Site icon Vistara News

Students Drown: ಗೋಕಟ್ಟೆಯಲ್ಲಿ ಮುಳುಗಿ ನಾಲ್ವರ ಸಾವು; ದೂರು ದಾಖಲಿಸಿಕೊಳ್ಳಲು ಮಕ್ಕಳ ಹಕ್ಕುಗಳ ಆಯೋಗ ತೀರ್ಮಾನ

Gokatte in tumkur

ತುಮಕೂರು: ಸಿದ್ಧಗಂಗಾ ಮಠದ ಸಮೀಪದ ಗೋಕಟ್ಟೆಯಲ್ಲಿ ಮುಳುಗಿ ನಾಲ್ವರ ಸಾವು ಪ್ರಕರಣವನ್ನು (Students Drown) ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಘಟನೆಯ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ತೀರ್ಮಾನ ಮಾಡಿದೆ.

ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದು, ತುಮಕೂರು ಜಿಲ್ಲೆ ಸಿದ್ಧಗಂಗಾ ಮಠದಲ್ಲಿನ ಗೋ ಕಟ್ಟೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ವಿಷಾದನೀಯ. ಇತ್ತೀಚೆಗೆ ಕೆರೆಕಟ್ಟೆ, ಬಾವಿ ಕೃಷಿಹೊಂಡಗಳಲ್ಲಿ ಮಕ್ಕಳು ಬಿದ್ದು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜವಾಬ್ದಾರರು ಈ ಕುರಿತು ಎಚ್ಚರಿಕೆ ವಹಿಸಬೇಕಿದೆ. ಇನ್ನು ಈ ಪ್ರಕರಣದ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Death News : ಹಾಸನದಲ್ಲಿ ಡಬಲ್‌ ಸಾವು; KSRP ಕಾನ್‌ಸ್ಟೇಬಲ್‌ ನಿಗೂಢ ಮೃತ್ಯು; ಹಾಸ್ಟೆಲ್‌ ಕ್ಲೀನಿಂಗ್‌ ಸ್ಟಾಫ್‌ ಆತ್ಮಹತ್ಯೆ

ಮೃತರ ಕುಟುಂಬಸ್ಥರಿಗೆ ಗೃಹ ಸಚಿವ ಪರಮೇಶ್ವರ್‌ ಸಾಂತ್ವನ

ಸಿದ್ಧಗಂಗಾ ಮಠಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸೋಮವಾರ ಭೇಟಿ ನೀಡಿ ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಇದೇ ವೇಳೆ ಘಟನಾ ಸ್ಥಳ ಪರಿಶೀಲಿಸಿ ಮಾತನಾಡಿದ ಗೃಹ ಸಚಿವರು, ಘಟನೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಸಿದ್ಧಗಂಗಾ ಮಠದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

2 ಲಕ್ಷ ರೂಪಾಯಿ ಪರಿಹಾರ

ಸರ್ಕಾರದಿಂದ ನಾಲ್ವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಕೊಡಲಾಗುತ್ತದೆ. ಗೋ ಕಟ್ಟೆ ಸುತ್ತಲೂ ಮುಳ್ಳು ತಂತಿ ಗ್ಯಾಲರಿ ಹಾಕಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಅಷ್ಟೊತ್ತಿಗೆ ಈ ಘಟನೆ ನಡೆದಿದೆ. ಈಗ ಗೋಕಟ್ಟೆ ಬಳಿ ಮಠದ ವಿದ್ಯಾರ್ಥಿಗಳು ಹೋಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ತಿಳಿಸಿದರು.

ಶ್ರೀಮಠದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಜಿಲ್ಲಾಸ್ಪತ್ರೆಯ ಶವಾಗಾರದ ಬಳಿ ಗೃಹ ಸಚಿವ ಪರಮೇಶ್ವರ್ ಅವರು ಭೇಟಿ ನೀಡಿದ ವೇಳೆ ಶ್ರೀ ಮಠದ ಆಡಳಿತ ಮಂಡಳಿ ವಿರುದ್ಧ ಮೃತರ ಕುಟುಂಬಸ್ಥರು ಆಕ್ರೋಶ ಹೊರಹಾಕಿದರು. ಘಟನೆಯ ಬಳಿಕ ಸಿದ್ಧಗಂಗಾ ಮಠದ ಆಡಳಿತ ಮಂಡಳಿ ಸರಿಯಾಗಿ ಸ್ಪಂದಿಸಿಲ್ಲ ಎಂದು ಗೃಹ ಸಚಿವರ ಮುಂದೆ ಮೃತರ ಕುಟುಂಬಸ್ಥರು ನೋವು ತೋಡಿಕೊಂಡರು.

