Site icon Vistara News

Students Drown: ಗೋ ಕಟ್ಟೆಯಲ್ಲಿ ಮುಳುಗಿ ನಾಲ್ವರ ಸಾವು; ರೀಲ್ಸ್‌ ಹುಚ್ಚಿಗೆ ನಡೆಯಿತು ದುರಂತ

Gokatte at tumkur

ತುಮಕೂರು: ಗೋ ಕಟ್ಟೆಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿರುವ ಘಟನೆ ನಗರದ ಕ್ಯಾತಸಂದ್ರದ ಸಿದ್ಧಗಂಗಾ ಮಠದ ಹಿಂಭಾಗದಲ್ಲಿ ನಡೆದಿದೆ. ಮೊದಲಿಗೆ ಗೋ ಕಟ್ಟೆಯಲ್ಲಿ ಈಜಲು ಹೋಗಿದ್ದ ಮಠದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋದ ತಾಯಿ‌ ಹಾಗೂ ಮತ್ತಿಬ್ಬರು ಬಾಲಕರು ಮುಳುಗಿದ್ದಾರೆ. ಈ ಮೂವರನ್ನು ರಕ್ಷಿಸಲು ಹೋದ ಮಹದೇವಪ್ಪ ಎಂಬಾತ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಾಗಡಿಯ ಶಂಕರ್ (12),‌ ಚಿಕ್ಕಮಗಳೂರಿನ‌ ಹರ್ಷಿತ್ (12), ಬೆಂಗಳೂರಿನ ಬಾಗಲಗುಂಟೆಯ ಲಕ್ಷ್ಮಿ (33) ಹಾಗೂ ಯಾದಗಿರಿ ಜಿಲ್ಲೆ ಅಫಜಲಪುರದ ಮಹದೇವಪ್ಪ (40) ಮೃತರು. ಘಟನೆಗೆ ಮತ್ತೊಂದು ತಿರುವು ಸಿಕ್ಕಿದ್ದು, ಈಜಲು ಹೋಗಿದ್ದಾಗ ವಿದ್ಯಾರ್ಥಿ ನೀರಿಗೆ ಬಿದ್ದಿಲ್ಲ. ವಿದ್ಯಾರ್ಥಿ ರಂಜಿತ್ ತಾಯಿ ಲಕ್ಷ್ಮಿ ಸೆಲ್ಫಿ ಹಾಗೂ ರೀಲ್ಸ್ ಹುಚ್ಚಿಗೆ ದುರಂತ ನಡೆದಿದೆ. ಗೋ ಕಟ್ಟೆ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Mother and son death : ಪುಟ್ಟ ಮಗನನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ; ಅವಳಿಗಿತ್ತು ಅದೊಂದು ನೋವು

ಗೋ ಕಟ್ಟೆ ಪಕ್ಕದಲ್ಲಿ ಊಟ ಮಾಡುತ್ತಿದ್ದಾಗ ರಂಜಿತ್‌ ಎಂಬ ಬಾಲಕ ಕೈತೊಳೆಯಲು ಹೋಗಿದ್ದಾಗ ನೀರಿಗೆ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಶಂಕರ್‌ ಮತ್ತು ಹರ್ಷಿತ್ ಹೋಗಿದ್ದಾರೆ. ಅವರು ಕೂಡ ಮುಳುಗುತ್ತಿದ್ದಾಗ ರಂಜಿತ್‌ ತಾಯಿ ನೀರಿಗಿಳಿದಿದ್ದಾರೆ. ಈ ನಾಲ್ವರನ್ನು ಅಪಾಯದಿಂದ ಪಾರು ಮಾಡಲು ಮಹದೇವಪ್ಪ ಹೋಗಿದ್ದರು. ಆದರೆ, ಈ ಪೈಕಿ ನಾಲ್ವರು ಮೃತಪಟ್ಟಿದ್ದು, ರಂಜಿತ್‌ ಎಂಬ ಬಾಲಕ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version