ಬೆಂಗಳೂರು: ಕಳೆದ ಎರಡು ಮೂರು ವಾರದಿಂದ ಸಿಲಿಕಾನ್ ಸಿಟಿಯ ಹೊರವಲಯಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲಲ್ಲಿ ಜನರ ಕಣ್ಣಿಗೆ, ಸಿಸಿ ಟಿವಿ ಕಣ್ಣುಗಳಿಗೆ ಬಿದ್ದಿರುವ ಚಿರತೆಗಳ ಓಡಾಟ ಈಗ ಆತಂಕ ಮೂಡಿಸಿದೆ.
ನಗರದ ಹೊರವಲಯದಲ್ಲಿ ಒಟ್ಟು ನಾಲ್ಕು ಚಿರತೆಗಳು ಓಡಾಡುತ್ತಿರುವ ಮಾಹಿತಿ ದೊರೆತಿದೆ. ಅದರಲ್ಲಿ ಒಂದು ಚಿರತೆ ಈಗಾಗಲೇ ಬೋನಿಗೆ ಬಿದ್ದಿದೆ. ನೆಲಮಂಗಲ, ತುರಹಳ್ಳಿ ಫಾರೆಸ್ಟ್, ದೇವನಹಳ್ಳಿ ತಾಲೂಕಿನ ತರಬಹಳ್ಳಿ, ನಂದಿ ಬೆಟ್ಟದ ಚೆನ್ನಾಪುರ ಕಡೆ ಚಿರತೆ ಓಡಾಟ ನಡೆದಿದೆ.
ನೆಲಮಂಗಲ ತಾಲೂಕಿನ ಶ್ರೀನಿವಾಸಪುರದ ತೋಟದ ಮನೆಯೊಂದರಲ್ಲಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಸೋಲದೇವನಹಳ್ಳಿ, ಯಂಟಗಾನಹಳ್ಳಿ, ಸೊಂಡೆಕೊಪ್ಪ ಭಾಗದಲ್ಲಿ ಸಂಚರಿಸಿದೆ. ಮೇಕೆ, ಕುರಿಗಳನ್ನು ಹೊತ್ತೊಯ್ದಿದೆ. ಬ್ಯಾಡರಹಳ್ಳಿ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ದಾಳಿ ನಡೆಸಿ 2 ಕುರಿ, 2 ಮೇಕೆ ಕೊಂದು ನಾಲ್ಕು ಕುರಿಗಳಿಗೆ ಗಾಯ ಮಾಡಿದೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡನೇ ಬಾರಿಯೂ ತೋಟದ ಮನೆ ಮೇಲೆ ದಾಳಿ ನಡೆಸಿತ್ತು.
ಬೆಂಗಳೂರು ಉತ್ತರ ತಾಲೂಕಿನ ತುರಬನಹಳ್ಳಿಯಲ್ಲಿ ಐದು ದಿನಗಳ ಹಿಂದೆ ಬೋನಿಗೆ ಚಿರತೆಯೊಂದು ಬಿದ್ದಿತ್ತು. ನಂತರ ಮತ್ತೆ ಏರ್‌ಪೋರ್ಟ್ ರಸ್ತೆಯ ಐಟಿಸಿ ಫ್ಯಾಕ್ಟರಿಯಲ್ಲಿ ಪ್ರತ್ಯಕ್ಷವಾಗಿತ್ತು. ದೊಡ್ಡಬಳ್ಳಾಪುರದ ಚಿನ್ನಾಪುರದ ನಂದಿ ಗಿರಿಧಾಮದ ತಪ್ಪಲಿನಲ್ಲಿ ಹಸುವೊಂದರ ಮೇಲೆ ದಾಳಿ ನಡೆಸಿತ್ತು.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಚಿರತೆಗಳ ನರಬಲಿ ಕಳವಳಕಾರಿ
ಕೆಂಗೇರಿ ಬಳಿಯ ತುರಹಳ್ಳಿ ಫಾರೆಸ್ಟ್ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದೆ. ಈಗಾಗಲೇ ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿ ಎಸ್ಕೇಪ್ ಆಗಿದ್ದು, ತುರಹಳ್ಳಿ ಕಾಡಿಗೆ ನುಗ್ಗಿದೆ. ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ದೇವನಹಳ್ಳಿ ಬಳಿಯ ಸಾದಹಳ್ಳಿ ಸಮೀಪ ಐಟಿಸಿ ಪ್ಯಾಕ್ಟರಿಯಲ್ಲಿ ಚಿರತೆ ಓಡಾಟದ ಹಿನ್ನೆಲೆಯಲ್ಲಿ ಫ್ಯಾಕ್ಟರಿಯಲ್ಲಿ ಬೋನ್ ಅಳವಡಿಸಲಾಗಿದೆ.
ಕೆಂಗೇರಿ ಬಳಿಯ ಕೋಡಿಪಾಳ್ಯ, ತುರಹಳ್ಳಿ ಸುತ್ತಮುತ್ತ ಒಬ್ಬೊಬ್ಬರೇ ಓಡಾಡದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಜೀಪ್‌ನಲ್ಲಿ ರೌಂಡ್ ಹಾಕಿ ಅರಿವು ಮೂಡಿಸಲಾಗುತ್ತಿದೆ. ರಾತ್ರಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ತುರಹಳ್ಳಿ ಸುತ್ತಮುತ್ತಲ ಗೋಡೌನ್‌ಗಳ ಬಳಿಯೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಹೆಚ್ಚಾಗಿ ನಾಯಿಗಳನ್ನು ಸಾಕುವುದು ಸೂಕ್ತವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಾಣಿಗಳಿಗಾಗಿ ಉರುಳು ಹಾಕಿದ್ದ ಗೋಡೌನ್ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ | ವಿಸ್ತಾರ TOP 10 NEWS | ರಾಜ್ಯದಲ್ಲಿ ಚಿರತೆ ಆತಂಕದಿಂದ, ಹೊಸ ವರ್ಷಕ್ಕೆ ವಿದ್ಯುತ್ ದರ ಇಳಿಕೆವರೆಗಿನ ಪ್ರಮುಖ ಸುದ್ದಿಗಳಿವು