Site icon Vistara News

Sudha Murty: ಅಮೆರಿಕದಲ್ಲಿ ಕಾರ್ಯಕ್ರಮ ಎಂದು ಸುಧಾ ಮೂರ್ತಿ ಹೆಸರಲ್ಲಿ ವಂಚನೆ; ಇಬ್ಬರ ವಿರುದ್ಧ ಕೇಸ್‌

Sudha Murty

People Will Talk: Sudha Murty's Advice To Rishi Sunak, Akshata Murty

ಬೆಂಗಳೂರು: ಅಮೆರಿಕದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಕಾರ್ಯಕ್ರಮಕ್ಕೆ ಇನ್ಫೋಸಿಸ್‌ ಪ್ರತಿಷ್ಠಾನದ (Infosys Foundation) ಸುಧಾ ಮೂರ್ತಿ ಅವರು ಆಗಮಿಸಲಿದ್ದಾರೆ ಎಂದು ಹೇಳಿಕೊಂಡು, ಸುಧಾ ಮೂರ್ತಿ (Sudha Murty) ಅವರ ಫೋಟೊ ಬಳಸಿ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ವಿರುದ್ಧ ಸುಧಾ ಮೂರ್ತಿ ಅವರ ಆಪ್ತ ಸಹಾಯಕಿ (Personal Assistant) ಮಮತಾ ಸಂಜಯ್‌ ದೂರು ದಾಖಲಿಸಿದ್ದಾರೆ.

ಸುಧಾ ಮೂರ್ತಿ ಅವರ ಹೆಸರು, ಫೋಟೊ ಬಳಸಿಕೊಂಡು ವಂಚನೆ ಮಾಡಿದ ಹಿನ್ನೆಲೆಯಲ್ಲಿ ಶ್ರುತಿ ಹಾಗೂ ಲಾವಣ್ಯ ಎಂಬುವರ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಮಮತಾ ಸಂಜಯ್‌ ಅವರು ದೂರು ನೀಡಿದ್ದಾರೆ. ಕಂಪನಿಯಲ್ಲಿ ಪರಿಶೀಲನೆ ನಡೆಸಿದಾಗ ಸುಧಾ ಮೂರ್ತಿ ಅವರ ಹೆಸರು ಬಳಸಿಕೊಂಡು ಜನರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಕೇಸ್‌ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ದಾಖಲಾದ ಎಫ್‌ಐಆರ್‌ ಪ್ರತಿ

ಏನಿದು ಪ್ರಕರಣ?

ಅಮೆರಿಕದಲ್ಲಿ ಕನ್ನಡ ಕೂಟ ಆಫ್‌ ನಾರ್ತನ್‌ ಕ್ಯಾಲಿಫೋರ್ನಿಯಾ (KKNC) ವತಿಯಿಂದ ಕಳೆದ ಏಪ್ರಿಲ್‌ನಲ್ಲಿ 50ನೇ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಸುಧಾ ಮೂರ್ತಿ ಅವರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂಬುದಾಗಿ ಇ-ಮೇಲ್‌ ಮೂಲಕ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ ಎಂದು ಸುಧಾ ಮೂರ್ತಿ ಅವರು ಇ-ಮೇಲ್‌ ಮೂಲಕ ತಿಳಿಸಿದ್ದರು. ಆದರೆ, ಕೆಕೆಎನ್‌ಸಿ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರುತಿ ಹಾಗೂ ಲಾವಣ್ಯ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Sudha Murty: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಿ ಶ್ಲಾಘಿಸಿದ ಸುಧಾ ಮೂರ್ತಿ

ಸುಧಾ ಮೂರ್ತಿ ಅವರು ಅಮೆರಿಕಕ್ಕೆ ಆಗಮಿಸಲಿದ್ದಾರೆ. ಮೀಟ್‌ ಆ್ಯಂಡ್‌ ಗ್ರೀಟ್‌ ವಿತ್‌ ಡಾ.ಸುಧಾ ಮೂರ್ತಿ (Meet And Greet With Dr. Sudha Murty) ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇಬ್ಬರು ಆರೋಪಿಗಳು ಜನರನ್ನು ವಂಚಿಸಿದ್ದಾರೆ. ಒಂದು ಟಿಕೆಟ್‌ಗೆ 40 ಡಾಲರ್ (ಸುಮಾರು 3,300 ರೂ.) ಪಡೆದು ವಂಚಿಸಲಾಗಿದೆ. ಸುಧಾ ಮೂರ್ತಿ ಕಚೇರಿ ಹೆಸರಿನಲ್ಲಿ, ಸುಧಾ ಮೂರ್ತಿ ಅವರ ಫೋಟೊ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ. ಹಾಗಾಗಿ, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸುಧಾ ಮೂರ್ತಿ ಅವರ ಆಪ್ತ ಸಹಾಯಕಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಜಯನಗರ ಠಾಣೆಯಲ್ಲಿ ಐಟಿ ಕಾಯ್ದೆಯ 66 C, 66 D ಸೆಕ್ಷನ್ ಹಾಗೂ ಐಪಿಸಿ 419, 420 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

Exit mobile version