Site icon Vistara News

ಗಾಂಧಿ ಫ್ಯಾಮಿಲಿ ಹೆಸರಲ್ಲಿ ಆಸ್ತಿ ಮಾಡಿದ್ದೇವೆ, ಸೋನಿಯಾ ಋಣ ತೀರಿಸೋಣ ಎಂದ ರಮೇಶ್ ಕುಮಾರ್‌

Congress protest

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯದ ವಿಚಾರಣೆ ವಿರೋಧಿಸಿ ನಗರದ ಪ್ರೀಡಂ ಪಾರ್ಕ್‌ನಲ್ಲಿ ಗುರುವಾರ ಕಾಂಗ್ರೆಸ್‌ನಿಂದ ಬೃಹತ್‌ ಪ್ರತಿಭಟನೆ(Congress protest) ನಡೆಸಲಾಯಿತು. ಕಾಂಗ್ರೆಸ್‌ ನಾಯಕರ ವಿರುದ್ಧ ರಾಜಕೀಯ ದ್ವೇಷದಿಂದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪಕ್ಷದ ರಾಜ್ಯ ನಾಯಕರು ಕಿಡಿ ಕಾರಿದರು. ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಸೋನಿಯಾ ಗಾಂಧಿ ಕುಟುಂಬದ ಕುರಿತು ಹೇಳಿರುವ ಮಾತು ಸಂಚಲನ ಮೂಡಿಸಿದೆ.

ಶಾಸಕ, ಮಾಜಿ ಸ್ಪೀಕರ್ ಕೆ.ಆರ್‌. ರಮೇಶ್ ಕುಮಾರ್‌ ಮಾತನಾಡಿ, ದೇಶ ಉಳಿಯಬೇಕಾದರೆ ಕಾಂಗ್ರೆಸ್ ಉಳಿಯಬೇಕು. ಸಣ್ಣತನ, ನೀಚತನ ಹಾಗೂ ಚಾಡಿಕೋರತನ ಬಿಡೋಣ. ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ನಾವು ಸಾಕಷ್ಟು ಸಂಪಾದನೆ ಮಾಡಿಕೊಂಡಿದ್ದೇವೆ. ಮೂರು, ನಾಲ್ಕು ತಲೆಮಾರಿಗೆ ಆಗುವಷ್ಟು ಸಂಪಾದನೆ ಮಾಡಿಕೊಂಡಿದ್ದೇವೆ. ಈಗ ಅವರ ಋಣ ತೀರಿಸುವ ಸಮಯ ಬಂದಿದೆ. ಋಣ ತೀರಿಸಿಲ್ಲ ಎಂದರೆ, ತಿನ್ನುವ ಅನ್ನದಲ್ಲಿ ಹುಳ ಬೀಳುತ್ತದೆ ಎಂದು ಹೇಳಿದರು.

ಸೋನಿಯಾ ಗಾಂಧಿ ಅವರು ಕಾನೂನಿಗೆ ಮೀರಿದವರಾ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ನೆಹರೂ ಅವರು ಜೈಲಿಗೆ ಹೋಗಿ ಬಂದಿದ್ದರು. ಈಗ ಮಾತಾಡುತ್ತಿರುವವರ ಪೂರ್ವಿಕರು ಆರ್‌ಎಸ್‌ಎಸ್, ಹಿಂದು ಮಹಾಸಭಾ, ಜನಸಂಘದವರು. ಇವರು ಯಾರೂ ಸಹ ಜೈಲಿಗೆ ಹೋಗಿ ಬಂದಿಲ್ಲ. ಸೋನಿಯಾ ಗಾಂಧಿ ಅಧಿಕಾರವನ್ನು ತ್ಯಾಗ ಮಾಡಿದವರು, ಅಂತಹವರು ಅಕ್ರಮವಾಗಿ ಹಣ ಸಂಪಾದಿಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಸೋನಿಯಾ ಗಾಂಧಿ ಅವರಿಂದಲೇ ಕಾಂಗ್ರೆಸ್ ಸದೃಢವಾಗಿದೆ ಎಂದರು.

ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆದ ಇಡಿ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ. ಜನರಿಗೆ ತಪ್ಪು ಮಾಹಿತಿ ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾವು ಯಾರೂ ಕಾನೂನನ್ನು ಮೀರಿದವರಲ್ಲ. ಆದರೆ ತನಿಖಾ ಸಂಸ್ಥೆಗಳನ್ನು ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ದೇಶಕ್ಕೆ ಸಂವಿಧಾನ ಕೊಟ್ಟವರು ಕಾಂಗ್ರೆಸ್‌ನವರು. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಹಿಟ್ಲರ್ ಹೇಗೆ ಯಹೂದಿಗಳನ್ನು ಸಂಹಾರ ಮಾಡಿದ್ದನೋ ಹಾಗೆಯೇ ಮೋದಿ ಸರ್ಕಾರ ತಳ ಸಮುದಾಯವನ್ನು ದಮನ ಮಾಡಲು ಹೊರಟಿದೆ. ಬಿಜೆಪಿಗೆ ಸೇರಿದರೆ ಕೇಸ್ ಹಾಕಲ್ಲ ಎಂದು ಡಿ.ಕೆ. ಶಿವಕುಮಾರ್‌ಗೂ ಬೆದರಿಸಿದ್ದರು. ಸೋನಿಯಾ ಗಾಂಧಿ ಅವರು ಪ್ರಧಾನಿ ಪಟ್ಟ ತ್ಯಾಗ ಮಾಡಿದ್ದರು, ತ್ಯಾಗ ಮಾಡೋದು ತುಂಬ ಕಷ್ಟ ಎಂದರು.

ರಾಜಭವನಕ್ಕೆ ಮುತ್ತಿಗೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಇಲ್ಲದಿರುವ ಆರೋಪವನ್ನು ಸೃಷ್ಟಿ ಮಾಡಲಾಗಿದೆ. ಸುಖಾಸುಮ್ಮನೆ ಕಾಂಗ್ರೆಸ್ ನಾಯಕರಿಗೆ ತೊಂದರೆ ಕೊಡಲಾಗುತ್ತಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಇ.ಡಿ ಉಪಯೋಗಿಸಿಕೊಂಡು ಬಿಜೆಪಿ ಸರ್ಕಾರ ಇಷ್ಟು ತೊಂದರೆ ಕೊಡುವುದು ಸರಿಯಲ್ಲ. ಇದನ್ನು ಖಂಡಿಸಿ ರಾಜಭವನ ಮುತ್ತಿಗೆ ಹಾಕಿ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಬಿಜೆಪಿಯವರಿಗೆ ಭಯವಿದೆ, ಅವರ ವಿರುದ್ಧ ಜಿಎಸ್‌ಟಿ ಹೆಚ್ಚಳ, 40% ಕಮಿಷನ್ ಆರೋಪಗಳಿವೆ. ಇವುಗಳಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ನಮ್ಮ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ‌ ಎಂದು ಕಿಡಿಕಾರಿದರು.

ಇದನ್ನೂ ಓದಿ | President Election| ದ್ರೌಪದಿ ಮುರ್ಮು ವಿರುದ್ಧ ಕಾಂಗ್ರೆಸ್‌ ರಾಜ್ಯ ನಾಯಕರ ದೂರು

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಮಾತನಾಡಿ, ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ವಾಜಪೇಯಿ ಅವರು ರಾಜ ಧರ್ಮ ಪಾಲನೆ ಮಾಡಬೇಕು ಎಂದು ನರೇಂದ್ರ ಮೋದಿಗೆ ಸೂಚಿಸಿದ್ದರು. ಈಗ ನರೇಂದ್ರ ಮೋದಿ ಕೈಯಲ್ಲಿ ದೇಶದ ಆಡಳಿತ ಇದೆ. ಅಮಿತ್ ಶಾ ಗುಜರಾತ್‌ನಿಂದ ಗಡಿಪಾಡು ಆಗಿದ್ದರು, ಅವರ ಕೈಯಲ್ಲಿ ಗೃಹ ಖಾತೆ ಇದೆ. ನ್ಯಾಷನಲ್ ಹೆರಾಲ್ಡ್ ರಾಷ್ಟ್ರೀಯ ಹೋರಾಟದ ಪರಂಪರೆಯಾಗಿದೆ. ಬ್ರಿಟಿಷರು ಕ್ವಿಟ್ ಇಂಡಿಯಾ ಸಂದರ್ಭದಲ್ಲಿ ನ್ಯಾಷನಲ್ ಹೆರಾಲ್ಡ್‌ ನಿಷೇಧ ಮಾಡಿದ್ದರು. ಆದರೆ ಈಗ ಮೋದಿ, ಶಾ ಯಾವ ಸಾಮ್ರಾಜ್ಯ‌ಶಾಹಿ ನಿರ್ಮಾಣ ಮಾಡಲು ಹೊರಟಿದ್ದಾರೆ? ಇದು ದೇಶದ ಸ್ವಾತಂತ್ರ್ಯದ ವಿರುದ್ಧದ ಕುತಂತ್ರವಾಗಿದೆ ಎಂದರು.

ಮಾಜಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಕೇಂದ್ರದ ಜಿಜೆಪಿ ಸರ್ಕಾರ 2014ರಿಂದ ನ್ಯಾಷನಲ್ ಹೆರಾಲ್ಡ್ ಬೆಟ್ಟ ಅಗೆಯುತ್ತಿದೆ. ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಬಿಜೆಪಿಗೆ ಏನೂ ಸಿಕ್ಕಿಲ್ಲ. ಒಂದು ಇಲಿ ಕೂಡ ಇವರಿಗೆ ಸಿಕ್ಕಿಲ್ಲ. ಇ.ಡಿ.ಎಂಬ ಹೆಸರಿನಲ್ಲಿ ಸೀಳು ನಾಯಿಯನ್ನು ಛೂ ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ED ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಆರೋಪ ಮಾಡಲಾಗಿದೆ. ನ್ಯಾಷನಲ್ ಹೆರಾಲ್ಡ್‌ನ ಒಂದು ರೂಪಾಯಿ ಕೂಡ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ತೆಗೆದುಕೊಂಡಿಲ್ಲ ಎಂದರು.

ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಬಿಜೆಪಿಯವರು ನೀಚರು, ಭ್ರಷ್ಟರಾಗಿದ್ದು, ಧೈರ್ಯಗೆಡಿಸುವ ಕೆಲಸ ಮಾಡುತ್ತಿದ್ದಾರೆ‌. ಇದಕ್ಕೆಲ್ಲ ನಾವು ಹೆದರುವವರಲ್ಲ, ನಾವು ಭಾರತೀಯರು. ನಾವು ಭಯ ಪಡುತ್ತೇವೆ ಎಂದು ಭಾವಿಸಿದರೆ ಅದು ಕನಸು. ಇಡಿ ಅಸ್ತ್ರ ಬಳಸಿರುವುದು ಅವರ ಹೇಡಿತನ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಭಯಪಡಬೇಕು. ಸೋನಿಯಾ ಗಾಂಧಿ ಭಯ ಪಡುವ ಕುಟುಂಬದ ಸೊಸೆಯಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕುಟುಂಬದ ಸೊಸೆ ಎಂದರು.

ಮಾಜಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಸೋನಿಯಾ ಗಾಂಧಿ ಅವರಿಗೆ ಕಿರುಕುಳ ಕೊಡಲು ಇಡಿ ವಿಚಾರಣೆ ಮಾಡಲಾಗುತ್ತಿದೆ. ನ್ಯಾಷನಲ್ ಹೆರಾಲ್ಡ್‌ನಲ್ಲಿ ಯಾವುದೇ ಕೇಸ್ ಇಲ್ಲ. ಸೋನಿಯಾ ಗಾಂಧಿ ಅವರು ಪ್ರಧಾನಿ ಪಟ್ಟ ತ್ಯಜಿಸಿದ್ದವರು. ಮೋದಿ, ಅಮಿತ್‌ ಶಾ ಏಕೆ ಬಿಜೆಪಿ ಸಚಿವರ ಮೇಲೆ ಐಟಿ, ಇಡಿ ದಾಳಿ ಮಾಡಿಸಿಲ್ಲ? ಏಕೆಂದರೆ ಐಟಿ, ಇಡಿ ಬಿಜೆಪಿಯ ಅಂಗ ಸಂಸ್ಥೆಗಳಾಗಿವೆ ಎಂದು ಕಿಡಿ ಕಾರಿದರು.

ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ದೇಶದಲ್ಲಿ ಒಂದೇ ಪಕ್ಷ ಇರಬೇಕು ಎಂದು ಅವರು ತಿಳಿದಿದ್ದಾರೆ‌. ಆದರೆ ದೇಶಾದ್ಯಂತ ಬಿಜೆಪಿಗೆ ತಿರುಗೇಟು ನೀಡುವ ಶಕ್ತಿ ಕಾಂಗ್ರೆಸ್‌ಗೆ ಮಾತ್ರವಿದೆ. ಆಪರೇಷನ್‌ ಕಮಲದ ಮೂಲಕ ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಸ್ವಾತಂತ್ರ್ಯ ಪೂರ್ವ, ಆಧುನಿಕ ಭಾರತಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಆದರೆ ಬಿಜೆಪಿಯವರ ಕೊಡುಗೆ ಏನಿದೆ? ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿದೆ, ಮೋದಿಗೆ ಪ್ರಶ್ನೆ ಮಾಡಿದರೆ ಮಾಧ್ಯಮದವರನ್ನೂ ಜೈಲಿಗೆ ಹಾಕುತ್ತಾರೆ ಎಂದು ಕಿಡಿ ಕಾರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್‌, ಈಶ್ವರ್‌ ಖಂಡ್ರೆ, ಕಾಂಗ್ರೆಸ್ ಶಾಸಕರು, ಎಂಎಲ್‌ಸಿಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

ಇದನ್ನೂ ಓದಿ | ಇ ಡಿ ಕಚೇರಿಗೆ ತೆರಳಿದ ಸೋನಿಯಾ ಗಾಂಧಿ; ಇತ್ತ ಕಾಂಗ್ರೆಸ್‌ ನಾಯಕರ ತೀವ್ರ ಪ್ರತಿಭಟನೆ

Exit mobile version