Site icon Vistara News

K H Muniyappa | ಸಚಿವ ಸುಧಾಕರ್-ಮುನಿಯಪ್ಪ ಭೇಟಿ, ಬಿಜೆಪಿ ಸೇರ್ತಾರಾ ಮಾಜಿ ಸಂಸದ?

muniyapap

ಬೆಂಗಳೂರು: ಕೋಲಾರದ ಮಾಜಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಾಗಿರುವ ಕೆ.ಎಚ್.ಮುನಿಯಪ್ಪ (K H Muniyappa) ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆಂಬ ಸುದ್ದಿಗಳು ಕೆಲವು ದಿನಗಳ ಹಿಂದೆ ಹರಿದಾಡುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ, ಕೆ ಎಚ್ ಮುನಿಯಪ್ಪ ಅವರು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಮನೆಗೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನೊಂದಿಗೆ ಮುನಿಸುಕೊಂಡಿರುವ ಮುನಿಯಪ್ಪ ಬಿಜೆಪಿ ಸೇರುವ ಬಗ್ಗೆ ವದಂತಿಗಳಿವೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಮುನಿಯಪ್ಪ ಭೇಟಿ ಮಾಡಿದ್ದರು. ಇದಕ್ಕೂ ಮೊದಲು ಸುಧಾಕರ್ ಅವರನ್ನು ಮೀಟ್ ಆಗಿದ್ದರು. ಈಗ ಮತ್ತೆ ಸಚಿವ ಸುಧಾಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಬಿಜೆಪಿ ಸೇರುವ ವದಂತಿಗಳು ನಿಜವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಮುನಿಯಪ್ಪ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುಧಾಕರ್ ಅವರು, ನನಗೂ ಅವ್ರಿಗೆ(ಮುನಿಯಪ್ಪ) ವೈಯಕ್ತಿಕ ಸಂಬಂಧವಿದೆ. ಇಲ್ಲಿ ರಾಜಕೀಯ ಕಲ್ಪಿಸುವ ಅಗತ್ಯವೂ ಇಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ರಾಜಕೀಯ ಸಂಬಂಧವೂ ಇಲ್ಲ. ಎಲ್ಲಕ್ಕಿಂತ ಹೆಚ್ಚಿನದಾಗಿ, ಮುನಿಯಪ್ಪ ಅವರಂಥ ನಾಯಕರು ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷಕ್ಕೆ ಶಕ್ತಿ ಎಂಬುದರಲ್ಲಿ ಅನುಮಾನಗಳೇ ಇಲ್ಲಎಂದು ಅವರು ತಿಳಿಸಿದರು.

ಯಾವುದೋ ಖಾಸಗಿ ವಿಷಯವನ್ನು ಚರ್ಚಿಸುವುದಕ್ಕಾಗಿ ಅವರು ನನ್ನನ್ನು ಭೇಟಿಯಾಗಲು ಬಂದಿದ್ದರು. ನಾನೇನೂ ಭವಿಷ್ಯವಾಣಿಯನ್ನು ನುಡಿಯಲ್ಲ. ಮುಂದೆ ಏನಾಗುತ್ತೋ ಕಾದು ನೋಡೋಣ, ಎಲ್ಲ ಪಕ್ಷಗಳು ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇರುತ್ತವೆ. ಒಳ್ಳೆಯ ಪ್ರಭಾವಿ ನಾಯಕರು ಪಕ್ಷಕ್ಕೆ ಬಂದಾಗ ಬಲವಾಗುತ್ತದೆ ಎನ್ನುವುದಾದರೆ, ಯಾಕೆ ಈ ಕುರಿತು ಪ್ರಯತ್ನಿಸಬಾರದು. ಮುನಿಯಪ್ಪ ಅವರೊಬ್ಬರೇ ಅಲ್ಲ ನಾವು ಎಲ್ಲ ನಾಯಕರ ಜತೆ ಸಂಪರ್ಕದಲ್ಲಿದ್ದೇವೆ ಎಂದು ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ | ಗುಲಾಂ ನಬಿ ಆಜಾದ್‌ ಬಳಿಕ ಕೆ.ಎಚ್‌. ಮುನಿಯಪ್ಪ ಕಾಂಗ್ರೆಸ್‌ ಬಿಡ್ತಾರಾ?: ರಾಜಕೀಯ ವಲಯದಲ್ಲಿ ಬಿಸಿ ಚರ್ಚೆ

Exit mobile version