ಮೃತದೇಹಗಳ ಹಸ್ತಾಂತರ

ಶಂಕರ್,‌ ಹರ್ಷಿತ್ , ಲಕ್ಷ್ಮಿ ಹಾಗೂ ಮಹದೇವಪ್ಪ ಮೃತದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ತಮ್ಮ ಸ್ವಗ್ರಾಮಗಳಿಗೆ ಮೃತದೇಹಗಳನ್ನು ಕುಟುಂಬಸ್ಥರು ತೆಗೆದುಕೊಂಡು ಹೊರಟರು. ತುಮಕೂರು ಗ್ರಾಮಾಂತರದ ಹೊನ್ನುಡಿಕೆ ಬಳಿಯ ಕಲ್ಲುಪಾಳ್ಯ ಗ್ರಾಮದ ಲಕ್ಷ್ಮೀ ಅವರು ಬೆಂಗಳೂರಿನ ಬಾಗಲಗುಂಟೆಯಲ್ಲಿ ವಾಸವಿದ್ದರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹೊಗೆರಹಳ್ಳಿ ಗ್ರಾಮದ ಶಂಕರ್, ರಾಮನಗರ ಜಿಲ್ಲೆ ಬೈರಮಂಗಲದ ಹರ್ಷಿತ್, ಯಾದಗಿರಿ ಜಿಲ್ಲೆ ಅಜಲಾಪುರ ಗ್ರಾಮದ ಮಹದೇವಪ್ಪ ಮೃತ ದುರ್ದೈವಿಗಳು. ಸ್ವಗ್ರಾಮಗಳಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ | Youth Drowned : ಮುರ್ಡೇಶ್ವರ ಕಡಲಿನಲ್ಲಿ ಈಜಲುಹೋದ ಒಬ್ಬ ನೀರುಪಾಲು, ಮತ್ತೊಬ್ಬ ಪಾರು

ಏನಿದು ಘಟನೆ?

ತುಮಕೂರಿನ ಕ್ಯಾತಸಂದ್ರದ ಸಿದ್ಧಗಂಗಾ ಮಠದ ಹಿಂಭಾಗದಲ್ಲಿ ಭಾನುವಾರ ಗೋಕಟ್ಟೆಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದರು. ಭಾನುವಾರವಾಗಿದ್ದರಿಂದ ಮಕ್ಕಳನ್ನು ಭೇಟಿಯಾಗಲು ಪೋಷಕರು ಮಠಕ್ಕೆ ಬಂದಿದ್ದರು. ಈ ವೇಳೆ ಕೆಲ ಮಕ್ಕಳು ಪಾಲಕರೊಂದಿಗೆ ಗೋಕಟ್ಟೆ ಸಮೀಪ ಹೋಗಿದ್ದರು.

ಗೋಕಟ್ಟೆಯ ದಡದಲ್ಲಿ ಕೂತು ಊಟ ಮಾಡುತ್ತಿದ್ದಾಗ ರಂಜಿತ್‌ ಎಂಬ ಬಾಲಕ ಕೈತೊಳೆಯಲು ಹೋದಾಗ ಆಯತಪ್ಪಿ ನೀರಿಗೆ ಬೀದ್ದಿದ್ದ. ಅವನನ್ನು ರಕ್ಷಿಸಲು ಮತ್ತಿಬ್ಬರು ಬಾಲಕರು ಹೋಗಿದ್ದರು. ಅವರು ಕೂಡ ಮುಳುಗುತ್ತಿದ್ದದ್ದನ್ನು ಕಂಡ ರಂಜಿತ್‌ ತಾಯಿ ನೀರಿಗೆ ಇಳಿದಿದ್ದರು. ನಂತರ ಆ ನಾಲ್ವರನ್ನು ಕಾಪಾಡಲು ಹೋದ ಮತ್ತೊಬ್ಬ ವ್ಯಕ್ತಿ ಕೂಡ ನೀರಿನಲ್ಲಿ ಮುಳುಗಿದ್ದ. ಈ ವೇಳೆ ರಂಜಿತ್‌ ಪ್ರಾಣಾಪಾಯದಿಂದ ಪಾರಾಗಿದ್ದ. ಆದರೆ, ಉಳಿದ ನಾಲ್ವರು ಮೃತಪಟ್ಟಿದ್ದರು.

ಮಾಗಡಿಯ ಶಂಕರ್ (12),‌ ಚಿಕ್ಕಮಗಳೂರಿನ‌ ಹರ್ಷಿತ್ (12), ಬೆಂಗಳೂರಿನ ಬಾಗಲಗುಂಟೆಯ ಲಕ್ಷ್ಮಿ (33) ಹಾಗೂ ಯಾದಗಿರಿ ಜಿಲ್ಲೆ ಅಫಜಲಪುರದ ಮಹದೇವಪ್ಪ (40) ಮೃತಪಟ್ಟಿದ್ದರು.

Exit mobile version