Site icon Vistara News

ಸ್ನೇಹಿತೆಯರಿಗೆ ಸ್ನೇಹಿತೆಯಿಂದ ಸಾಲ ಕೊಡಿಸಿದಳು; ಅವರು ಕಟ್ಟಿಲ್ಲ, ಸಾಲ ಕೊಟ್ಟವಳು ಬಿಟ್ಟಿಲ್ಲ: ವಿಷ ಸೇವಿಸಿದ್ದವಳು ಸಾವು

fraud by borrowers Woman dies after consuming poison after being harassed by lenders

ಕೋಲಾರ: ಮಧ್ಯಸ್ಥಿಕೆ ವಹಿಸಿ ಸ್ನೇಹಿತೆಯರಿಗೆ ಬಡ್ಡಿಗೆ ಸಾಲ ಕೊಡಿಸಿದ ಮೇಲೆ ಅವರು ಸಾಲದ ಹಣ ಕಟ್ಟದೆ ತೊಂದರೆ ಅನುಭವಿಸಿದ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ (ಜ.೨೮) ಮೃತಪಟ್ಟಿದ್ದಾರೆ.

ಪದ್ಮ (36) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ಪ್ರಕರಣ ನಡೆದಿದೆ. ಪದ್ಮ ತನ್ನ ಸ್ನೇಹಿತೆಯರಿಗೆ ಮಧ್ಯಸ್ಥಿಕೆ ವಹಿಸಿ ಬಡ್ಡಿಗೆ ಹಣ ಕೊಡಿಸಿದ್ದರು. ಇವರು ಸ್ನೇಹಿತೆ ವರಲಕ್ಷ್ಮಿ ಬಳಿ ಭಾಗ್ಯ ಹಾಗೂ ಸಮ್ರತಿ ಎನ್ನುವವರಿಗೆ 4 ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ಸಾಲಗಾರರಿಂದ ಬಡ್ಡಿ ಹಣ ಕೊಡಿಸುವಂತೆ ವರಲಕ್ಷ್ಮಿ ಪದ್ಮ ಅವರಿಗೆ ನಿಂದಿಸಿದ್ದರು ಎನ್ನಲಾಗಿದೆ.

ಇತ್ತ ಸಾಲ ಪಡೆದವರೂ ಸಮಯಕ್ಕೆ ಸರಿಯಾಗಿ ಕಟ್ಟದೆ ಸತಾಯಿಸುತ್ತಿದ್ದರು. ಇದರಿಂದ ಮನನೊಂದ ಪದ್ಮಾ, ತಮ್ಮ ಆತ್ಮಹತ್ಯೆಗೆ ಭಾಗ್ಯಮ್ಮ, ಸಮ್ರತಿ, ಪ್ರೇಮ ಕಾರಣವೆಂದು ವಿಷದ ಮಾತ್ರೆಯನ್ನು ಸೇವಿಸಿದ್ದಾರೆ. ಇದಕ್ಕೂ ಮುನ್ನ ವಿಡಿಯೊ ಮಾಡಿ ನಡೆದಿರುವ ವೃತ್ತಾಂತವನ್ನು ತಿಳಿಸಿದ್ದರು.

ಇದನ್ನೂ ಓದಿ: Road Accident: ಹೆಮ್ಮಾಡಿ ಬಳಿ ಬಸ್‌ನಿಂದ ಕೆಳಗೆ ಬಿದ್ದ ಯುವಕ; ಸೊಂಟದ ಮೇಲೆ ಚಕ್ರ ಹರಿದು ಸಾವು

ವಿಷ ಸೇವನೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ ಕೋಲಾರದ ಆರ್‌.ಎಲ್.‌ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪದ್ಮ ಮೃತಪಟ್ಟಿದ್ದಾರೆ. ಪದ್ಮ ಸಾವಿನ ಸುದ್ದಿ ಕೇಳಿ ಆರೋಪಿಗಳಾದ ಭಾಗ್ಯ, ಸಮ್ರತಿ ಹಾಗೂ ಪ್ರೇಮ ಪರಾರಿಯಾಗಿದ್ದಾರೆ. ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version