ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಆರ್. ಅಶೋಕ್, ತಾವು ವಿದ್ಯುತ್ ಬಿಲ್ ಪಾವತಿ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ತಾಕತ್ ಇದ್ರೆ ಕರೆಂಟ್ ಫ್ಯೂಸ್ ಕಿತ್ತು ಹಾಕಲಿ ನೋಡೋಣ. ಅವರು ಎಲ್ಲಿ ಫ್ಯೂಸ್ ಕಿತ್ತು ಹಾಕ್ತಾರೋ ಅಲ್ಲಿಗೆ ನಾನೇ ಹೋಗ್ತೀನಿ. ನನಗೂ ಫ್ರೀ, ನಿನಗೂ ಫ್ರೀ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಹೀಗಾಗಿ ನಾನು ಕರೆಂಟ್ ಬಿಲ್ ಕಟ್ಟಲ್ಲ.
ಜನರು ಕೂಡ ಕರೆಂಟ್ ಬಿಲ್ ಕಟ್ಟಬೇಡಿ. ಮಹಿಳೆಯರು ಕೂಡ ಬಸ್ಸಿನಲ್ಲಿ ಟಿಕೆಟ್ ತಗೊಬೇಡಿ. ಒಂದು ವೇಳೆ ನೀವು ಕರೆಂಟ್ ಬಿಲ್ ಕಟ್ಟಿದರೆ, ಮಹಿಳೆಯರು ಟಿಕೆಟ್ ತೆಗೆದುಕೊಂಡರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಅಪಮಾನ ಮಾಡಿದಂತೆ.
ನಾವು ಶನಿವಾರದಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಅಲ್ಲಿ ಸಭೆ ಮೂಲಕ ಹೋರಾಟ ಮಾಡಿ ಈ ಸರ್ಕಾರಕ್ಕೆ ಚಳಿ ಜ್ವರ ಬಿಡಿಸುತ್ತೇವೆ. ಗ್ಯಾರಂಟಿಗಳಿಗೆ ಕಂಡಿಷನ್ ಹಾಕಿದರೂ ನಾವು ಹೋರಾಟ ಮಾಡುತ್ತೇವೆ. ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ನಾನು ಏನು ಕಡುಬು ತಿಂತಿದ್ದೀನಾ ಎಂದು ಈಗಾಗಲೇ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವರು ಅವರ ಪಾಡಿಗೆ ಹೋರಾಟ ಮಾಡುತ್ತಾರೆ. ನಮ್ಮದು ಒಂದು ರಾಷ್ಟ್ರೀಯ ಪಕ್ಷ, ನಾವು ನಮ್ಮ ಪಾಡಿಗೆ ಹೋರಾಟ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: HD Devegowda: ಜೆಡಿಎಸ್ ಆತ್ಮಾವಲೋಕನ ಸಭೆ; ಮತ್ತೆ ಪುಟಿದೇಳುವ ಪ್ರತಿಜ್ಞೆ; ಹೋರಾಟ ಗ್ಯಾರಂಟಿ ಅಂದ್ರು ಎಚ್‌ಡಿಕೆ