ಶ್ರೀರಂಗಪಟ್ಟಣ : ದೇವರ ಕಾರ್ಯಕ್ಕೆ ಆಹ್ವಾನ ನೀಡಲು ಹೋಗುತ್ತಿದ್ದ ವೇಳೆ ಕಾರು ನಾಲೆಗೆ ಬಿದ್ದು ನಾಲ್ವರು ಮಹಿಳೆಯರು ಮೃತಪಟ್ಟ ಘಟನೆ ಇಲ್ಲಿನ ದೊಡ್ಡಮುಲಗೂಡು ಮತ್ತು ಗಾಮನಹಳ್ಳಿ ಬಳಿ ನಡೆದಿದೆ. ಮಂಡ್ಯ ಜಿಲ್ಲೆಯಲ್ಲಿ ತಡೆಗೋಡೆ ಇಲ್ಲದ ನಾಲೆಗೆ ಕಾರು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.
ಟಿ.ನರಸೀಪುರ ತಾಲೂಕು ಗೊರವನಹಳ್ಳಿ ಗ್ರಾಮದ ದೊಡ್ಡಯ್ಯ ಎಂಬುವರ ಪತ್ನಿ ಮಹದೇವಮ್ಮ, ಅವರ ಹತ್ತಿರದ ಸಂಬಂಧಿಕರಾದ ರೇಖಾ, ಸಂಜನಾ, ಮಹದೇವಿ ನೀರಿನಲ್ಲಿ ಮುಳುಗಿ ಮೃತಪಟ್ಟವರು. ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ಗ್ರಾಮದ ಹೊರವಲಯದ ತುರುಗನೂರು ಬ್ರಾಂಚ್ನ ವಿಶ್ವೇಶ್ವರಯ್ಯ ಉಪ ನಾಲೆಗೆ ಕಾರು ಉರುಳಿ ಬಿದ್ದಿದೆ. ದೊಡ್ಡಮುಲಗೂಡು ಮತ್ತು ಗಾಮನಹಳ್ಳಿ ನಡುವೆ ಶನಿವಾರ ರಾತ್ರಿ 8.30ರ ಸಮಯದಲ್ಲಿ ಈ ಅವಘಡ ಸಂಭವಿಸಿದೆ.
ನಾಲೆಗೆ ಕಾರು ಬೋರಲಾಗಿ ಬಿದ್ದಿದೆ. ಹೀಗಾಗಿ ಮಹಿಳೆಯರಿಗೆ ಹೊರಗೆ ಬರಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕಾರು ಚಾಲಕ ಮನೋಜ್ ಪ್ರಾಣಾಪಯದಿಂದ ಪಾರಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ನಾಲ್ವರು ಮಹಿಳೆಯರ ಮೃತದೇವನ್ನು ನಾಲೆ ನೀರಿನಿಂದ ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನೂ ಓದಿ : Child Death : ಇದೆಂಥಾ ದುರ್ವಿಧಿ; ಜೋಕಾಲಿ ಹಗ್ಗವೇ ಕುತ್ತಿಗೆಗೆ ಬಿಗಿದು ಹೆಣ್ಣು ಮಗುವಿನ ದುರ್ಮರಣ
ಮಹದೇವಮ್ಮ ಅವರ ಮನೆಯವರು ಆದಿಚುಂಚನಗಿರಿಯಲ್ಲಿ ದೇವತಾ ಕಾರ್ಯ ಇಟ್ಟುಕೊಂಡಿದ್ದರು. ಅದಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಗೊರವನಹಳ್ಳಿಯಿಂದ ದೊಡ್ಡಮಲಗೂಡಿಗೆ ಹೋಗುತ್ತಿದ್ದರು. ನಾಲೆಗೆ ತಡೆಗೋಡೆ ಇಲ್ಲದ ಕಾರಣ ಕತ್ತಲಲ್ಲಿ ಚಾಲಕನ ಕಣ್ತಪ್ಪಿ ಕಾರು ನಾಲೆಗೆ ಉರುಳಿಬಿದ್ದಿದೆ. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ತಾಲೂಕು ತಿಬ್ಬನಹಳ್ಳಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಗುರುವಾರ ಕಾರು ಮಗುಚಿ ಬಿದ್ದು ಶಿವಳ್ಳಿ ಗ್ರಾಮದ ಲೋಕೇಶ್ ಮೃತಪಟ್ಟಿದ್ದನು. ಇದಾದ ಎರಡು ದಿನಗಳಲ್ಲೇ ಮತ್ತೆ ನಾಲ್ವರು ಮೃತಪಟ್ಟಿರುವುದು ಜಿಲ್ಲೆಯಲ್ಲಿ ತಡೆಗೋಡೆ ಇಲ್ಲದ ನಾಲೆಗಳ ಅಪಾಯಕಾರಿ ದುಸ್ಥಿತಿಗೆ ಸಾಕ್ಷಿಯಾಗಿದೆ.