ತುಮಕೂರು: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಗಾದಿ ಫೈಟ್ ಶುರುವಾಗಿದೆ. ಪಕ್ಷದಲ್ಲಿ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಿಎಂ ರೇಸ್‌ನಲ್ಲಿದ್ದಾರೆ. ಈ ನಡುವೆ ಕಾರ್ಯಕ್ರಮವೊಂದರಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪರ ಮಾಜಿ ಎಂಎಲ್‌ಸಿ ರಮೇಶ್ ಬಾಬು ಬ್ಯಾಟ್ ಬೀಸಿದ್ದಾರೆ.
ಕೊರಟಗೆರೆ ಪಟ್ಟಣದಲ್ಲಿ ನಡೆದ ಬಲಿಜ ಜನಾಂಗದ ಜಾಗೃತಿ ಸಮಾವೇಶದಲ್ಲಿ ಮಾತನಾಡಿರುವ ರಮೇಶ್ ಬಾಬು, ಪರಮೇಶ್ವರ ಕೇವಲ ಕೊರಟಗೆರೆ ಕ್ಷೇತ್ರದ ಶಾಸಕರಲ್ಲ. ತುಮಕೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹೋಗುವ ಅವಕಾಶ ಇರುವ ವ್ಯಕ್ತಿಯಾಗಿದ್ದಾರೆ. ಅವರು ಮತ್ತೇ ರಾಜ್ಯದ ಅಧಿಕಾರ ಹಿಡಿಯುವ ಅವಕಾಶ ಇದೆ. ನಾನು ಬಹಳ ಪ್ರಜ್ಞಾಪೂರ್ವಕವಾಗಿಯೇ ಮಾತನಾಡುತ್ತಿದ್ದೇನೆ. ಈ ಹಿಂದೆಯೂ ಈ ಬಗ್ಗೆ ನಾನು ಮಾತನಾಡಿದ್ದೆ ಎಂದು ಪರಮೇಶ್ವರ್ ಅವರು ಸಿಎಂ ಆಗಬೇಕು ಎಂಬ ಬಯಕೆಯನ್ನು ಹೊರಹಾಕಿದ್ದಾರೆ.
ಪರಮೇಶ್ವರ್ ಅವರಿಗೆ ಮತ್ತೆ ರಾಜ್ಯದ ಅಧಿಕಾರ ಹಿಡಿಯುವ ಅವಕಾಶ ಇದೆ. ಹೀಗಾಗಿ ನಾನು ನಿಮಗೆ ವಿನಂತಿ ಮಾಡುತ್ತೇನೆ. ನಿಮ್ಮ ಶಕ್ತಿ ಕೇವಲ ನಿಮ್ಮ ಮತಕ್ಕೆ ಸೀಮಿತವಾಗಿರಬಾರದು. ಕನಿಷ್ಠ 5-10 ಮತವನ್ನು ಬೇರೆಯವರಿಂದ ಪರಮೇಶ್ವರ್‌ಗೆ ಹಾಕಿಸಬೇಕು. ನಾವು ಕೈವಾರ ತಾತಯ್ಯನ ಹೆಸರಲ್ಲಿ ಸಂಕಲ್ಪ ಮಾಡಬೇಕು. ಕನಿಷ್ಠ 10 ಮತವನ್ನಾದರೂ ಪರಮೇಶ್ವರ್‌ಗೆ ಹಾಕಿಸುತ್ತೇನೆ ಎಂದು ಸಂಕಲ್ಪ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದನ್ನೂ ಓದಿ | Inside Story: AICC ಅಧ್ಯಕ್ಷರಾದರೂ ಬದಲಾಗಲಿಲ್ಲ ಸೀನಿಯರ್ ಖರ್ಗೆ ʼಎಡ-ಬಲʼ ರಾಜಕಾರಣ
ಈ ಹಿಂದೆ ತಮಗೂ ಸಿಎಂ ಆಗುವ ಆಸೆ ಇದೆ ಎಂದು ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಇಂಗಿತ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ನಲ್ಲಿ 10 ಜನ ಸಿಎಂ ಆಕಾಂಕ್ಷಿಗಳಿದ್ದಾರೆ. ಅದರಲ್ಲೂ ನಾನು ಒಬ್ಬ. ಎರಡು ಬಾರಿ ಸಿಎಂ ಆಗುವ ಅವಕಾಶ ಕೈತಪ್ಪಿದೆ. ಅದೃಷ್ಟವಿದ್ದರೆ ಮುಂದಿನ ಬಾರಿಯಾದರೂ ಸಿಎಂ ಆಗುವೆ ಎಂಬ ವಿಶ್ವಾಸವಿದೆ ಎಂದು ಎಂದು ಹೇಳಿದ್ದರು. ಇದೀಗ ಡಾ.ಜಿ.ಪರಮೇಶ್ವರ್ ಮಾಜಿ ಎಂಎಲ್‌ಸಿ ರಮೇಶ್ ಬಾಬು ಬ್ಯಾಟ್ ಬೀಸಿರುವುದು ಕುತೂಹಲ ಮೂಡಿಸಿದೆ.
ಮೂರು ಬಾರಿ ಮಧುಗಿರಿ ಕ್ಷೇತ್ರದಿಂದ ವಿಧಾನಸಭೆಗೆ ಪ್ರವೇಶಿಸಿದ್ದ ಪರಮೇಶ್ವರ್ ಅವರು, ಕ್ಷೇತ್ರ ಪುನರ್ವಿಂಗಡಣೆ ಬಳಿಕ 2008ರಲ್ಲಿ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. ನಂತರ 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಅವರು ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಸುಮಾರು 18 ಸಾವಿರ ಮತಗಳಿಂದ ಜೆಡಿಎಸ್‌ನ ಸುಧಾಕರ್ ಲಾಲ್ ವಿರುದ್ಧ ಸೋತಿದ್ದರು, ಹೀಗಾಗಿ ಪರಮೇಶ್ವರ್ ಅವರಿಗಿದ್ದ ಸಿಎಂ ಆಗುವ ಅವಕಾಶ ಕೈತಪ್ಪಿತು. ಇದರಿಂದ ಅಂದು ಕಾಂಗ್ರೆಸ್‌ನಿಂದ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದನ್ನೂ ಓದಿ | Nandini vs Amul: ಒಂದು ದೇಶ-ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್: ಎಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸಿಎಂ ಕುರ್ಚಿಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಚುನಾವಣೆ ಸಮೀಪಿಸಿದ್ದರೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿ ಯಾರು ಎಂದು ಇನ್ನೂ ಘೋಷಿಸಿಲ್ಲ. ಕಾಂಗ್ರೆಸ್ ನಾಯಕರು ಮಾತ್ರ ತಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ, ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಹೇಳುತ್ತಿದ್ದಾರೆ. ಹೀಗಾಗಿ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.