ಕಲಿಯಬಾರದೇ? ದಲಿತರು ಇಂಗ್ಲಿಷ್ ಕಲಿಯಬಾರದೆ? ಬಿಜೆಪಿಯವರಿಗೆ ಮಲ ಹೊರುವ, ಕಾಲು ಒತ್ತುವ, ಚರಂಡಿ ಸ್ವಚ್ಛ ಮಾಡುವ ದಲಿತರೆಂದರೆ ಮಾತ್ರ ಪ್ರೀತಿ. ಅವರು ಹಾಗೆಯೇ ಇರಬೇಕೆ? ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಚಿವ ಸುನಿಲ್ ಕುಮಾರ್ ಅವರು ನನ್ನನ್ನು ಕಾನ್ವೆಂಟ್ ದಲಿತ ಎಂದು ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ. ಇಂತಹ ಹೇಳಿಕೆಗಳನ್ನು ಸಚಿವರಿಗೆ ಬಿಜೆಪಿ ಐಟಿ ಸೆಲ್‌ನವರು ಹೇಳಿಕೊಡುತ್ತಾರೋ ಅಥವಾ ಅವರ ಪ್ರಬುದ್ಧತೆಯೇ ಈ ಮಟ್ಟಕ್ಕಿಳಿದಿದೆಯೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ದಲಿತರು ಬೆಂಗಳೂರಿನಲ್ಲಿ ಹುಟ್ಟಬಾರದೆ? ಹಾಗಂತ ನಿಯಮಗಳಿವೆಯೇ? ಮೈಸೂರು, ಬೆಂಗಳೂರಿನಲ್ಲಿ ಹುಟ್ಟುವ ದಲಿತರು ಬೇರೆನಾ? ಅವರು ನನ್ನನ್ನು ಕಾನ್ವೆಂಟ್ ದಲಿತ ಎಂದು ಹೇಳಿದ್ದು, ಅವರು ನನ್ನ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಂಡು ಮಾತನಾಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದರು.
ಇದನ್ನೂ ಓದಿ | ʼನಾನೂ ತಿನ್ನುವೆ, ನಿಮಗೂ ತಿನ್ನಿಸುವೆʼ ಎನ್ನುವ ರಾಜ್ಯ ಸರ್ಕಾರ: ಪ್ರಿಯಾಂಕ್ ಖರ್ಗೆ ಆರೋಪ
ನಾನು ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರು ಅವರ ತತ್ವ, ಸಂವಿಧಾನದ ಸಂದೇಶವನ್ನು ಅನುಸರಿಸುವ ದಲಿತ. ಇಂಗ್ಲಿಷ್ ಮಾತನಾಡುವ ದಲಿತ ಎಂದರೆ ನಿಮಗೆ ಸಮಸ್ಯೆಯೇ? ಈ ಸಮಸ್ಯೆ ನಿಮಗೆ ಮಾತ್ರವೇ ಅಥವಾ ಇಡೀ ನಿಮ್ಮ ಪಕ್ಷಕ್ಕೆ ಇದೆಯೇ?. ದಲಿತರು ಶಿಕ್ಷಣದಿಂದ ದೂರವಿದ್ದು, ಚಾತುರ್ವರ್ಣ ವ್ಯವಸ್ಥೆಯಂತೆ ಹೇಳಿರುವಂತೆ ಇರಬೇಕೇ? ಚಿಕಾಗೋದಿಂದ ಚಿತ್ತಾಪುರವರೆಗೂ ನೀವು ಯಾವುದೇ ವೇದಿಕೆ ಸಜ್ಜು ಮಾಡಿ, ನೀವು ವಿಷಯ ಆಯ್ಕೆ ಮಾಡಿ, ನಾನು ಆ ಬಗ್ಗೆ ಮಾತನಾಡುತ್ತೇನೆ. ಈ ಸವಾಲು ಸ್ವೀಕರಿಸಲು ನೀವು ಸಿದ್ಧರಿದ್ದೀರಾ? ಇಬ್ಬರ ಸಾಮರ್ಥ್ಯ ಪರಿಕ್ಷೆಯಾಗಲಿ ಎಂದು ಸವಾಲು ಎಸೆದರು.
ನಿಮ್ಮ 2 ರೂಪಾಯಿ ಟ್ರೊಲ್‌ಗಳು ಬಾಡಿಗೆ ಭಾಷಣಕಾರರು, ನಿನ್ನೆ ಮೊನ್ನೆ ಸಂಸದರಾದವರು ನೆಹರು, ಮನಮೋಹನ್ ಸಿಂಗ್ ಅವರ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ನಾನು ನಿಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡಬಾರದೇ? ನಾವು ಕೇಳುವ ಸರಳ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರ ಇಲ್ಲ ಎಂದರೆ ನೀವು ವೈಯಕ್ತಿಕ ಟೀಕೆ ಮಾಡುತ್ತೀರಾ? ನೀವು ಎಷ್ಟೇ ವೈಯಕ್ತಿಕ ಟೀಕೆ ಮಾಡಿದರೂ ನಾನು ಪ್ರಶ್ನೆ ಮಾಡುವುದು ನಿಲ್ಲಿಸುವುದಿಲ್ಲ ಎಂದರು.
ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಮಾತನಾಡಿ, ಸಂಸದೀಯ ವ್ಯವಸ್ಥೆಯಲ್ಲಿ ಸರ್ಕಾರ ನಡೆಸುವವರು ಸಮಾಜ ಹಾಗೂ ಸಂಘಟನೆಗಳಿಂದ ಟೀಕೆಗಳು ಬಂದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಬಿಜೆಪಿ ಸ್ನೇಹಿತರು ಮನುವಾದದ ಮನಸ್ಥಿತಿಯಿಂದ ಹೊರಬಂದಿಲ್ಲ. ಹೀಗಾಗಿ ನಮ್ಮ ಶಾಸಕರನ್ನು ಅವರು ಕಾನ್ವೆಂಟ್ ದಲಿತ ಎಂದು ಹೇಳಿದ್ದಾರೆ. ಸಂಘ ಪರಿವಾರ, ಅದರ ಸಂಘಟನೆ, ಬಿಜೆಪಿ ಎಲ್ಲರೂ ಮನುವಾದದ ಮನಸ್ಥಿತಿಯಿಂದ ಹೊರಬಂದಿಲ್ಲ. ಅವರಿಗೆ ಯಾವ ದಲಿತರೂ ಮೇಲೆ ಬರಬಾರದು, ಕಾನ್ವೆಂಟ್ ಶಿಕ್ಷಣ ಪಡೆಯಬಾರದು, ಇತರ ಸಮಾಜದವರ ಜತೆ ಸರಿಸಮನಾಗಿ ಬೆಳೆಯಬಾರದು ಎಂಬ ಚಿಂತನೆ ಇದೆ ಎಂದು ಟೀಕಿಸಿದರು.
ಇದನ್ನೂ ಓದಿ | ನಿಮ್ಮ ಸ್ವಾರ್ಥಕ್ಕೆ ಜನರ ಚಡ್ಡಿ ಬಿಚ್ಚಬೇಡಿ: ಕಾಂಗ್ರೆಸ್ ವಿರುದ್ಧ HDK ಆಕ್ರೋಶ